KRS Dam: ಕೆಆರ್‌ಎಸ್‌ಗೆ 55,600 ಕ್ಯೂಸೆಕ್ಸ್ ಒಳಹರಿವು, ಭರ್ತಿಗೆ ಕೆಲವೇ ಅಡಿ ಬಾಕಿ; ನೀರು ಹೊರಬಿಡಲು ಸಿದ್ಧತೆ
ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಾಗುತ್ತಿರುವುದು ಈ ಭಾಗದ ರೈತರ ಜೀವನಾಡಿ ಕೃಷ್ಣರಾಜ ಸಾಗರಕ್ಕೆ ಜೀವಕಳೆ ತಂದಿದೆ. ಭಾರಿ ಪ್ರಮಾಣದಲ್ಲಿ ಒಳಹರಿವು ಇರುವ ಕಾರಣ ಕೆಆರ್ ಎಸ್ ಭರ್ತಿಯಾಗುವ ಹಂತ ತಲುಪಿದ್ದು, ನೀರು ಹೊರಬಿಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಹೇಮಾವತಿ ಜಲಾಶಯಕ್ಕೆ 38,800 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, ಹಾರಂಗಿ ಜಲಾಶಯಕ್ಕೆ 15,500 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಕೆಆರ್ ಎಸ್ ಜಲಾಶಯದ ಒಳಹರಿವು 55,600 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ಜಲಾಶಯ ಭರ್ತಿಗೆ ದಿನಗಣನೆ ಶುರುವಾಗಿದೆ.

ಜಲಾಶಯ ಭರ್ತಿಯಾಗುವ ತಲುಪಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಕಾವೇರಿ ನದಿ ಪಾತ್ರದ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಸೂಚನೆ ಕೊಟ್ಟಿದೆ.
ಅಧಿಕಾರಿಗಳ ಆದೇಶದಲ್ಲಿ ಏನಿದೆ?
ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ, ಕೃಷ್ಣರಾಜ ಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕೃಷ್ಣರಾಜಸಾಗರದಿಂದ 10,000 ದಿಂದ 25,000 ಕ್ಯೂಸೆಕ್ಸ್ ನೀರು ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಪ್ರಮಾಣ ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಈ ಮೂಲಕ ಕೋರಲಾಗಿದೆ.
ತಮಿಳುನಾಡಿಗೆ 1 ಲಕ್ಷ ಕ್ಯೂಸೆಕ್ಸ್ ನೀರು?
ಕಬಿನಿ ಜಲಾಶಯದ ಒಳಹರಿವು ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದು ಸದ್ಯ 60,000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ನುಗು ಜಲಾಶಯದಿಂದ ಕೂಡ 7500 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಮಳೆ ಇದೇ ರೀತಿ ಮುಂದುವರೆದು ಕೆಆರ್ ಎಸ್‌ನಿಂದ ಕೂಡ ನೀರು ಹೊರಬಿಟ್ಟರೆ 1 ಲಕ್ಷ ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈ ಪ್ರಮಾಣದ ನೀರು ಹೊರಬಿಟ್ಟರೆ ನದಿ ಪಾತ್ರದಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗುವ ಭೀತಿಯಿದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications