Ugadi Festival 2023: ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕ್ಕರೆ ನಾಡಿನಲ್ಲಿ ಭರ್ಜರಿ ಸಿದ್ಧತೆ
ಯುಗಾದಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಗಾದರೆ ಸಕ್ಕರೆ ನಾಡು ಮಂಡ್ಯದಲ್ಲಿ ಯುಗಾದಿ ಹಬ್ಬದ ಸಂಭ್ರಮಕ್ಕೆ ಯಾವ ರೀತಿ ತಯಾರಿ ನಡೆಸಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮಂಡ್ಯ, ಮಾರ್ಚ್, 21: ಯುಗಾದಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಿಲ್ಲೆಯ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿದೆ. ವಸಂತಾಗಮವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜಿಲ್ಲೆಯ ಜನರು ಭರದ ಸಿದ್ಧತೆ ನಡೆಸಿದ್ದಾರೆ. ನಮ್ಮ ಸಂಪ್ರಾದಾಯದ ಹೊಸ ವರ್ಷಕ್ಕೆ ಹೊಸ ಬಟ್ಟೆ ಖರೀದಿಯಲ್ಲಿ ಜನರು ಕುಟುಂಬದವರೊಂದಿಗೆ ಕಾರ್ಯನಿರತರಾಗಿದ್ದಾರೆ.
ಹಬ್ಬದ ಮುನ್ನಾ ದಿನವಾದ ಮಂಗಳವಾರ ನಗರದ ಪೇಟೆಬೀದಿ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲವೂ ಜನಜಂಗುಳಿಯಿಂದ ತುಂಬಿ ತುಳುಕುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಮಾರುಕಟ್ಟೆಯಲ್ಲಿ ಹಣ್ಣು, ಹೂವು, ತರಕಾರಿ ಮಾರಾಟ ಜೋರಾಗಿಯೇ ನಡೆದಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು ಜನರಿಂದ ತುಂಬಿ ತುಳುಕಿದ್ದವು. ಮಹಿಳೆಯರು, ಮಕ್ಕಳೊಂದಿಗೆ ಅಂಗಡಿಗಳಿಗೆ ಬಂದು ಹೊಸ ಬಟ್ಟೆ ಖರೀದಿಯಲ್ಲಿ ತೊಡಗಿದ್ದರು. ಇಷ್ಟವಾದ ಬಟ್ಟೆಗಳನ್ನು ಖರೀದಿಸಿದ ಸಂತೋಷ ಮಕ್ಕಳಲ್ಲಿದ್ದರೆ, ಮಹಿಳೆಯರು ಹೊಸ ಸೀರೆಗಳನ್ನು ಖರೀದಿಸಿದ ಸಂಭ್ರಮದಲ್ಲಿದ್ದರು. ಜನರನ್ನು ಸೆಳೆಯಲು ಬಟ್ಟೆ ಅಂಗಡಿಯವರು ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವುದರಲ್ಲಿ ಕಾರ್ಯನಿರತರಾಗಿದ್ದರು.

ಮಾವಿನ ಎಲೆಗೆ ಬೇಡಿಕೆ ಏಕೆ?
ವಾಪಾರಿಗಳು ನಗರದ ಪೇಟೆ ಬೀದಿ, ಮಾರುಕಟ್ಟೆಗೆ ತೆರಳುವ ರಸ್ತೆ, ವಿ.ವಿ.ರಸ್ತೆಗಳಲ್ಲಿ ಮಾವಿನ ಎಲೆಗಳನ್ನಯ ರಾಶಿ ಹಾಕಿಕೊಂಡು ವ್ಯಾಪಾರದಲ್ಲಿ ಮುಳುಗಿಹೋಗಿದ್ದರು. ಯುಗಾದಿ ಹಬ್ಬದ ದಿನ ಮನೆಯ ಬಾಗಿಲಿಗೆ ತೋರಣವಾಗಿ ಅಲಂಕರಿಸಲ್ಪಡುವ ಮಾವಿನ ಸೊಪ್ಪಿಗೆ ಎಲ್ಲೆಡೆ ಭರ್ಜರಿ ಬೇಡಿಕೆ ಇದೆ. ಇನ್ನು ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ ಬೆಲೆ ಎಂದಿನಂತೆ ಸಾಮಾನ್ಯವಾಗಿತ್ತು.

ಯಾವ ಹೂವಿನ ಬೆಲೆ ಎಷ್ಟಿದೆ?
ಸೇವಂತಿಗೆ ಮತ್ತು ಮಲ್ಲಿಗೆ ಪ್ರತಿ ಮಾರು 100 ರಿಂದ 120 ರೂವರೆಗೆ ಮಾರಾಟ ಮಾಡಲಾಗಿದೆ. ಬಿಡಿ ಗುಲಾಬಿ, ಸೇವಂತಿಗೆ 100 ಗ್ರಾಂಗೆ 25 ರೂಪಾಯಿಗೆ ಮಾರಾಟ ಮಾಡಲಾಗಿದೆ. ಇನ್ನು ಹಣ್ಣುಗಳಲ್ಲಿ ಪ್ರತಿ ಕೆ.ಜಿ. ಸೇಬಿಗೆ 180 ರೂ., ಕೆ.ಜಿ. ಕಿತ್ತಳೆಗೆ 80 ರೂ., ಕೆ.ಜಿ. ದಾಳಿಂಬೆ-160 ರೂ., ಕೆ.ಜಿ. ದ್ರಾಕ್ಷಿ-60 ರೂ., ಮೋಸಂಬಿ-80 ರೂ., ಕೆ.ಜಿ. ಮಿಕ್ಸ್ ಹಣ್ಣಿಗೆ 140 ರೂಪಾಯಿನಿಂದ 150 ರೂಪಾಯಿವರೆಗೆ ದರ ನಿಗದಿ ಮಾಡಲಾಗಿತ್ತು.

ತರಕಾರಿ ದರದ ವಿವರ ಇಲ್ಲಿದೆ
ಹಾಗೆಯೇ ತರಕಾರಿಗೂ ಸಾಕಷ್ಟು ಬೇಡಿಕೆ ಇದ್ದರೂ, ಬೆಲೆ ಮಾಮೂಲಿಯಂತಿತ್ತು. ಕೆ.ಜಿ. ಮಿಕ್ಸ್ ತರಕಾರಿ 50 ರೂಪಾಯಿ, ಕೆ.ಜಿ. ಕ್ಯಾರೆಟ್ 30 ರೂಪಾಯಿ, ಗೆಡ್ಡೆಕೋಸು 30 ರೂಪಾಯಿ, ಕೆ.ಜಿ. ಬದನೆಕಾಯಿ 20 ರೂಪಾಯಿ, ಕೆ.ಜಿ. ಬೆಂಡೆಕಾಯಿ 60 ರೂಪಾಯಿ, ಹುರುಳಿಕಾಯಿ 50 ರಿಂದ 60 ರೂಪಾಯಿಯಂತೆ ಮಾರಾಟ ಮಾಡಲಾಗಿತ್ತು.
ಯುಗಾದಿ ಹಬ್ಬದಲ್ಲಿ ಹಿರಿಯರಿಗೆ ಎಡೆ ಇಡುವ ಪದ್ಧತಿಯನ್ನೂ ಹಲವರು ಇನ್ನು ಅನುಸರಿಸಿಕೊಂಡು ಬಂದಿದ್ದಾರೆ. ಅದರಂತೆಯೇ ಮಾರುಕಟ್ಟೆಗಳಲ್ಲಿ ಎಡೆ ಸಾಮಾನು, ಅರಿಶಿನ-ಕುಂಕುಮ, ಧೂಪದ ಸಾಮಾನುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಹೀಗೆ ಸಕ್ಕರೆ ನಾಡಿನ ಜನತೆ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಯುಗಾದಿ ಹಬ್ಬಕ್ಕೆ ಭರ್ಜರಿ ಸಿದ್ಧತೆ
ಒಟ್ಟಾರೆಯಾಗಿ ಯುಗಾದಿ ಹಬ್ಬವನ್ನು ಭಾರತದಲ್ಲಿ ಚಾಚು ತಪ್ಪದೇ ಹಿಂದಿನ ಸಂಪ್ರಾದಾಯದ ಪ್ರಕಾರವೇ ಮಾವಿನ ತೋರಣಗಳನ್ನು ಮನೆ ಬಾಗಿಲಿಗೆ ಕಟ್ಟುವ ಮೂಲಕ ಆಚರಣೆ ಮಾಡುತ್ತಾರೆ. ನಂತರ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ, ಚಂದ್ರನನ್ನು ನೋಡಿದ ನಂತರ ಬೇವು ಬೆಲ್ಲ ಹಂಚಿವ ಪದ್ಧತಿ ಇದೆ. ಈ ಬೇವು-ಬೆಲ್ಲವನ್ನು ಸವಿಯಲು ಜನರು ಕಾತರದಿಂದ ಕಾಯುತ್ತಿರುತ್ತಾರೆ.

ಹಳೆಯ ಸಂಪ್ರದಾಯದಂತೆ ಹಬ್ಬ ಆಚರಣೆ
ಹಾಗೆಯೇ ಬೇವು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹಿರಿಯರು ಆಶೀರ್ವದಿಸುವ ಸಂಪ್ರದಾಯ ಈಗಲೂ ಇದೆ. ಜೊತೆಗೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವು ಕಡೆ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವ ಪದ್ಧತಿಯೂ ಕೂಡ ಹಿಂದಿನಿಂದ ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗೆ ಯುಗಾದಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ.












Click it and Unblock the Notifications