Kodagu: ಕಟ್ಟೆಮಾಡು ಮೃತ್ಯುಂಜಯ ದೇಗುಲದ ಅರ್ಚಕರ ಮೇಲೆ ಹಲ್ಲೆ ಮಾಡಿದ್ದೇಕೆ?
ಮಡಿಕೇರಿ, ಜನವರಿ 28: ಕೊಡಗಿನ ಕಟ್ಟೆಮಾಡು ಗ್ರಾಮದಲ್ಲಿರುವ ಮೃತ್ಯುಂಜಯ ದೇಗುಲಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿ ಪ್ರವೇಶಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಂಡ ಆಕ್ಷೇಪ ಇದೀಗ ಗ್ರಾಮವನ್ನು ದಾಟಿ ಜಿಲ್ಲೆಯಲ್ಲಿ ಕೊಡವರು ಮತ್ತು ಕೊಡವೇತರರ ನಡುವಿನ ವೈಮಸ್ಸಿಗೆ ಕಾರಣವಾಗುತ್ತಿದೆ.
ಹೋರಾಟ, ಪ್ರತಿಭಟನೆಗಳ ನಡುವೆ ಅರ್ಚಕರ ಮೇಲೆ ಹಲ್ಲೆ ನಡೆದಿರುವುದು ಶಾಂತಿಯುತ ಕೊಡಗಿನಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಒಂದೆಡೆ ಕುಳಿತು ಮಾತುಕತೆಯಿಂದ ಬಗೆಹರಿಸಿ ಕೊಳ್ಳಬೇಕಾದ ವಿಚಾರವೊಂದು ಬೇರೆ, ಬೇರೆ ರೂಪತಳೆಯುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಕೊಡಗಿನಲ್ಲಿ ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ಜೀವನ ಮಾಡಿಕೊಂಡು ಬಂದಿದ್ದು ಕಟ್ಟೆಮಾಡಿನಲ್ಲಿ ಶುರುವಾದ ಸಂಘರ್ಷ ವಿಕೋಪಕ್ಕೆ ತೆರಳದಂತೆ ನೋಡಿಕೊಂಡು ಎಲ್ಲರೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದ್ದರೆ ಸರಿಹೋಗುತ್ತಿತ್ತೇನೋ? ಆದರೆ ಹಾಗೆ ಆಗದ ಕಾರಣದಿಂದಾಗಿ ಇವತ್ತು ಅದು ಎಲ್ಲಿಂದ ಮತ್ತೆಲ್ಲಿಗೋ ಹೋದಂತೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಇಲ್ಲ ಸಲ್ಲದ ಫೋಸ್ಟ್ ಗಳನ್ನು ಹಾಕುವ ಮೂಲಕ ಸಮುದಾಯದ ನಡುವೆ ಕಿಚ್ಚು ಹಚ್ಚುವ ಕೆಲಸ ನಡೆದಿದ್ದರಿಂದ ವಿಕೋಪಕ್ಕೆ ತೆರಳುವಂತಾಗಿದೆ.
ಈಗಾಗಲೇ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆಬ್ರವರಿ 2ರಿಂದ 7ರವರೆಗೆ ಬ್ರಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಇದರ ನಡುವೆ ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಅವರನ್ನು ಮನೆಯಿಂದ ಹೊರಗೆ ಕರೆದು ಮನಬಂದಂತೆ ತೀವ್ರ ಹಲ್ಲೆ ಮಾಡಿದ್ದಾರೆ. ಇದು ಖಂಡನೀಯವಾಗಿದೆ. ಇಲ್ಲಿ ಯಾರೋ ಒಂದಿಬ್ಬರು ಮಾಡುವ ಕೃತ್ಯಗಳು ಇಡೀ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರಿಸುತ್ತಿದೆ.
ಪ್ರಧಾನ ಅರ್ಚಕರ ಮೇಲೆ ಹಲ್ಲೆ ಮಾಡಿದ್ದೇಕೆ?
ಕಟ್ಟೆಮಾಡು ದೇವಾಲಯದ ಅರ್ಚಕರಾದ ವಿಘ್ನೇಶ್ ಎಂಬುವರು ಮೂರ್ನಾಡು ನಿವಾಸಿಯಾಗಿದ್ದು, ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಅವರು ದೇಗುಲದಲ್ಲಿ ಪ್ರಧಾನ ಅರ್ಚಕರಾಗಿದ್ದಾರೆ ಎನ್ನುವುದನ್ನು ಹೊರತು ಪಡಿಸಿದರೆ ಅಲ್ಲಿ ಅವರದ್ದೇನು ಪಾತ್ರವಿಲ್ಲ. ದೇವಸ್ಥಾನ ಆಡಳಿತ ಮಂಡಳಿಯಿದ್ದು, ಈ ಆಡಳಿತ ಮಂಡಳಿಯಲ್ಲಿ ಎಲ್ಲ ಸಮುದಾಯದವರು ಸದಸ್ಯರಾಗಿದ್ದಾರೆ. ಹೀಗಾಗಿ ಪ್ರಧಾನ ಅರ್ಚಕರ ಮೇಲೆ ಏಕೆ ದಾಳಿ ಮಾಡಿದರು? ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

ಕಟ್ಟೆಮಾಡು ಮೃತ್ಯುಂಜಯ ದೇಗುಲದ ಪ್ರವೇಶ ವಿಚಾರದ ಸಂಘರ್ಷ ಒಮ್ಮತಕ್ಕೆ ಬರಲಿಲ್ಲ. ಶಾಂತಿಸಭೆಯೂ ಫಲಕೊಡಲಿಲ್ಲ. ಹೀಗಾಗಿ ತಾರ್ಕಿಕ ಅಂತ್ಯ ಕಾಣುವ ಮೊದಲೇ ಅರ್ಚಕರ ಮೇಲೆ ಹಲ್ಲೆ ನಡೆದಿರುವುದು ಬೇಸರದ ಸಂಗತಿಯಾಗಿದೆ. ಸೋಮವಾರ ಎಂದಿನಂತೆ ವಿಘ್ನೇಶ್ ಅವರು ಅವರು ದೇವಾಲಯದಿಂದ ಪೂಜೆ ಮುಗಿಸಿ ಮನೆಗೆ ಬಂದಿದ್ದರು. ಅವರ ಪತ್ನಿ ಸ್ಟುಡಿಯೋದಲ್ಲಿದ್ದರು. ಸಂಜೆ ವೇಳೆಯಲ್ಲಿ ಮೂರ್ನಾಡುವಿನ ಅವರ ಸ್ಟುಡಿಯೋಕ್ಕೆ ಆಗಮಿಸಿದ ಇಬ್ಬರು ಅವರ ಪತ್ನಿ ಬಳಿ ಮಾತನಾಡಿ ಪೂಜೆ ಮಾಡಿಸಬೇಕಾಗಿದೆ. ವಿಘ್ನೇಶ್ ಎಲ್ಲಿದ್ದಾರೆ ಎಂದು ಕೇಳಿದ್ದಾರೆ. ಅದಕ್ಕೆ ಅವರ ಪತ್ನಿ ಮನೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನ ಅರ್ಚಕರ ಮೇಲೆ ಏಕಾಏಕಿ ಹಲ್ಲೆ
ಆ ನಂತರ ಪತ್ನಿ ಹತ್ತಿರ ವಿಘ್ನೇಶ್ ಅವರ ಮೊಬೈಲ್ ನಂಬರ್ ಪಡೆದು ಫೋನ್ ಮಾಡಿ ನಿಮ್ಮನ್ನು ಭೇಟಿಯಾಗಬೇಕು ಎಂದು ಹೇಳಿದ್ದಾರೆ. ಈ ವೇಳೆ ವಿಘ್ನೇಶ್ ತಮ್ಮ ಮನೆಯ ವಿಳಾಸ ನೀಡಿ ಬರುವಂತೆ ಹೇಳಿದ್ದಾರೆ. ಅದಕ್ಕೆ ಅವರು ನಾವು ನಾನ್ ವೆಜ್ ತಿಂದಿದ್ದೇವೆ. ಹೀಗಾಗಿ ಮನೆಗೆ ಬರಲ್ಲ ನೀವೇ ಬನ್ನಿ ಎಂದು ಮನೆಯ ಸಮೀಪ ಕರೆಯಿಸಿಕೊಂಡಿದ್ದಾರೆ. ಅರ್ಚಕ ವಿಘ್ನೇಶ್ ಬರುತ್ತಿದ್ದಂತೆಯೇ ನೀವು ವಿಘ್ನೇಶ್ ಅಲ್ವಾ, ಕಟ್ಟೆಮಾಡು ದೇವಾಲಯದ ಅರ್ಚಕರು ಯಾರು ಎಂದು ಕೇಳಿದಾಗ ನಾನೇ ಪ್ರಧಾನ ಅರ್ಚಕ ಎಂದು ವಿಘ್ನೇಶ್ ಹೇಳಿದ್ದಾರೆ.
ಈ ವೇಳೆ ಏಕಾಏಕಿ ಒಬ್ಬ ವ್ಯಕ್ತಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಮತ್ತೊಬ್ಬನು ಕೂಡ ಹಲ್ಲೆ ಮಾಡಿ ಚಾಕುವನ್ನು ತೆಗೆದು ತಿವಿಯಲು ಮುಂದಾದಾಗ ವಿಘ್ನೇಶ್ ಅವರ ತಾಯಿ ಓಡಿ ಬಂದು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೆಯೂ ಕಿಡಿಗೇಡಿಗಳು ಹಲ್ಲೆ ಮಾಡಿ ನಂತರ ತೆರಳಿದ್ದಾರೆ. ಇನ್ನು ಹೊಡೆದ ವ್ಯಕ್ತಿಯನ್ನು ವಿಘ್ನೇಶ್ ಅವರು ಗುರುತಿಸಿದ್ದು ಕಾಕೋಟುಪರಂಬು ನಿವಾಸಿ ಮಂಡೇಟೀರ ಅನಿಲ್ ಎಂದು ಹೇಳಲಾಗಿದೆ. ಆತನ ಜೊತೆಯಲ್ಲಿ ಇರುವವರು ಯಾರು ಎಂದು ತಿಳಿದು ಬಂದಿಲ್ಲ. ಸದ್ಯ ವಿಘ್ನೇಶ್ ಅವರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಗ್ರೆಸ್‌ನಿಂದ ಆರೋಪಿ ಅನಿಲ್ ಅಮಾನತು
ಅರ್ಚಕರ ಮೇಲಿನ ಹಲ್ಲೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ಬ್ರಾಹ್ಮಣ ಸಮಾಜ ಮತ್ತು ಬ್ರಾಹ್ಮಣ ವಿದ್ಯಾಭಿವೃದ್ದಿ ನಿಧಿ ಕೊಡಗು ಅಧ್ಯಕ್ಷ ರಾಮಚಂದ್ರ ಮೂಗೂರು ಕೃತ್ಯವನ್ನು ಖಂಡಿಸಿದ್ದಾರೆ. ಅಲ್ಲದೆ, ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ವಿಘ್ನೇಶ್ ಭಟ್ ಗೆ ಸಾಂತ್ವಾನ ಹೇಳಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ದ ತಡ ಮಾಡದೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಮಾಡಿದ್ದಾರೆ.
ಇನ್ನು ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎರಡು ತನಿಖಾ ತಂಡ ರಚನೆ ಮಾಡಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಆರೋಪಿ ಮಂಡೇಟಿರ ಅನಿಲ್ ಮೈಸೂರು ಅಥವಾ ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಮೊಬೈಲ್ ಸ್ಚಿಚ್ ಆಫ್ ಆಗಿದೆ ಎಂದು ಹೇಳಲಾಗಿದೆ. ಆರೋಪಿ ಅನಿಲ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಆತ ಮಾಡಿದ ಕೃತ್ಯಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ವಿಷಾಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಂಡೇಟಿರ ಅನಿಲ್ ಎಂಬ ವ್ಯಕ್ತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಇವತ್ತು ನಡೆದ ಘಟನೆಯಿಂದ ನಮಗೆ ತುಂಬಾ ನೋವಾಗಿದೆ. ಆರೋಪಿ ಅನಿಲ್ ಮೇಲಿರುವ ಆರೋಪದ ಬಗ್ಗೆ ತನಿಖೆ ನಡೆಸಿ, ಆರೋಪ ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ, ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಅನಿಲ್ ಭಾಗಿ ಎಂದು ಗೊತ್ತಾಗಿರುವುದರಿಂದ ಈತನನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications