Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಇರಲಿ ಎಂದು ಒತ್ತಾಯ
ಮಂಡ್ಯದಲ್ಲಿ ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈಗಾಗಲೇ ಸಮ್ಮೇಳನಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರಕ್ಕೆ ಮಾತ್ರ ಅವಕಾಶ ಎನ್ನಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಕಾರಣ, ಈ ಬಾರಿ ಬಾಡೂಟವೂ ಇರಲಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ.
ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಬರುವವರಿಗೆ ಊಟದ ವಿಚಾರದಲ್ಲಿ ತಾರತಮ್ಯ ಆಗಬಾರದು, ಬಾಡೂಟ - ಬಾಡಿಲ್ಲದೂಟ ಎರಡೂ ಇರಲಿ ಎಂದು ಕೆಲವು ಒತ್ತಾಯಿಸಿದ್ದಾರೆ. ಮಂಡ್ಯ ಜನತೆ ಸೋಷಿಯಲ್ ಮೀಡಿಯಾದಲ್ಲಿ ಬೃಹತ್ ಅಭಿಯಾನ ಆರಂಭಿಸಿದ್ದು, ಇದಕ್ಕೆ ಸಾಕಷ್ಟು ಬೆಂಬಲ ಕೂಡ ವ್ಯಕ್ತವಾಗುತ್ತಿದೆ.

ಬಾಡೂಟ ಅಭಿಯಾನಕ್ಕೆ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಕೂಡ ರಚನೆ ಮಾಡಿಕೊಳ್ಳಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಪ್ರಗತಿಪರರು ಈ ಗ್ರೂಪ್‌ನಲ್ಲಿದ್ದು, ಸದಸ್ಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಅಭಿಯಾನಕ್ಕೆ ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ 'ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಇರಲಿ' ಎನ್ನುವ ಪೋಸ್ಟರ್ ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವಿವಾದಕ್ಕೆ ಕಾರಣವೇನು?
ಮಾಂಸಾಹಾರ ಬೇಕು ಎನ್ನುವ ಅಭಿಯಾನ ಆರಂಭವಾಗಲೂ ಕಾರಣ ಅದೊಂದು ನಿಯಮ. ಹೌದು, ಮಳಿಗೆಗಳಲ್ಲಿ ಧೂಮಪಾನ, ಮಧ್ಯಪಾನದ ಜೊತೆ ಮಾಂಸಾಹಾರ ನಿಷಿದ್ಧ ಎಂದು ನಿರ್ಬಂಧ ವಿಧಿಸಿರುವುದು ಈಗ ವಿರೋಧಕ್ಕೆ ಕಾರಣವಾಗಿದೆ. ಊಟ ಅವರ ಇಚ್ಛೆ ಕನ್ನಡ ಸಾಹಿತ್ಯ ಸಮ್ಮೇಳನ ಯಾವುದೋ ಒಂದು ವರ್ಗಕ್ಕೆ ಸೀಮಿತವಾದುದಲ್ಲ, ಸಸ್ಯಾಹಾರ ಜೊತೆಗೆ ಮಾಂಸಾಹಾರ ಇದ್ದರೆ ಏನು ಸಮಸ್ಯೆ ಎಂದು ಪ್ರಶ್ನೆ ಮಾಡಲಾಗುತ್ತಿದೆ.
ಮತ್ತೊಂದು ಕಡೆ ಸಾಹಿತ್ಯ ಸಮ್ಮೇಳನಕ್ಕೆ ಬರುವುದು ಕನ್ನಡ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮಾಂಸಾಹಾರ ಸೇವನೆ ಮಾಡುವುದಕ್ಕಲ್ಲ ಎಲ್ಲದರಲ್ಲೂ ವಿವಾದ ಮಾಡಲು ಪ್ರಯತ್ನ ಮಾಡುವುದೇಕೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯದ ವಿಚಾರದ ಬಗ್ಗೆ ಚರ್ಚೆ ಮಾಡಬೇಕಾದ ಕಡೆ ಬಾಡೂಟ, ಬಾಡಿಲ್ಲದ ಊಟದ ಬಗ್ಗೆ ಚರ್ಚೆ ಮಾಡಿದರೆ ಸಾಹಿತ್ಯ ಸಮ್ಮೇಳನಕ್ಕೆ ಅರ್ಥವೇನಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಬಾಡೂಟ ಬೇಕು ಅಭಿಯಾನ ಮುಂದುವರೆದಿದ್ದು ಆಯೋಜಕರು ಏನು ತೀರ್ಮಾನ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications