Election Result: ಎನ್‌ಡಿಎ ಸರ್ಕಾರ ರಚಿಸುತ್ತಾ? ಹೆಚ್‌ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ

ಇದು ನನ್ನ ಗೆಲುವಲ್ಲ, ಜಿಲ್ಲೆಯ ಜನರ ಗೆಲುವು. ನಾನು ಈ ಚುನಾವಣೆಯಲ್ಲಿ ಪ್ರಚಾರ ಮಾಡಿಲ್ಲ. ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರ ಶ್ರಮದಿಂದ ಗೆಲುವು ಸಿಕ್ಕಿದೆ ಎಂದು ನೂತನ ಸಂಸದ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಕುಮಾರ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಯ ಋಣವನ್ನು ನಾನು ಹೊತ್ತಿದ್ದೇನೆ. ಭಗವಂತ ಕೊಟ್ಟ ಅವಕಾಶವನ್ನು ಬಳಸಿಕೊಂಡು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತೇನೆ ಎಂದರು.

NDA to Form Government HD Kumaraswamy s Reaction to Lok Sabha 2024 Results

ಜಿಲ್ಲೆಯ ಜನರ ನಿರೀಕ್ಷೆಗಳು ಬಹಳ ಇವೆ. ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದ ಅವರು, ಎಲ್ಲ ಆಯಾಮಗಳಿಂದಲೂ ನನಗೆ ಗೆಲುವು ತಂದುಕೊಟ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯ ಜನತೆ ನನ್ನನ್ನು ಪಕ್ಷಾತೀತವಾಗಿ ಗೆಲ್ಲಿಸಿದ್ದಾರೆ. ಬೇರೆ ಪಕ್ಷದ ಮುಖಂಡರೂ ಸಹಕರಿಸಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಮಂಡ್ಯ, ರಾಮನಗರ ಜನ ರಾಜಕೀಯವಾಗಿ ನನಗೆ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.

ಕೇಂದ್ರದಿಂದ ರಾಜ್ಯದ ನಿರೀಕ್ಷೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ನನಗೆ ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಇತ್ತು. ಆದ್ದರಿಂದಲೇ ನಾನು ಇಲ್ಲಿ ಠಿಕಾಣಿ ಹೂಡಲಿಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಬೇಕಿತ್ತು. ಅದರಂತೆ ನಾನು ರಾಜ್ಯದ ಜಿಲ್ಲೆಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದೇನೆ. ನನ್ನ ನಿರೀಕ್ಷೆ 25 ಸ್ಥಾನ ಗೆಲ್ಲುವ ಗುರಿ ಇತ್ತು. ಆದರೆ 19 ಸ್ಥಾನ ಬಂದಿರುವುದು ನೋವು ತರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಯತ್ನ

ನಾನು ಮಂತ್ರಿಯಾಗುವುದು ಮುಖ್ಯವಲ್ಲ. ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಬ್ರಿಟೀಷರ ಕಾಲದಿಂದಲೂ ಕಾವೇರಿ ಸಮಸ್ಯೆ ಇದೆ. ಅದಕ್ಕೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ದೇವೇಗೌಡರು ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನೂ ಸ್ವೀಕರಿಸಿ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಎನ್‌ಡಿಎ ಸರ್ಕಾರ ರಚನೆ

ಈ ಚುನಾವಣೆಯಲ್ಲಿ ಎನ್‌ಡಿಎಗೆ ಕಡಿಮೆ ಸ್ಥಾನ ಬಂದಿರಬಹುದು. ಆದರೆ ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ. ಇಂಡಿಯಾ ಒಕ್ಕೂಟದವರು ಕಸರತ್ತು ಮಾಡುತ್ತಿರಬಹುದು. ಆದರೆ ಅವರ ಪ್ರಯತ್ನ ಫಲ ನೀಡುವುದಿಲ್ಲ. ನಾಳೆ ದೆಹಲಿಯಲ್ಲಿ ಸಭೆ ನಡೆಯಲಿದ್ದು, ನನ್ನನ್ನೂ ಸಭೆಗೆ ಆಹ್ವಾನಿಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ವಿರುದ್ಧ ವ್ಯಂಗ್ಯ

ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯನೋ ಅದೇ ರೀತಿ ಕುಮಾರಸ್ವಾಮಿ ಸೋಲೋದೂ ಅಷ್ಟೇ ಸತ್ಯ ಎಂದಿದ್ದರು. ಈಗ ಸೂರ್ಯ ಚಂದ್ರ ಹುಟ್ಟೋಕೆ ಸರ್ಕಾರ ಆದೇಶ ಕೊಡುತ್ತೋ ಇಲ್ಲವೋ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಅವರನ್ನು ಕುಮಾರಸ್ವಾಮಿ ಹರಕೆಯ ಕುರಿ ಮಾಡಿದ್ದಾರೆ ಎಂದು ಟೀಕಿಸಿದ್ದರು. ಇವತ್ತು ಯಾರು ಹರಕೆಯ ಕುರಿಯಾಗಿದ್ದಾರೆ ಎಂಬುದು ಫಲಿತಾಂಶದಿಂದ ತಿಳಿದಿದೆ ಎಂದು ತಿರುಗೇಟು ನೀಡಿದರು.

ಸುರೇಶ್ ಗೆಲುವಿಗೆ ಜೆಡಿಎಸ್ ಕಾರಣ

2019ರಲ್ಲಿ ಡಿ.ಕೆ. ಸುರೇಶ್ ಗೆಲುವಿಗೆ ಜೆಡಿಎಸ್ ಕಾರಣ. ಜೆಡಿಎಸ್ ಸಹಕಾರವೇ ಅವರ ಹಿಂದಿನ ಎರಡು ಚುನಾವಣೆಗಳ ಗೆಲುವಾಗಿತ್ತು. ನಮ್ಮ ಪಕ್ಷವನ್ನು ಸರ್ವನಾಶ ಮಾಡಲು ಹೊರಟಿದ್ದರು. ಅದಕ್ಕೆ ಜನರೇ ಉತ್ತರ ನೀಡಿದ್ದಾರೆ ಎಂದು ಜರಿದರು.

ಕೇವಲ ಮಂಡ್ಯ-ರಾಮನಗರ ಮಾತ್ರ ನನ್ನ ಕರ್ಮಭೂಮಿಯಲ್ಲ. ಇಡೀ ಕರ್ನಾಟಕವೇ ನನ್ನ ಕರ್ಮಭೂಮಿ. ರಾಜ್ಯದ ಎಲ್ಲೇ ಸಮಸ್ಯೆಗಳು ತಲೆದೋರಿದರೂ ನಾನು ಹೋರಾಟಕ್ಕಿಳಿಸಲು ಸಿದ್ಧನಿದ್ದೇನೆ. ಅಲ್ಲಿನ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+