Mandya: ಮಸೀದಿ ಬಳಿ ಹನುಮ ಕಾರ್ಯಕರ್ತರು-ಪೊಲೀಸರ ಮಧ್ಯೆ ಮಾತಿನ ಚಕಮಕಿ, ನೂಕು ನುಗ್ಗಲು
ಮಂಡ್ಯ, ಡಿಸೆಂಬರ್ 15: ಮಂಡ್ಯದ ನಾಗಮಂಗಲದಲ್ಲಿ ಕೆಲವೇ ತಿಂಗಳ ಹಿಂದೆ ಕೋಮು ಘರ್ಷಣೆ ನಡೆದು ಸುದ್ದಿಯಾಗಿತ್ತು. ಇದೀಗ ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ ವೇಳೆ ಪೊಲೀಸರೊಂದಿಗೆ ತೀವ್ರ ನೂಕಾಟ, ಮಾತಿನ ಚಕಮಕಿ ನಡೆದಿದೆ. ಭಾನುವಾರ ಹನುಮ ಮಾಲಾಧಾರಿಗಳು ಯಾತ್ರೆ ವೇಳೆ ವೃತ್ತವೊಂದರ ಮಸೀದಿ ಮುಂದೆ ಕದಲದೇ ನಿಂತುಕೊಂಡಿದ್ದರು. ನೋಡ ನೋಡುತ್ತಿದ್ದಂತೆ ಅನೇಕ ಮಾಲಾಧಾರಿಗಳು ಜಮಾವಣೆ ಆಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಪಕ್ಕವೇ ಯಾತ್ರೆ ಹಾದು ಹೋಗಬೇಕಿತ್ತು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಮೂರು ಕೆಎಸ್‌ಆರ್‌ಪಿ ತುಕಡಿಗಳು ನಿಯೋಜನೆಗೊಂಡಿವೆ. ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಮಾಲಾಧಾರಿಗಳು ಬ್ಯಾರಿಕೇಡ್ ತಳ್ಳಿ ಮಸೀದಿಯತ್ತ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಹೈಡ್ರಾಮಾವೇ ನಡೆದಿದೆ. ಮಾಲಾಧಾರಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಸ್ವತಃ ಖುದ್ದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳದಲ್ಲಿ ನಿಂತು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಹನುಮಧಾರಿಗಳು ಘೋಷಣೆ ಕೂಗುತ್ತಾ ಮಸೀದಿ ಮುಂದೆ ಕುಳಿದಿದ್ದಾರೆ. ರಸ್ತೆಯಲ್ಲಿಯೇ ಭಜನೆ ಮಾಡುತ್ತಾ ಘೋಷಣೆ ಕೂಗಿದ್ದಾರೆ. ಈ ವೇಳೆ ಅವರನ್ನು ಸ್ಥಳದಿಂದ ಕಳುಹಿಸಲು ಪೊಲೀಸರ ಯತ್ನ ವಿಫಲವಾಗಿದೆ. ನೂಕಾಟ ತಳ್ಳಾಟ ನಡೆದಿದೆ. ಹನುಮಧಾರಿಗಳು ಡಿಜೆ ಹಾಕಿ ಕುಣಿಯುತ್ತಿದ್ದಾರೆ. ಸ್ಥಳದಲ್ಲಿಯೇ ಹೆಚ್ಚು ಕಾಲ ಕಳೆದಿದ್ದು, ಕೆಲವರು ಬ್ಯಾರಿಕೇಡ್ ನೂಕಿ ಮಸೀದಿ ಪ್ರವೇಶಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಾರೊಬ್ಬ ಹನುಮ ಮಾಲಾಧಾರಿಗಳು ಮಸೀದಿಗೆ ಒಳಗೆ ಹೋಗದಂತೆ ತಡೆಯಲು ಪೊಲೀಸರು ರಸ್ತೆಗೆ ಅಡ್ಡವಾಗಿ ವಾಹನ ನಿಲ್ಲಿಸಿದ್ದಾರೆ. ಇನ್ನೊಂದು ಕಿಲೋ ಮೀಟರ್ ದೂರ ಹೋದರೆ ಈ ಸಂಕೀರ್ತನ ಯಾತ್ರೆ ಪೂರ್ಣಗೊಳ್ಳುತ್ತಿತ್ತು. ಆದರೆ ಯಾತ್ರೆ ಪೂರ್ಣಗೊಳಿಸುವಲ್ಲಿ ವಿಳಂಬ ಆಗಿದೆ. ಎಲ್ಲ ಮಾಲಾಧಾರಿಗಳು ವೃತ್ತದಲ್ಲಿಯೇ ಭಜನೆ, ಡಿಜೆ ನೃತ್ಯ ಹಾಕಿಕೊಂಡು ಘೊಷಣೆ ಕೂಗಿದಿದ್ದಾರೆ.
ಗಣೇಶ ವಿಸರ್ಜನೆ ವೇಳೆಯೂ ಘರ್ಷಣೆ
ಈ ಹಿಂದೆ ಗಣೇಶ ವಿಸರ್ಜನೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಘರ್ಷಣೆ ನಡೆದಿತ್ತು. ಗಣೇಶ ಮೂರ್ತಿ, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ವಾಹನಗಳಿಗೂ ಬೆಂಕಿ ಹಚ್ಚಿ ವಿಕೃತಿ ಮೆರೆಯಲಾಗಿದೆ. ಹಿಂದೂಗಳ ಮೇಲೆ ಮುಸ್ಲಿಂ ಸಮುದಾಯದವರು ಕಲ್ಲು ತೂರಾಟ ನಡೆಸಿದ್ದರು ಎಂದು ಬಿಜೆಪಿ ನಾಯಕರು ಸೇರಿದಂತೆ ಗಣೇಶ ವಿಸರ್ಜನಾ ಸಮಿತಿಯವರು ಆರೋಪಿಸಿದ್ದರು.
ಸ್ಥಳಕ್ಕೆ ಬಿಜೆಪಿ ವಿಶೇಷ ತನಿಖಾ ತಂಡ ಭೇಟಿ ನೀಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿತ್ತು. ಜೊತೆಗೆ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಇದೀಗ ಹನುಮ ಸಂಕೀರ್ತನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗಿದೆ.












Click it and Unblock the Notifications