ಮಳವಳ್ಳಿಯಲ್ಲಿ ಅತ್ಯಾಚಾರ ಪ್ರಕರಣ; ನ್ಯಾಯಾಲಯಕ್ಕೆ 638 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಮಂಡ್ಯ, ಅಕ್ಟೋಬರ್, 27: ಮಳವಳ್ಳಿಯ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂತರಾಜು ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಮಳವಳ್ಳಿ ಉಪ ವಿಭಾಗದ ಡಿವೈಎಸ್‌ಪಿ ನವೀನ್‌ಕುಮಾರ್ ನೇತೃತ್ವದ ತಂಡಕ್ಕೆ ಒಪ್ಪಿಸಲಾಗಿತ್ತು. ಕೇವಲ 15 ದಿನಗಳಲ್ಲೇ ಆರೋಪಿ ಕಾಂತರಾಜು ವಿರುದ್ಧ ನ್ಯಾಯಾಲಯಕ್ಕೆ 638 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ಕಳೆದ ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಆರೋಪಿ ಕಾಂತರಾಜು ತಾನು ನಡೆಸುತ್ತಿದ್ದ ಟ್ಯೂಷನ್‌ಗೆ ಬರುವಂತೆ ಹೇಳಿದ್ದಾನೆ. ನಂತರ 10 ವರ್ಷ ವಯಸ್ಸಿನ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ನೀರಿನ ಸಂಪಿಗೆ ಆಕರಯ ಶವವನ್ನು ಬಿಸಾಡಿ ಪರಾರಿಯಾಗಿದ್ದ.

ಪೊಲೀಸರ ದಿಕ್ಕು ತಪ್ಪಿಸಿದ್ದ ಆರೋಪಿ
ಈ ಕಿರಾತಕ ಪೊಲೀಸರ ವಿಚಾರಣೆ ವೇಳೆಯೂ ದಿಕ್ಕು ತಪ್ಪಿಸಿದ್ದ. ಈ ಬಗ್ಗೆ ತನಿಖೆ ನಡೆಸಿದ್ದ ಡಿವೈಎಸ್‌ಪಿ ನವೀನ್‌ಕುಮಾರ್ ನೇತೃತ್ವದ ವಿಶೇಷ ಪೊಲೀಸರ ತಂಡ ಸಮಗ್ರ ತನಿಖೆ ಪೂರೈಸಿತ್ತು. ಸಮಗ್ರ ತನಿಖೆ ಪೂರೈಸಿದ 15 ದಿನಗಳಲ್ಲೇ ನ್ಯಾಯಾಲಯಕ್ಕೆ ಆರೋಪು ವಿರುದ್ಧ 638 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷ ಎನ್. ಯತೀಶ್ ತಿಳಿಸಿದ್ದಾರೆ. ಪೊಲೀಸರ ಕಾರ್ಯವನ್ನು ಶ್ಲಾಘಿಸಿರುವ ಅಪರ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು, ಪೊಲೀಸ್ ಅಧಿಕಾರಿಗಳ ತಂಡಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.

ಜಿಲ್ಲೆಯ ಪೊಲೀಸರಿಗೆ ಎಡಿಜಿಪಿ ಅಭಿನಂದನೆ
ಜಿಲ್ಲೆಯ ಮಳವಳ್ಳಿಯಲ್ಲಿ ನಡೆದ 10 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಅವರು, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಘಟನೆ ನಡೆದ 14 ದಿನಗಳಲ್ಲಿ ಚಾರ್ಜ್‌ಶೀಟ್ ಆಗಿದೆ. ಇದಕ್ಕಾಗಿ ಮಂಡ್ಯ ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳು. ತ್ವರಿತವಾಗಿ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನ ಮಾಡಲು ಬೆಂಬಲಿಸಿದ ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ, ಗೃಹಸಚಿವ ಮತ್ತು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಿಗೆ ಕೃತಜ್ಞತೆಗಳು ಎಂದು ತಿಳಿಸಿದ್ದರು.












Click it and Unblock the Notifications