ಮೇಲುಕೋಟೆಯಲ್ಲಿ ದೀಪಾವಳಿ ಸಂಭ್ರಮ; ಸೋಮವಾರ ವಿಶೇಷ ಪೂಜೆ, ಗ್ರಹಣದ ದಿನ ದರ್ಶನವಿಲ್ಲ
ಮೇಲುಕೋಟೆ, ಅಕ್ಟೋಬರ್ 23: ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ನರಕ ಚತುರ್ದಶಿ ಮಹೋತ್ಸವ ವೈಭವದಿಂದ ನೆರವೇರಲಿದೆ. ಬೆಳಕಿನ ಹಬ್ಬದ ಮೊದಲದಿನದ ಅಂಗವಾಗಿ ಪ್ರಾತಃಕಾಲ ಶ್ರೀದೇವಿ ಭೂದೇವಿ ರಾಮಾನುಜಾಚಾರ್ಯರ ಸಮೇತ ಅಭಿಷೇಕ ನೆರವೇರಲಿದೆ.
ಸೋಮವಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ದೀಪಾವಳಿ ಮಂಟಪದಲ್ಲಿ ತಿರುವಾರಾಧನೆ ಪೂಜಾಕೈಂಕರ್ಯಗಳು ನೆರವೇರಿ ನರಕಚತುದರ್ಶಿ ಉತ್ಸವ ನಾಲ್ಕೂ ಪ್ರಮುಖ ಬೀದಿಗಳಲ್ಲಿ ನೆರವೇರಲಿದೆ. ಸವಿತಾ ಸಮಾಜದವರು ತಮ್ಮ ಗುರುಗಳ ನೇತೃತ್ವದಲ್ಲಿ ಅನೂಚಾನ ಪದ್ಧತಿಯಂತೆ ಉತ್ಸವಕ್ಕೆ ವಿಶೇಷ ಮಂಗಳವಾದ್ಯ ಮತ್ತು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ. ಈ ವೇಳೆ ಸ್ವಾಮಿಯ ಉತ್ಸವದಲ್ಲಿ ಬಾಣ ಬಿರುಸುಗಳ ಸೇವೆಯನ್ನೂ ಮಾಡಲಾಗುತ್ತದೆ.
ಬಲಿಪಾಡ್ಯಮಿಯಂದೂ ಸಹ ಚೆಲುವನಾರಾಯಣಸ್ವಾಮಿಗೆ ಬೆಳಿಗ್ಗೆ ವಿಶೇಷ ಅಭಿಷೇಕ ನಡೆಯಲಿದ್ದು ಸಂಜೆ ಸ್ವಾಮಿಯ ಉತ್ಸವಕ್ಕೆ ಪುಷ್ಪಕೈಂಕರ್ಯ ಸೇವೆ ಆದಿ ಶೇಷವಾಹನೋತ್ಸವ ನೆರವೇರಲಿದೆ. ಸನ್ನಿಧಿಯ ಪರಿಚಾರಕರ ಕುಟುಂಬದಿಂದ ಅನೂಚಾನವಾಗಿ ಕೈಂಕರ್ಯಗಳು ನಡೆಯಲಿದೆ.

ಗೋಪೂಜೆ
ಬಲಿಪಾಡ್ಯಮಿ ಅಂಗವಾಗಿ ಬುಧವಾರ ಸಂಜೆ ಸರಕಾರದ ಆದೇಶದಂತೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂಭಾಗ ಗೋಧೂಳಿ ಸಮಯದಲ್ಲಿ ಗೋಪೂಜೆಯನ್ನು ಆಯೋಜಿಸಲಾಗಿದೆ. ಮೇಲುಕೋಟೆ ಕ್ಷೇತ್ರದ ಶಾಸಕರಾದ ಸಿ.ಎಸ್.ಪುಟ್ಟರಾಜುರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ದೇವಾಲಯದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.
ಮನವಾಳಮಾಮುನಿ ಜೀಯರ್ ತಿರುನಕ್ಷತ್ರ
ಮೇಲುಕೋಟೆಯಲ್ಲಿ ವಿಜಯನಗರ ಸಾಮ್ರಾಜ್ಯದ ವೇಳೆ ಶ್ರೀವೈಷ್ಣವ ದೇಗುಲಗಳ ಪುನರುಜ್ಜೀವನಕ್ಕೆ ಶ್ರಮಿಸಿದ ಮಹಾನ್ ಸಂತರಾದ ಮನವಾಳಮಾಮುನಿ ಜೀಯರ್‌ರ ತಿರುನಕ್ಷತ್ರ ಮಹೋತ್ಸವ ಅಕ್ಟೋಬರ್ 30 ರ ಭಾನುವಾರದಂದು ನಡೆಯಲಿದೆ. ಅಂದು ಜೀಯರ್ ರವರಿಗೆ ದ್ವದಾಶಾರಾಧನೆಯೊಂದಿಗೆ ಮಹಾಭಿಷೇಕ ಸಂಜೆ ಚೆಲುವನಾರಾಯಣಸ್ವಾಮಿಯೊಂದಿಗೆ ಉತ್ಸವ ನೆರವೇರಲಿದೆ ಈ ಸಂಬಂದದ ಧಾರ್ಮಿಕ ಕೈಂಕರ್ಯಗಳು ಅ.20ರಿಂದಲೇ ಆರಂಭವಾಗಿದ್ದು ಪ್ರತಿದಿನ ವಿಶೇಷ ಸೇವಾಕೈಂಕರ್ಯಗಳು ನೆರವೇರುತ್ತಿದೆ ಎಂದು ಸನ್ನಿಧಿ ಅರ್ಚಕರಾದ ಸ್ಥಾನೀಕಂ ಶ್ರೀರಾಮನ್ ತಿಳಿಸಿದ್ದಾರೆ.
ಗ್ರಹಣ ದೇವರ ದರ್ಶನ ಇಲ್ಲ
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸೂರ್ಯಗ್ರಹಣದ ದಿನವಾದ ಮಂಗಳವಾರ ಮಧ್ಯಾಹ್ನ ಒಂದು ಗಂಟೆಯ ನಂತರ ದೇಗುಲ ಬಂದ್ ಆಗಲಿದೆ. ಸೂರ್ಯಗ್ರಹಣ ಮುಕ್ತಾಯವಾದ ನಂತರ ಶಾಂತಿಹೋಮಗಳನ್ನು ನೆರವೇರಿಸಿ ಅಭಿಷೇಕ ನೆರವೇರಿದ ನಂತರ ರಾತ್ರಿಯ ನಿತ್ಯಪೂಜಾ ಕೈಂಕರ್ಯಗಳು ನೆರವೇರಲಿದೆ. ಅಲ್ಲಿಯವರೆಗೂ ಭಕ್ತರಿಗೆ ದೇವರದರ್ಶನಕ್ಕೆ ಅವಕಾಶ ಇರುವುದಿಲ್ಲ ಭಕ್ತರು ಸಹಕಾರ ನೀಡಬೇಕು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಮಾಹಿರಿ ನೀಡಿದರು.












Click it and Unblock the Notifications