ಸಕ್ಕರೆ ನಾಡಿನಲ್ಲಿ ಕ್ರಿಸ್‌ಮಸ್ ಆಚರಣೆಯ ರಂಗು, ಇಲ್ಲಿದೆ ವಿವರ
ಮಂಡ್ಯ, ಡಿಸೆಂಬರ್, 25: ಕ್ರೈಸ್ತರು ಭಾನುವಾರ ಜಿಲ್ಲೆಯಲ್ಲಿ (ಡಿಸೆಂಬರ್ 25) ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಗರದ ಸಂತಜೋಸೆರ ಚರ್ಚ್ ಹಾಗೂ ಸಾಡೆಸ್ಮಾರಕ ದೇವಾಲಯ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಕ್ರಿಶ್ಚಿಯನ್ನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.
(ಶನಿವಾರ ಡಿಸೆಂಬರ್ 24) ಮಧ್ಯರಾತ್ರಿ 12 ಗಂಟೆವರೆಗೆ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತಂತೆ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಪ್ರಾರ್ಥಿಸಿದರು. ಭಾನುವಾರ (ಡಿಸೆಂಬರ್ 25) ಬೆಳಗ್ಗೆ 8 ಗಂಟೆಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನಾ ಕಾರ್ಯಕ್ರಮ ಆರಂಭವಾಗಿ 10:30ರವರೆಗೂ ವಿಶೇಷ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಪಾದ್ರಿಗಳು ಭಕ್ತರಿಗೆ ಆಶೀರ್ವಚನ ನೀಡಿದರು. ಲೂರ್ದ್‌ಪ್ರಸಾದ್ ಅವರು ಕ್ರಿಸ್‌ಮಸ್ ಸಂದೇಶವನ್ನು ಬೋಧಿಸಿದರು. ಜಗತ್ತಿನ ಎಲ್ಲ ಜನರೂ ಸಂಯಮ, ಸುಖ-ಸಮೃದ್ಧಿಯಿಂದ ಬದುಕುವಂತಾಲಿ. ಜನರು ಆರೋಗ್ಯವಂತರಾಗಿ ಶಾಂತಿ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಶುಭ ಸಂದೇಶ ನೀಡಿದರು.
ರಾಜ್ಯದಲ್ಲೇ ಎರಡನೇ ದೊಡ್ಡ ಚರ್ಚ್ ಎನಿಸಿರುವ ಸಂತ ಜೋಸೆರದಲ್ಲಿ ಯೇಸು ಸ್ವಾಮಿಯ ಬೆತ್ಲೇಯೇಮ್ ಗೋದಲಿ (ಧರ್ಮ ಕೊಟ್ಟಿಗೆ)ಯನ್ನು ಗುಡಿಸಲಿನ ಆಕಾರದಲ್ಲಿ ನಿರ್ಮಿಸಲಾಗಿತ್ತು. ಅದರೊಳಗೆ ಯೇಸುವಿನ ಜನನವನ್ನು ಬಹಳ ಸುಂದರವಾಗಿ ಚಿತ್ರಿಸಲಾಗಿತ್ತು. ಯೇಸು ಹುಟ್ಟಿದ ಸಂದೇಶ ಮೊದಲು ಕುರುಬರಿಗೆ ರವಾನೆ ಆಗುತ್ತದೆ. ಅದನ್ನು ಕೇಳಿ ಧೂತರು ಗ್ಲೋರಿಗಳನ್ನು ಹಾಡುವ ರೀತಿಯಲ್ಲಿ ಬೆತ್ಲೇಯೇಮ್ ಗೋದಲಿಯನ್ನು ನಿರ್ಮಿಸಲಾಗಿತ್ತು.

ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ
ಬೆತ್ಲೇಯೇಮ್ ಗೋದಲಿಯ ಗುಡಿಸಲಿಗೆ ಸ್ಟಾರ್‌ಗಳನ್ನು ಕಟ್ಟಿ ಅದಕ್ಕೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚಿಕ್ಕ ಗಾತ್ರದ ವಿದ್ಯುತ್ ದೀಪಗಳಲ್ಲಿ ಮಿನುಗುತ್ತಿದ್ದ ಗೋದಲಿ ವಿಶೇಷ ಆಕರ್ಷಣೆಯಾಗಿ ಎಲ್ಲರ ಗಮನಸೆಳೆಯಿತು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ಹಾಗೂ ಚರ್ಚ್‌ನ ಆವರಣವನ್ನು ಅಲಂಕಾರಿಕ ದೀಪಗಳಿಂದ ಸಿಂಗರಿಸಲಾಗಿತ್ತು. ಕ್ರಿಸ್‌ಮಸ್ ಟ್ರೀಗೂ ದೀಪಾಲಂಕಾರ ಮಾಡಲಾಗಿತ್ತು.

ಕ್ರಿಸ್‌ಮಸ್ ಆಚರಣೆ ಸಂದೇಶದ ಬೋಧನೆ
ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಸಾಡೇ ಸ್ಮಾರಕ ದೇವಾಲಯದಲ್ಲೂ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಒಂದನೇ ರೆವರೆಂಡ್ ಜಯಶಂಕರ್ ಅವರು ಕ್ರಿಸ್‌ಮಸ್ ಸಂದೇಶವನ್ನು ಬೋಧಿಸಿದರು. ಯೇಸು ಸ್ವಾಮಿ ಎಲ್ಲರಿಗೂ ಸಮಾಧಾನ, ಶಾಂತಿಯನ್ನು ಕೊಡಲಿ. ಎಲ್ಲರಿಗೂ ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಕ್ರೈಸ್ತ ಸಮುದಾಯದವರಿಂದ ಪ್ರಾರ್ಥನೆ ಸಲ್ಲಿಕೆ
ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚರ್ಚ್ ಆವರಣವನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ಕ್ರಿಶ್ಚಿಯನ್ ಕಾಲೋನಿ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿತ್ತು.

ಯೇಸುವಿನ ಭಕ್ತಿ ಗೀತೆಗಳನ್ನು ಹಾಡುತ್ತಿದ್ದ ಭಕ್ತರು
ಬಹುತೇಕ ಕ್ರಿಶ್ಚಿಯನ್ ಮನೆಗಳ ಎದುರು ಕ್ರಿಸ್‌ಮಸ್ ಶುಭಾಶಯ ಕೋರುವ ಸ್ಟಾರ್‌ಗಳನ್ನು ಕಟ್ಟಲಾಗಿತ್ತು. ಅದಕ್ಕೆ ವಿದ್ಯುತ್ ದೀಪ ಅಳವಡಿಸಿ ಬಣ್ಣದ ರಂಗು ತುಂಬಿದ್ದರು. ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಕಳೆದ ಮೂರ್ನಾಲ್ಕು ದಿನಗಳಿಂದಲೂ ಮನೆ ಮನೆಗೆ ತೆರಳಿ ಯೇಸು ಕ್ರಿಸ್ತನ ಭಕ್ತಿಗೀತೆಗಳನ್ನು ಹಾಡುವುದರೊಂದಿಗೆ ಎಲ್ಲರೂ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪ್ರೇರೇಪಿಸುತ್ತಿದ್ದುದು ಕಂಡುಬಂದಿತ್ತು.












Click it and Unblock the Notifications