ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ ನೀರು,ಪ್ರಧಾನಿ ಮಧ್ಯಸ್ಥಿಕೆಯಾದರೂ ಹೇಗೆ ಸಾಧ್ಯ:ಚಕ್ರವತಿ ಸೂಲಿಬೆಲೆ
ಮಂಡ್ಯ, ಸೆಪ್ಟೆಂಬರ್ 29: ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಸಖ್ಯೆ ಬೆಳಸಿ, ಕರ್ನಾಟಕದ ಕಾವೇರಿ ನೀರನ್ನು ರಾಜಕೀಯ ಹಿತಕ್ಕಾಗಿ ಬಿಡುಗಡೆ ಮಾಡಿ ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ರಾಜ್ಯ ಸರ್ಕಾರ ನಾಟಕವಾಡುತ್ತಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು.
ನಗರದ ಸರ್ ಎಂ.ವಿ. ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅಥವಾ ಪ್ರಾಧಿಕಾರ ಹೇಳಿದೇ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ವಿಚಾರವಾಗಿ ವಿವಾದ ಉಂಟಾಗಿದೆ. ಕಾವೇರಿ ಪ್ರಾಧಿಕಾರ ನೀರು ಬಿಡುವಂತೆ ಆದೇಶ ನೀಡಿತ್ತು. ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ ಎಂಬ ಕಾರಣಕ್ಕೆ ತಮಿಳುನಾಡು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಆದೇಶ ನೀಡುವ ಮುನ್ನವೇ ನೀರು ಬಿಟ್ಟಿದೆ.
ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಘರ್ಷಣೆ ತಲೆದೋರುತ್ತಿತ್ತು. ಆಗ ಪ್ರಧಾನಿ ಅಥವಾ ಕೇಂದ್ರ ಸರ್ಕಾರ ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕಿತ್ತು. ಅವರು ನೀರು ಕೇಳಿದರು, ನೀವು ಕೊಟ್ಟಿರಿ, ಇದರಲ್ಲಿ ನಮ್ಮ ಪಾತ್ರ ಏನು ಎಂಬ ಪ್ರಶ್ನೆ ಉದ್ಭವವಾಗಿದೆ ಎಂದು ವಿವರಿಸಿದರು.
ರಾಜ್ಯದ ಸಂಸದರೂ ಸಹ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದರೆ ಪ್ರಧಾನಿ ಬಳಿ ಹೋಗಿ ಏನೆಂದು ಕೇಳಲು ಸಾಧ್ಯ, ಕರ್ನಾಟಕದ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ಕೇಳದೆಯೇ ನೀರು ಹರಿಸಿದ್ದಾರೆ. ಹೀಗಿರುವಾಗ ನಾನು ಹೇಗೆ ಮಧ್ಯ ಪ್ರವೇಶಿಸಲಿ ಎಂದು ಪ್ರಧಾನಿ ಪ್ರಶ್ನಿಸುತ್ತಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಸದರಾದರೂ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನೀರು ಬಿಡುವ ಮುನ್ನವೇ ಇಂತಹ ಚಿಂತನೆ ಮಾಡಬೇಕಿತ್ತು. ನೀರು ಬಿಟ್ಟು ಈಗ ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ ಎಂದ ಅವರು, ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿ ನಡೆಯುತ್ತಿದೆ. ಕಾವೇರಿ ಹಳೇ ಮೈಸೂರು ಅಥವಾ ಬೆಂಗಳೂರು ಭಾಗಕ್ಕೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೇ ಸೇರಿದ್ದು ಎಂಬ ಸಂದೇಶವನ್ನು ರಾಜ್ಯಾದ್ಯಂತ ಬಂದ್ ಮಾಡುವ ಮೂಲಕ ಈಗ ಸರ್ಕಾರಗಳಿಗೆ ಚಾಟೀ ಬಿಸಿದ್ದಾರೆ. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಜನಹಿತವನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜಕೀಯ ಹಿತಾಸಕ್ತಿಗಾಗಿ ತಮಿಳುನಾಡಿಗೆ ನೀರು ಬಿಟ್ಟಿದೆ, ಒಂದು ವೇಳೆ ಚೀನಾ ಅಥವಾ ಪಾಕಿಸ್ತಾನದೊಂದಿಗೆ ರಾಜಕೀಯ ಹಿತಾಸಕ್ತಿ ಬೆಳೆಸಿಕೊಂಡರೆ ಅಲ್ಲಿಗೂ ನೀರು ಹರಿಸುವುದರಲ್ಲಿ ಸಂದೇಹವಿಲ್ಲ ಎಂದು ಟೀಕಿಸಿದರು.
ನೀವು ಬೇಕಾದರೆ ತಮಿಳುನಾಡಿನೊಂದಿಗೆ ಸ್ನೇಹ ಮಾಡಿಕೊಳ್ಳಿ. ಆದರೆ ನಮ್ಮ ಜನರನ್ನು, ರೈತರನ್ನು ಏಕೆ ಬಲಿ ಕೊಡುತ್ತೀರಿ, ಇನ್ನಾದರೂ ರಾಜ್ಯದ ನೆಲ, ಜಲವನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.











Click it and Unblock the Notifications