ಪಶ್ಚಿಮ ಬಂಗಾಳ IOC ಘಟಕದಲ್ಲಿ ಅಗ್ನಿ ಅವಘಡ; 3 ಸಾವು, 30 ಮಂದಿಗೆ ಗಾಯ
ಕೋಲ್ಕತ್ತಾ, ಡಿಸೆಂಬರ್ 21: ಪಶ್ಚಿಮ ಬಂಗಾಳದ ಹಲ್ದಿಯಾದಲ್ಲಿ ಇರುವ ಐಒಸಿಎಲ್ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಪ್ರಾಣ ಬಿಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಲ್ದಿಯಾ ಪುರಸಭೆಯ ಅಧ್ಯಕ್ಷ ಎಸ್‌ಕೆ ಅಜ್ಗರ್ ಅಲಿ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹಲ್ದಿಯಾ ಸಂಸ್ಕರಣಾಗಾರದ ವಿವಿಧ ಪ್ರಮುಖ ಘಟಕಗಳ ಸ್ಥಗಿತಗೊಳಿಸುವುದು ಮತ್ತು ನಿರ್ವಹಣೆಯನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಅನಾಹುತ ಸಂಭವಿಸಿದೆ. ಮೋಟಾರ್ ಸ್ಪಿರಿಟ್ ಕ್ವಾಲಿಟಿ (MSQ) ಘಟಕದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ.
ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಗಾಯಗೊಂಡ 47 ಜನರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಅವರನ್ನು ಹಲ್ದಿಯಾ ರಿಫೈನರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರಲ್ಲಿ ಮೂವರು ಸಾವನ್ನಪ್ಪಿದ್ದು, ಇನ್ನೂ ಏಳು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಅಗ್ನಿ ಅವಘಡದ ಬಗ್ಗೆ ಮಮತಾ ಬ್ಯಾನರ್ಜಿ ಸಂತಾಪ:
ಹಲ್ದಿಯಾದಲ್ಲಿನ ಇಂಡಿಯನ್ ಆಯಿಲ್ ರಿಫೈನರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ನಾನು ತೀವ್ರವಾಗಿ ನೊಂದಿದ್ದೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಗ್ರೀನ್ ಕಾರಿಡಾರ್ ಮೂಲಕ ಗಾಯಾಳುಗಳನ್ನು ಕೋಲ್ಕತ್ತಾಕ್ಕೆ ಕರೆತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಸುಟ್ಟ ಗಾಯಗಳಿಂದ ಮೂವರು ಸಾವು:
"44 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಗಂಭೀರ ಗಾಯದ ಕಾರಣದಿಂದಾಗಿ ದುರುದೃಷ್ಟವಶಾತ್ ಮೂವರು ಪ್ರಾಣ ಬಿಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ," ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. "ಘಟನೆಯ ಮೂಲ ಕಾರಣದ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ" ಎಂದು ಕಂಪನಿ ತಿಳಿಸಿದೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಮೇಲೆ ಉಲ್ಲೇಖಿಸಿದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications