ತಮಿಳುನಾಡಿಗೆ ಕಾವೇರಿ ನೀರು: ಸೆ.23 ಮಂಡ್ಯ ಬಂದ್‌ಗೆ ಕರೆ
ಮಂಡ್ಯ,ಸೆಪ್ಟೆಂಬರ್ 21: ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೆ.23ರಂದು ಮಂಡ್ಯ ಬಂದ್‌ಗೆ ಕರೆ ನೀಡಿದೆ.
ನಗರದ ಸರ್‌ಎಂವಿ ಪ್ರತಿಮೆ ಮುಂದೆ ಈಗಾಗಲೇ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಧರಣಿ ಸ್ಥಳದಲ್ಲೇ ಸಮಿತಿ ಪದಾಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಸಿ ಮಂಡ್ಯ ಬಂದ್‌ಗೆ ಕರೆ ನೀಡುವುದು ಸೇರಿದಂತೆ 6 ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋರ್ಟ್ ಆದೇಶ ಮತ್ತು ರಾಜ್ಯ ಸರಕಾರದ ನಿಲುವಿನ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಲಾಗಿದೆ.
ಹಾಗೆಯೇ ಗುರುವಾರ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಲಾಯಿತು. ಜಲಾಶಯದ ನೀರಿನ ಮಟ್ಟವು ಈಗಾಗಲೇ 97 ಅಡಿಗೆ ಕುಸಿದಿದೆ. ಬೆಳೆದು ನಿಂತಿರುವ ಬೆಳಗಳನ್ನೇ ರಕ್ಷಿಸಿಕೊಳ್ಳಲಾಗುತ್ತಿದೆ. ಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರು ಯಾವುದಕ್ಕೂ ಸಾಲದಾಗಿದೆ. ಬೇಸಿಗೆಗೂ ಮುನ್ನವೇ ಇನ್ನೆರಡು ತಿಂಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚಿಸುತ್ತಿರುವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ 5000ಕ್ಯೂಸೆಕ್ ನೀರು ಹರಿಸುವಂತೆ ಕೋರ್ಟ್ ಆದೇಶ ಮಾಡಿರುವುದು ಯಾವ ನ್ಯಾಯ? ಈಗಾಗಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಎಷ್ಟು ಸರಿ? ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು. ಅಂತಿಮವಾಗಿ 6 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅವುಗಳನ್ನು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಸಭೆಯಲ್ಲಿ ಘೋಷಿಸಿದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು
*ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರಿಂಕೋರ್ಟ್ ಆದೇಶ ನೀಡಿರುವುದು ಖಂಡನೀಯ.
*ಸರ್ವಪಕ್ಷಗಳ ತೀರ್ಮಾನದಂತೆ ಕಾವೇರಿ ಜಲಾನಯನ ಪ್ರದೇಶದ ಜನ-ಜಾನುವಾರುಗಳಿಗೆ ಅವಶ್ಯಕವಾಗಿರುವ ಕುಡಿಯುವ ನೀರಿಗೆ ಆದ್ಯತೆ ನೀಡಿ, ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು.
*ಕಾವೇರಿ ವಿಚಾರದಲ್ಲಿ ರಾಜ್ಯಕ್ಕಾಗಿ ಅನ್ಯಾಯದ ವಿರುದ್ಧ ಕರ್ನಾಟಕ ಸರಕಾರವು ತಕ್ಷಣವೇ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕು.
*ಭಾರತದ ರಾಷ್ಟಿಥಯ ಜಲ ನೀತಿಯ ಘೋಷಣೆಯಂತೆ ಕುಡಿಯುವ ನೀರನ್ನು ರಕ್ಷಣೆ ಮಾಡಲು ಕರ್ನಾಟಕ ಸರಕಾರದೊಂದಿಗೆ ಕೇಂದ್ರ ಸರಕಾರ ಬದ್ಧವಾಗಿರಬೇಕು. ಕಾವೇರಿ ಜಲಾನಯನದ ರೈತರು ಮತ್ತು ಜನರ ಪರವಾಗಿ ನಿಲ್ಲಬೇಕು.
*ಸೆ.23ರಂದು ಮಂಡ್ಯ ಬಂದ್ ನಡೆಸುವುದು.
*ಮಂಡ್ಯ ಬಂದ್ ಕರೆಯ ಹಿನ್ನಲೆಯಲ್ಲಿ ಸೆ.22ರಂದು ಬೆಳಗ್ಗೆ 11ಕ್ಕೆ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿ ಸ್ಥಳದಲ್ಲಿ ಜಿಲ್ಲೆಯ ಸಂಘಟನೆಗಳ ಪ್ರತಿನಿಧಿಗಳು, ಹಾಲಿ ಮತ್ತು ಮಾಜಿ ಶಾಸಕರು, ಹಿರಿಯ ರಾಜಕಾರಣಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು, ವರ್ತಕರು, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು, ನಾಗರಿಕರ ಸಭೆ ನಡೆಸುವುದು.
ಸಭೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ರೈತ ಸಂಘದ ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ನಗರಸಭೆ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಹಿರಿಯ ಸಹಕಾರಿ ಕೀಲಾರ ಕೃಷ್ಣ, ಸಾಮಾಜಿಕ ಹೋರಾಟಗಾರ ಎಂ.ಎಲ್.ತುಳಸೀಧರ್, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ದಸಂಸ ಮುಖಂಡ ಎಂ.ವಿ.ಕೃಷ್ಣ ಇತರರು ಭಾಗವಹಿಸಿದ್ದರು.












Click it and Unblock the Notifications