ಕೊಡಗಿನಲ್ಲಿ ಅರ್ಚಕರ ಹಲ್ಲೆಗೆ ಸಹಕರಿಸಿದ ಇಬ್ಬರ ಬಂಧನ: ಆರೋಪಿಗಾಗಿ ತಲಾಸೆ!
ಮಡಿಕೇರಿ, ಜನವರಿ 31: ಕೊಡಗಿನ ಕಟ್ಟೆಮಾಡು ಮೃತ್ಯುಂಜಯ ದೇಗುಲದ ಪ್ರಧಾನ ಅರ್ಚಕರ ಮೇಲೆ ನಡೆದ ಹಲ್ಲೆಗೆ ಸಹಕರಿಸಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಪ್ರಮುಖ ಆರೋಪಿ ಮತ್ತು ಆತನ ಸಹಚರ ಇನ್ನೂ ಪತ್ತೆಯಾಗದ ಹಿನ್ನಲೆಯಲ್ಲಿ ಪತ್ತೆಕಾರ್ಯವನ್ನು ಮುಂದುವರೆಸಲಾಗಿದೆ. ಹಾಗೆಯೇ ಆರೋಪಿಗಳ ಕುರಿತಂತೆ ಮಾಹಿತಿ ನೀಡಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸದ್ಯ ವಿರಾಜಪೇಟೆಯ ಕಾವಾಡಿ ಗ್ರಾಮದ ನೆಲ್ಲಮಕ್ಕಡ ಎಂ.ಶಿವಪ್ಪ ಮತ್ತು ಮೈತಾಡಿ ಗ್ರಾಮದ ಬೊಳ್ಯಪಂಡ ಎಂ.ಭೀಮಯ್ಯ ಎಂಬಿಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳು ತಪ್ಪಿಸಿಕೊಳ್ಳಲು ಬಳಸಲಾದ ಮಾರುತಿ 800 ಕಾರು ಹಾಗೂ ಅಪರಾಧ ಕೃತ್ಯಕ್ಕೆ ಬಳಸಿದ ಬೋಲೇರೋ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂರ್ನಾಡಿನಲ್ಲಿ ಜನವರಿ 27ರಂದು ಸಂಜೆ ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದ ಅರ್ಚಕರಾದ ಶ್ರೀವಿಘ್ನೇಶ್ ಭಟ್ ಹಾಗೂ ಅವರ ತಾಯಿ ಗೀತಾ (76) ರವರ ಮೇಲೆ ಆರೋಪಿ ಮಂಡೇಟಿರ ಅನಿಲ್ ಮತ್ತು ಸಹಚರ ಹಲ್ಲೆ ಮಾಡಿದ್ದರು.

ಆ ನಂತರ ಅವರು ತಪ್ಪಿಸಿಕೊಳ್ಳಲು ಶಿವಪ್ಪ ಮತ್ತು ಭೀಮಯ್ಯ ಸಹಕರಿಸಿದ್ದರು ಅವರನ್ನು ಬೊಲೆರೋ ಮತ್ತು ಮಾರುತಿ 800 ಕಾರಿನಲ್ಲಿ ಕರೆದೊಯ್ಯಲು ಇವರಿಬ್ಬರು ಸಹಾಯ ಮಾಡಿದ್ದರು. ಅಲ್ಲದೆ ವಾಹನ ಯಾರ ಕಣ್ಣಿಗೂ ಬೀಳದಂತೆ ಕಾಫಿತೋಟದಲ್ಲಿ ಮುಚ್ಚಿಟ್ಟಿದ್ದರು. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದು, ಅವರು ಎಲ್ಲಿದ್ದಾರೆ ಎನ್ನುವ ಸುಳಿವು ಇಲ್ಲಿತನಕ ಸಿಕ್ಕಿಲ್ಲ. ಆದರೆ ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಅದರಂತೆ ಮಡಿಕೇರಿ ಉಪ ವಿಭಾಗದ ಡಿ ವೈ ಎಸ್ ಪಿ ಸೂರಜ್ ರವರ ತಂಡ ತನಿಖೆ ನಡೆಸಿ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಶಿವಪ್ಪ ಮತ್ತು ಭೀಮಯ್ಯ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಮನವಿ
ಇನ್ನು ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಯಾವುದೇ ರೀತಿಯಲ್ಲಿ ಸಹಾಯ ಮಾಡಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ಅಥವಾ ಆರೋಪಿಗಳಿಗೆ ಸಹಾಯ ಮಾಡುವವರ ಕುರಿತು ಮಾಹಿತಿ ಪೊಲೀಸ್ ಕಂಟ್ರೋಲ್ ರೂಂಗೆ (08272228330...9480804900) ಒದಗಿಸುವಂತೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆ ಕೋರಿಕೊಂಡಿದೆ. ಅಲ್ಲದೆ ಮಾಹಿತಿದಾರರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.

ಇನ್ನೊಂದೆಡೆ ಕಟ್ಟೆಮಾಡು ದೇವಾಲಯದ ಅರ್ಚಕ ವಿಘ್ನಶ್ ಭಟ್ ಹಾಗು ಅವರ ತಾಯಿ ಗೀತಾ ಹಲ್ಲೆಗೆ ಒಳಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಳೆದ 4 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ವೃದ್ಧೆ ಗೀತಾ ಚೇತರಿಸಿ ಕೊಳ್ಳುತ್ತಿದ್ದಾರೆ. ಅರ್ಚಕ ವಿಘ್ನೇಶ್ ರವರ ಮೂಗಿಗೆ ಬಲವಾದ ಪೆಟ್ಟು ಬಿದ್ದಿದ್ದು ಶಸ್ತ್ರ ಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿರುವ ವಿಘ್ನೇಶ್ ಭಟ್ ಕೆಲವರು ಹೆಂಡ ಕುಡಿಸಿ ಕಳುಹಿಸಿ ಹೊಡೆಸಿದ್ದಾರೆ. ಹಲ್ಲೆ ನಡೆಸಿದವರನ್ನು ಹಾಗೂ ಕೃತ್ಯ ಎಸಗಲು ಕಾರಣದವರನ್ನು ಕೂಡಲೇ ತನಿಖೆ ನಡೆಸಿ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಅರ್ಚಕರ ಮೇಲಿನ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಕೊಡಗು ಎಸ್ಪಿ ಕೆ.ರಾಮರಾಜನ್ ಅವರು ಕೊಡಗಿನಲ್ಲಿ ಎರಡು ಸಮುದಾಯಗಳ ನಡುವಿನ ಭಿನ್ನಮತ ಪರಿಹಾರಕ್ಕೆ ಜಿಲ್ಲಾಡಳಿತದಿಂದ ಸತತ ಪ್ರಯತ್ನ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ಟೀಕೆ ಮಾಡುವುದರ ಬಗ್ಗೆ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾವಹಿಸಿದೆ. ಯಾರೇ ಆಗಲಿ ಕಟ್ಟೆಮಾಡು ದೇವಾಲಯದ ವಿವಾದ ಬಳಸಿ ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ಮತ್ತು ಇದಕ್ಕೆ ಪ್ರೇರೇಪಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ವಿವಾದ ಶಾಂತಿಯುತ ಅಂತ್ಯ ಕಾಣುವಂತಾಗಲಿ
ಹಲ್ಲೆ ಹಿಂದೆ ದೇವಾಲಯದ ವಿವಾದ ಇದೆಯೇ ಅಥವಾ ವೈಯಕ್ತಿಕ ವಿಚಾರಗಳಿಗೆ ಹಲ್ಲೆ ಆಗಿದೆಯಾ ಎಂಬುದರ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿಯಲಿದೆ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸುವುದು ಎಲ್ಲರಿಗೂ ಇರುವ ಹಕ್ಕಾಗಿದೆ. ಯಾವುದೇ ಜನಾಂಗದ ಪ್ರತಿಭಟನೆಯನ್ನು ಪೊಲೀಸ್ ಇಲಾಖೆಯಿಂದ ತಡೆಗಟ್ಟುವ ಚಿಂತನೆಯಿಲ್ಲ. ಎಷ್ಟೇ ಜನ ಬರಲಿ, ಶಾಂತಿ ಕಾಪಾಡಿಕೊಂಡು ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಲಿದೆ ಎಂದು ಎಸ್ಪಿ ಹೇಳಿದ್ದಾರೆ.
ಈ ನಡುವೆ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಫೆ.2ರಿಂದ 7ರವರೆಗೆ ಕುಟ್ಟದಿಂದ ಮಡಿಕೇರಿಯವರೆಗೆ ಕೊಡವರ ಶಾಂತಿಯುತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಶಾಂತಿ ಸೌಹಾರ್ಧತೆಗೆ ಹೆಸರಾಗಿದ್ದ ಕೊಡಗಿನಲ್ಲಿ ಕಿಡಿಗೇಡಿಗಳ ನಡವಳಿಕೆಗಳು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದು, ಶಾಂತಿಯುತವಾಗಿ ತಾರ್ಕಿಕ ಅಂತ್ಯ ಕಾಣಿಸದೆ ಹೋದರೆ ಮುಂದಿನ ದಿನಗಳಲ್ಲಿ ಇದು ಬೇರೆ, ಬೇರೆ ರೂಪತಳೆಯುವ ಸಾಧ್ಯತೆಯಿದೆ. ಹೋರಾಟ, ಪ್ರತಿಭಟನೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸದ್ಯ ಎಲ್ಲರೂ ಪ್ರತಿಷ್ಠೆ ಬದಿಗಿಟ್ಟು ಒಮ್ಮತದ ತೀರ್ಮಾನಕ್ಕೆ ಬರಬೇಕಾಗಿದೆ. ಅದು ಸಾಧ್ಯವಾಗಲಿ ಎಂಬುದೇ ಆಶಯ.












Click it and Unblock the Notifications