ಶಿಥಿಲಾವಸ್ಥೆಯಲ್ಲಿ ಬಳ್ಳೇಕೆರೆ ಈಶ್ವರ ದೇಗುಲ: ಈ ಸ್ಥಳದ ವಿಶೇಷತೆ & ಮಹತ್ವ ತಿಳಿಯಿರಿ

ಮಂಡ್ಯ, ಸೆಪ್ಟೆಂಬರ್‌ 14: ಇತಿಹಾಸದ ಕಥೆ ಹೇಳಲು ಮತ್ತು ಈ ನಾಡನ್ನು ಆಳಿದ ರಾಜವಂಶಗಳ ಕುರುಹುವನ್ನು ಜೀವಂತವಾಗಿರಿಸಲು ನಮ್ಮ ಮುಂದೆ ಇರುವುದು ಆ ಕಾಲದಲ್ಲಿ ಕಟ್ಟಿದ ದೇಗುಲಗಳು ಮಾತ್ರ. ಈ ದೇಗುಲಗಳ ನಿರ್ಮಾಣದ ಶೈಲಿಯಿಂದಲೇ ಅದನ್ನು ಯಾವ ಕಾಲದಲ್ಲಿ ನಿರ್ಮಾಣವಾಗಿದ್ದು ಎಂಬುದನ್ನು ಸುಲಭವಾಗಿ ಹೇಳಬಹುದಾಗಿದೆ. ಇವತ್ತು ಸಾವಿರಾರು ಇತಿಹಾಸಗಳುಳ್ಳ ದೇಗುಲಗಳಿದ್ದರೂ ಅವುಗಳತ್ತ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣಿಸುತ್ತಿದೆ.

ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಐತಿಹಾಸಿಕ ದೇಗುಲಗಳಿದ್ದು ಅವುಗಳನ್ನು ಸೂಕ್ತ ನಿರ್ವಹಣೆ ಮಾಡುವಲ್ಲಿ ಆಡಳಿತರೂಢರು ಗಮನಹರಿಸದ ಕಾರಣದಿಂದಾಗಿ ಬಹುತೇಕ ದೇಗುಲಗಳು ಅವಸಾನದಂಚಿಗೆ ತಲುಪುವಂತಾಗಿದೆ. ಇದಕ್ಕೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಬಳ್ಳೇಕೆರೆಯ ಈಶ್ವರ ದೇವಾಲಯವು ಸಾಕ್ಷಿಯಾಗಿದೆ.

K R Pete Bookanakere Ballekere Eshwara Temple In Dilapidated Condition

ಸುಂದರ ಹಸಿರಪರಿಸರದಲ್ಲಿ ನೆಲೆ ನಿಂತಿರುವ ಬಳ್ಳೇಕೆರೆಯ ಈಶ್ವರ ದೇಗುಲವು ಬೇರೆಡೆಗಳಲ್ಲಿರುವ ದೇಗುಲಗಳಿಗಿಂತ ಭಿನ್ನ ಮತ್ತು ವಿಶಿಷ್ಟವಾಗಿದೆ. ಗುಡಿಗೋಪುರ ಯಾವುದೂ ಇಲ್ಲದೆ ಹೆಬ್ಬಂಡೆಗಳಿಂದ ನಿರ್ಮಾಣವಾದ ಈ ದೇಗುಲ ನೋಡುಗರ ಮನಸೆಳೆಯುತ್ತದೆ. ಅಷ್ಟೇ ಅಲ್ಲದೆ ಸಾವಿರಾರು ವರ್ಷಗಳ ಹಿಂದಿನ ದೇಗುಲವಾಗಿದ್ದರೂ ಇದನ್ನು ಪುನರುಜ್ಜೀವನಗೊಳಿಸದ ಕಾರಣ ಶಿಥಿಲಾವಸ್ಥೆಗೆ ತಲುಪುತ್ತಿರುವುದು ಎದ್ದು ಕಾಣಿಸುತ್ತಿದೆ.

ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇಗುಲ

ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ್ದು ಎಂದು ಹೇಳಲಾಗುತ್ತಿರುವ ಈಶ್ವರ ದೇವಾಲಯವನ್ನು ಮುಂದಿನ ತಲೆಮಾರಿಗೂ ಇತಿಹಾಸದ ಸಾಕ್ಷಿಯಾಗಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಆದರೆ ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಸಾವಿರಾರು ವರ್ಷಗಳ ಹಿಂದಿನ ದೇಗುಲ ಶಿಥಿಲಗೊಂಡು ಕಾಯಕಲ್ಪಕ್ಕಾಗಿ ಕಾಯುತ್ತಿರುವುದು ಕಂಡು ಬರುತ್ತಿದೆ.

K R Pete Bookanakere Ballekere Eshwara Temple In Dilapidated Condition

ಇನ್ನು ದೇವಾಲಯದ ಬಗ್ಗೆ ನೋಡಿದ್ದೇ ಆದರೆ ಬಳ್ಳೇಕೆರೆ ಗ್ರಾಮದಲ್ಲಿರುವ ಈಶ್ವರ ದೇಗುಲವು ಗ್ರಾಮದಲ್ಲಿನ ವಿಶಾಲವಾದ ಕೆರೆಯ ಏರಿಯ ಹಿಂಬದಿಯಲ್ಲಿದೆ. ದೇವಾಲಯದ ಕೆತ್ತನೆ ಹಾಗೂ ವಾಸ್ತು ವೈಭವವನ್ನು ಗಮನಿಸಿದಾಗ ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ಹೇಳಬಹುದಾಗಿದ್ದು, ಸದ್ಯ ದೇಗುಲದ ಅಧಿಸ್ಥಾನವು ಮುಚ್ಚಿ ಹೋಗಿದ್ದು, ಮೇಲ್ನೋಟಕ್ಕೆ ದೇವಾಲಯವು ಪೂರ್ಣಪ್ರಮಾಣದಲ್ಲಿ ಗೋಚರವಾಗುವದಿಲ್ಲ.

ಶಿಥಿಲಾವಸ್ಥೆಗೆ ತಲುಪಿದ ದೇಗುಲ

ಈ ದೇಗುಲದ ಗೋಡೆಗಳಲ್ಲಿ ಯಾವುದೇ ಅಲಂಕಾರಿಕ ಕೆತ್ತನೆ ಕಂಡು ಬರುವುದಿಲ್ಲವಾದರೂ ದೇಗುಲದ ನವರಂಗ, ಗರ್ಭಗುಡಿ, ಅಂತರಾಳಗಳ ಮೇಲಿನ ಭಾಗದಲ್ಲಿ ಕೆತ್ತಿರುವ ಪದ್ಮಮಂಡಲವು ಮನೋಹರವಾಗಿದೆ. ದೇವಾಲಯವು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಾಣವಾಗಿದ್ದು. ದೇವಾಲಯದ ಬಾಗಿಲು ಪೂರ್ವಾಭಿ ಮುಖವಾಗಿದೆ.

ದೇಗುಲದ ನಿರ್ವಹಣೆಯ ಕೊರತೆಯಿಂದಾಗಿ ಮೇಲ್ಬಾಗದ ಗೋಪುರ ಕುಸಿದಿದೆ. ಮೇಲ್ಚಾವಣಿಯಲ್ಲೆಲ್ಲಾ ಗಿಡಗಂಟಿಗಳು ಬೆಳೆದಿವೆ. ಚಪ್ಪಡಿ ಕಲ್ಲುಗಳಿಂದ ನಿರ್ಮಿಸಿದ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಹೀಗಾಗಿ ಮಳೆ ಬಂದಾಗ ನೀರು ದೇಗುಲದೊಳಗೆ ಬರುತ್ತದೆ. ಅಷ್ಟೇ ಅಲ್ಲದೆ ಧಾರಾಕಾರವಾಗಿ ಮಳೆ ಸುರಿದಾಗ ದೇಗುಲದ ಶಿವಲಿಂಗವೇ ಜಲಾವೃತಗೊಳ್ಳುತ್ತದೆ.

K R Pete Bookanakere Ballekere Eshwara Temple In Dilapidated Condition

ಬಳ್ಳೇಕೆರೆ ಗ್ರಾಮದ ವಿಶೇಷತೆಯೇನು?

ಹಿಂದಿನ ಕಾಲದಲ್ಲಿ ಗ್ರಾಮದ ಆದಿದೈವನಾಗಿದ್ದ ಈಶ್ವರನಿಗೆ ಸುತ್ತಮುತ್ತಲ ಜನ ಬಂದು ಪೂಜೆ ಸಲ್ಲಿಸಿ ದರ್ಶನ ಮಾಡಿಕೊಂಡು ಹೋಗುತ್ತಿದ್ದರು ಆಗ ಮಲ್ಲೇಶ್ವರ ಎಂದೇ ಪ್ರಸಿದ್ಧವಾಗಿತ್ತು. ಕಾಲಕ್ರಮೇಣ ದೇವಾಲಯ ಶಿಥಿಲಗೊಂಡಿದ್ದು, ದೇವಾಲಯದ ಅಂತರಾಳ, ನವರಂಗ ಮತ್ತು ಗರ್ಭಗುಡಿ ಸುಸ್ಥಿತಿಯಲ್ಲಿದೆ. ಗರ್ಭಗುಡಿಯು ಚೌಕಾಕಾರವಾಗಿದ್ದು ವಿನೂತನ ಪದ್ಮಮಂಡಲ ಅಲಂಕಾರ ಸೊಗಸಾಗಿ ಕಾಣುತ್ತದೆ. ದೇವಾಲಯದಲ್ಲಿ ಪ್ರತಿಷ್ಠಾಪನೆ ಗೊಂಡಿರುವ ಶಿವಲಿಂಗ ಆಕರ್ಷಕವಾಗಿ ಕೆತ್ತಲ್ಪಟ್ಟಿದ್ದು ಸುಂದರವಾಗಿದೆ.

ದೇವಾಲಯ ನಿರ್ಮಾಣಗೊಂಡಿರುವ ಗ್ರಾಮವು ಬಳ್ಳೇಕೆರೆಯಾಗಿದ್ದು, ಹಿಂದಿನ ಕಾಲದಲ್ಲಿ ಅಳತೆ ಮಾಡುವಾಗ ದೊಡ್ಡ ಪ್ರಮಾಣವನ್ನು ಬಳ್ಳ ಎನ್ನುತಿದ್ದರು ಅದರಂತೆ ಸುತ್ತಮುತ್ತಲಿರುವ ಕೆರೆಗಳಿಗಿಂದ ಈ ಗ್ರಾಮದಲ್ಲಿದ್ದ ಕೆರೆ ದೊಡ್ಡದಾಗಿತ್ತು. ಹೀಗಾಗಿ ದೊಡ್ದದಾದ ಕೆರೆ ಆಡುಭಾಷೆಯಲ್ಲಿ ಬಳ್ಳೇಕೆರೆ ಆಗಿದ್ದು, ಬಳ್ಳೇಕೆರೆಯಿದ್ದ ಊರು ಬಳ್ಳೇಕೆರೆ ಗ್ರಾಮವಾಗಿ ಹೆಸರುವಾಸಿಯಾಗಿದೆ.

ನಂಜನಗೂಡಿನಷ್ಟೇ ಪ್ರಸಿದ್ಧಿ ಹೊಂದಿತ್ತು

ಬಳ್ಳೇಕೆರೆ ಗ್ರಾಮಕ್ಕೆ ಪ್ರಾಚೀನ ಹಲವು ಶತಮಾನಗಳ ಇತಿಹಾಸವಿದ್ದು ಜೈನರ ಕಾಲದ ಪರಂಪರೆಯ ಶಾಸನವೂ ಇಲ್ಲಿ ಪತ್ತೆಯಾಗಿದ್ದು ಈ ಭಾಗದಲ್ಲಿ ಜೈನ ಧರ್ಮ ಪ್ರಚಲಿತವಾಗಿತ್ತೆಂಬುದಕ್ಕೆ ಇದು ಸಾಕ್ಷಿಯಾಗಿದೆ. ದೇವಾಲಯದ ಅರ್ಚಕ ನಾಗರಾಜು ಮತ್ತು ಕಿರಣ್‌ಕುಮಾರ್ ಅವರು ಹೇಳುವ ಪ್ರಕಾರ ಹಿಂದಿನಿಂದಲೂ ಅ ನಮ್ಮ ಪೂರ್ವಜರು ಶಿವ ದೇವಾಲಯ ನಿರ್ಮಾಣಕ್ಕೆ ಮಹತ್ವ ನೀಡಿದ್ದಾರೆ. ದೇವಾಲಯದಲ್ಲಿ ನಮ್ಮ ವಂಶಸ್ಥರೇ ಪೂಜೆ ಮಾಡಿಕೊಂಡು ಬರುತಿದ್ದು ನಾಲ್ಕು ಕುಟುಂಬದವರು ಸರದಿ ಪ್ರಕಾರ ನಿಯಮಿತವಾಗಿ ಪೂಜಿಸಿಕೊಂಡು ಬಂದಿದ್ದೇವೆ.

ಒಂದು ಕಾಲದಲ್ಲಿ ಬಳ್ಳೇಕೆರೆ ಈಶ್ವರ ದೇವಸ್ಥಾನವೆಂದರೆ ನಂಜನಗೂಡಿನ ನಂಜುಂಡೇಶ್ವರನ ದೇವಸ್ಥಾನವೆಂದು ಕರೆಯುತ್ತಿದ್ದರಲ್ಲದೆ ದೊಡ್ಡಜಾತ್ರೆಯು ಶಿವರಾತ್ರಿಯಂದು ನಡೆಯುತ್ತಿತ್ತು. ದೇವಸ್ಥಾನ ಶಿಥಿಲಗೊಂಡ ನಂತರ ಬರುವ ಭಕ್ತರು ಕಡಿಮೆಯಾಗಿದ್ದಾರೆ. ಗ್ರಾಮದವರು ಮತ್ತು ಸರ್ಕಾರದವರು ಗಮನಹರಿಸಿ ಜೀರ್ಣೋದ್ದಾರ ಮಾಡಿದರೆ ಪ್ರಾಚೀನ ದೇಗುಲವೊಂದರ ಸಂರಕ್ಷಣೆ ಮಾಡಿದಂತಾಗುತ್ತದೆ ಎಂದಿದ್ದಾರೆ.

ದೇಗುಲಕ್ಕೆ ಕಾಯಕಲ್ಪ ಯಾವಾಗ?

ಬಳ್ಳೇಕೆರೆ ಈಶ್ವರ ದೇವಸ್ಥಾನಕ್ಕೆ ವಿಶೇಷ ಮಹತ್ವವಿದ್ದು, ಒಂದು ಕಾಲದಲ್ಲಿ ಸೂರ್ಯನ ಕಿರಣಗಳು ಲಿಂಗದ ಮೇಲೆ ಬಿದ್ದು ಪ್ರಕಾಶನವಾಗುತ್ತಿತ್ತು, ಜತೆಗೆ ದೇಗುಲದ ಗೋಪುರ, ಆಕರ್ಷಕವಾಗಿತ್ತು. ಮೇಲ್ಚಾವಣಿ ಕುಸಿಯುವ ಸ್ಥಿತಿಯಲ್ಲಿರುವದರಿಂದ ಪ್ರಾಣಭಯದಿಂದಲೇ ಅರ್ಚಕರು ಪೂಜೆ ಮಾಡುವ ಸ್ಥಿತಿ ಬಂದೊದಗಿದೆ.

ಇತಿಹಾಸದ ಕಥೆ ಹೇಳಲು ನಿಂತಂತಿರುವ ಈಶ್ವರ ದೇಗುಲ ವರ್ಷದಿಂದ ವರ್ಷಕ್ಕೆ ಅವಸಾನದ ಅಂಚಿಗೆ ಹೋಗುತ್ತಿದೆ. ದೇಗುಲದ ಗೋಡೆಗಳು ಕುಸಿಯುವ ಹಂತ ತಲುಪಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ದೇಗುಲವನ್ನು ಅಭಿವೃದ್ಧಿ ಪಡಿಸುವ ಮೂಲಕ ಕಾಯಕಲ್ಪ ನೀಡಬೇಕಾಗಿದೆ. ಅದು ಯಾವಾಗ ಸಾಧ್ಯವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+