Bangaluru-Mysuru Expressway: ಒಂದೇ ರಾತ್ರಿ ಎರಡು ಕಡೆ ದರೋಡೆ, ಎಸ್‌ಪಿ ಭೇಟಿ ಪರಿಶೀಲನೆ
ಶ್ರೀರಂಗಪಟ್ಟಣ, ಆಗಸ್ಟ್, 14: ಅಪಘಾತನಗಳ ಹೆಚ್ಚಾದ ಹಿನ್ನೆಲೆ ಮೊದಲು ಮೈಸೂರು- ಬೆಂಗಳೂರು ಹೆದ್ದಾರಿ ಸಾವಿನ ರಹದಾರಿ ಅಂತಲೇ ಹೆಸರು ಪಡೆದಿತ್ತು. ಇದೀಗ ಇಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಒಂದೇ ರಾತ್ರಿ ಎರಡು ಕಡೆ ದರೋಡೆ ನಡೆದಿರುವ ಘಟನೆ ನಡೆದಿದೆ. ಹಾಗಾದರೆ ಎಲ್ಲೆಲ್ಲಿ ದರೋಡೆ ನಡೆದಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣದ ವೇಳೆ ಸುಲಿಗೆ ಮುಂದುವರೆದಿದ್ದು, ಒಂದೇ ರಾತ್ರಿ ಎರಡು ಕಡೆ ದರೋಡೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶ್ರೀರಂಗಪಟ್ಟಣದ ಬಳಿ ಕಳ್ಳತನ
ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿ ಗೇಟ್ ಮತ್ತು ಗೌರಿಪುರ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಬೆದರಿಸಿ ಚಿನ್ನಾಭರಣ ದೋಚಿದ್ದಾರೆ. ಶನಿವಾರ ತಡರಾತ್ರಿ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸಿದ್ದ ಇಬ್ಬರು ದರೋಡೆ ಮಾಡಿ ಪರಾರಿಯಾಗಿದ್ದು,ರಾತ್ರಿ ವೇಳೆ ಪ್ರಯಾಣಿಸುವವರನ್ನು ದರೋಡೆಕೋರರು ಗುರಿಯಾಗಿಸಿ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ನಗುವನಹಳ್ಳಿ ಗೇಟ್ ಬಳಿಯ ಭಾರತ್ ಬೆಂಚ್ ಕಂಪೆನಿ ಎದುರು ಉಡುಪಿಯ ಶಿವಪ್ರಸಾದ- ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ದಂಪತಿ ಬೆದರಿಸಿ 30 ಗ್ರಾಂ ಚಿನ್ನಾಭರಣ ದೋಚಿದ್ದಾರೆ. ಇದಾದ ಕೆಲ ಹೊತ್ತಿನಲ್ಲಿ ಗೌರಿಪುರ ಬಳಿ ದುಷ್ಕರ್ಮಿಗಳು ಕೋಲಾರ ಜಿಲ್ಲೆ ಮಾಲೂರಿನ ಡಾ.ರಕ್ಷಿತ್ ರೆಡ್ಡಿ ಮತ್ತು ಡಾ.ಮಾನಸ ದಂಪತಿಗೆ ಬೆದರಿಸಿ 40 ಗ್ರಾಂ ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.
ಮೈಸೂರಿಗೆ ತೆರಳುತ್ತಿದ್ದ ವೇಳೆ ಡಾ.ರಕ್ಷಿತ್ ರೆಡ್ಡಿ ಅವರ ಕಾರು ಪಂಕ್ಚರ್ ಆಗಿದ್ದು, ಚಕ್ರ ಬದಲಿಸುತ್ತಿದ್ದಾಗ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನಯ ಪ್ರಕರಣ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ ಎನ್ನಲಾಗಿದೆ.












Click it and Unblock the Notifications