Government Employee: ಸರ್ಕಾರಿ ನೌಕರರ ಹಾಜರಾತಿ, ಮಾಹಿತಿ ವಿವರ
ಬೆಂಗಳೂರು, ಡಿಸೆಂಬರ್ 17: ಸಕ್ಕರೆ ನಾಡು ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20ರ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ರಾಜ್ಯ ಸರ್ಕಾರಿ ನೌಕರರಿಗೆ ಹಾಜರಾತಿ ಕುರಿತು ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಈ ಬಾರಿ ಎಲ್ಲಾ ಹಾಜರಾತಿ ವ್ಯವಸ್ಥೆಯನ್ನು ಡಿಜಿಟಲ್‌ಗೊಳಿಸಲಾಗಿದೆ.
ಉಪ ವಿಭಾಗಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿಗಳು ನೋಂದಣಿ ಸಮಿತಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಸರ್ಕಾರಿ ನೌಕರರ ಹಾಜರಾತಿ ಕುರಿತು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 20ರ ಶುಕ್ರವಾರ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗಲಿದ್ದು, ನಾಡೋಜ ಡಾ. ಗೊ. ರು. ಚನ್ನಬಸಪ್ಪ ಅಧ್ಯಕ್ಷರು.

ಸರ್ಕಾರಿ ನೌಕರರ ಹಾಜರಾತಿ ಮಾಹಿತಿ: ಉಪ ವಿಭಾಗಾಧಿಕಾರಿಗಳು ಸರ್ಕಾರಿ ನೌಕರರ ಹಾಜರಾತಿ ಕುರಿತು ಮಾಹಿತಿ ನೀಡಿದ್ದು, ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 20-12- 2024 ರಿಂದ ದಿನಾಂಕ 22-12-2024ರ ತನಕ ನಡೆಯಲಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಸರ್ಕಾರಿ ನೌಕರರು ಸ್ಥಳದಲ್ಲಿಯೇ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು ಸ್ಥಳದಲ್ಲಿಯೇ ಸಮ್ಮೇಳನಕ್ಕೆ ಆಗಮಿಸಿರುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಸಹಿಯ ಸಹಿತ ಹಾಜರಾತಿಯನ್ನು ಡಿಜಿಟಲ್ ಮೂಲಕ ಅವರ ವಾಟ್ಸ್ ಆಪ್ ಅಥವಾ ಇ-ಮೇಲ್‌ಗೆ ನೀಡಲಾಗುವುದು.
ಆದ್ದರಿಂದ ಸ್ಥಳದಲ್ಲಿ ನೋಂದಾಯಿಸಿಕೊಳ್ಳದ ಸರ್ಕಾರಿ ನೌಕರರಿಗೆ ಮ್ಯಾನ್ಯೂಯಲ್ (Manual) ಮೂಲಕ ಹಾಜರಾತಿಯನ್ನು ನೀಡಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ದಿನಾಂಕ 20-12-2024 ರಿಂದ ದಿನಾಂಕ 22-12-2024ರಂದು ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸರ್ಕಾರಿ ನೌಕರರು ಸ್ಥಳದಲ್ಲಿಯೇ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಹಾಜರಾತಿಯನ್ನು ಪಡೆಯಲು ತಿಳಿಸಲಾಗಿದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20ರ ಶುಕ್ರವಾರ, ಡಿಸೆಂಬರ್ 21 ಶನಿವಾರ ಮತ್ತು ಡಿಸೆಂಬರ್ 22ರ ಭಾನುವಾರ ನಡೆಯಲಿದೆ. ಶುಕ್ರವಾರ ಬೆಳಗ್ಗೆ 9 ರಿಂದ 9.30ರ ತನಕ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಗುತ್ತದೆ.
ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮದ ಹಬ್ಬವಾಗಿದೆ. 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪರಿಶೀಲನೆ ನಡೆಸಿದರು. ಯಾವುದೇ ಕುಂದುಕೊರತೆಯೂ ಎದುರಾಗದಂತೆ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿಯೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ವಿವಿಧ ಸಚಿವರಿಗೆ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಮಂಡ್ಯ ಜಿಲ್ಲಾಡಳಿತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನವನ್ನು ನೀಡಿದೆ.
ಈ ಬಾರಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದೆ. ಕಾವೇರಿ ಕೊಳ್ಳದ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದೆ. ಆದ್ದರಿಂದ ಅದ್ದೂರಿಯಾಗಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಮಂಡ್ಯ ಜಿಲ್ಲಾಡಳಿತ ಸಾಹಿತ್ಯ ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ.
ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಡಿಸೆಂಬರ್ 20ರ ತನಕ ಅಧಿವೇಶನ ನಡೆಯಬೇಕಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇನದ ಕಾರಣಕ್ಕಾಗಿಯೇ ಡಿಸೆಂಬರ್ 19ಕ್ಕೆ ಅಧಿವೇಶನ ಮುಗಿಸಲಾಗುತ್ತಿದೆ.












Click it and Unblock the Notifications