ಕೆರಗೋಡು ಹನುಮಧ್ವಜ ವಿವಾದ: ಮಂಡ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣ ವಿಫಲವಾಯಿತು. ಕೇವಲ ಬೈಕ್ ರ್‍ಯಾಲಿಗಷ್ಟೇ ಸೀಮಿತವಾಗಿತ್ತು.
ಕೆರಗೋಡು ಗ್ರಾಮದ ರಂಗಮೈದಾನದಲ್ಲಿ ಸ್ಥಾಪಿಸಿದ್ದ 108 ಅಡಿ ಧ್ವಜಸ್ಥಂಭದಲ್ಲಿ ಹಾರಿಸಲಾಗಿದ್ದ ಹನುಮಧ್ವಜವನ್ನು ತೆರವುಗೊಳಿಸಿದ ಸರ್ಕಾರ, ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಹನುಮಧ್ವಜ ಹಾರಿಸುವಂತೆ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಒತ್ತಾಯವಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಕೆರಗೋಡು ಬಂದ್‌ಗೆ ಕರೆ ನೀಡಲಾಗಿತ್ತು.

ಶ್ರೀರಾಮ ಭಜನಾ ಮಂಡಳಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿಫಲವಾಗಿದ್ದು, ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿಗೆ ಮಾತ್ರ ಸೀಮಿತವಾಗಿತ್ತು. ಕೆರಗೋಡು ಗ್ರಾಮದಲ್ಲಿ ಬಂದ್ ಯಶಸ್ವಿಯಾಗಿದೆ.
ಎಂದಿನಂತಿದ್ದ ಜನ ಜೀವನ
ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರೆ ವಾಣಿಜ್ಯ ಚಟುವಟಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದವು. ಜಿಲ್ಲಾ ವಾಣಿಜ್ಯ ಮಂಡಳಿ ಬಂದ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಕಾರಣ ವರ್ತಕರು ಅಂಗಡಿಗಳನ್ನು ಬಂದ್ ಮಾಡದೆ ವ್ಯಾಪಾರ ವಹಿವಾಟು ನಡೆಸಿದರು.
ಆಟೋ, ಕಾರುಗಳು, ಬಸ್ಸುಗಳ ಸಂಚಾರ ಎಂದಿನಂತಿತ್ತು. ಯಾವುದೇ ಚಟುವಟಿಕೆಗಳಿಗೂ ತೊಂದರೆಯಾಗಲಿಲ್ಲ. ನಗರದಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲೇ ಮುಂದುವರಿದಿದ್ದು ಕಂಡುಬಂತು.
ಬಂದ್‌ನಿಂದಾಗಿ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುವ ಪರಿಣಾಮ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತದೆ. ಈ ಮಧ್ಯೆ ಸಮಾನ ಮನಸ್ಕರು ಫೆ. 7ರಂದು ಬಂದ್ ಮಾಡುವುದಾಗಿ ತಿಳಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಎರಡೂ ಸಂಘಟನೆಗಳ ಕಾರ್ಯಕರ್ತರನ್ನು ಕರೆದು ಚರ್ಚಿಸಿ ಬಂದ್ ಕೈಬಿಡುವಂತೆ ಮನವಿ ಮಾಡಿದ್ದರು. ಸಮಾನ ಮನಸ್ಕರು ಬಂದ್ ಕೈಬಿಡುವುದಾಗಿ ಹಿಂದೆ ಸರಿದಿದ್ದರು. ಆದರೆ ಹಿಂದೂ ಸಂಘಟನೆಗಳವರು ಬಂದ್ ಮಾಡುವುದಾಗಿ ತಿಳಿಸಿದ್ದರು. ನಂತರ ಬಂದ್‌ಗೆ ಬಿಜೆಪಿ ಬೆಂಬಲ ಇಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂದ್ ವಿಫಲವಾಗಿದೆ ಎಂದು ಹೇಳಲಾಗಿದೆ.
ಶ್ರೀರಾಮ ಭಜನಾ ಮಂಡಳಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್‌ನ ನೂರಾರು ಮಂದಿ ಕಾರ್ಯಕರ್ತರು ಕೆರಗೋಡು ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್‍ಯಾಲಿ ಮೂಲಕ ಮಂಡ್ಯ ನಗರದ ರೈಲು ನಿಲ್ದಾಣದ ಬಳಿ ಇರುವ ವೀರಾಂಜನೇಯಸ್ವಾಮಿ ದೇವಾಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಬಿಗಿ ಬಂದೋಬಸ್ತ್
ಹಿಂದೂ ಸಂಘಟನೆಗಳು ಮಂಡ್ಯ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರ್‍ಯಾಲಿ ಬರುವ ಮಾರ್ಗದಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ನಂದ ಸರ್ಕಲ್, ಮಹಾವೀರ ವೃತ್ತ, ಜೆ.ಸಿ. ವೃತ್ತ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸಶಸ್ತ್ರ ಪೊಲೀಸ್ ಹಾಗೂ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು. ಶಾಸಕ ಪಿ. ರವಿಕುಮಾರ್ ಗಣಿಗ ಅವರ ಬಂದೀಗೌಡ ಬಡಾವಣೆಯ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ನಿವಾಸದ ಸುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.












Click it and Unblock the Notifications