ಕಾಶ್ಮೀರದ ಬಗ್ಗೆ ಅಂತೂ ಹೊರಬಂತು ದೀದಿ ಪ್ರತಿಕ್ರಿಯೆ!
ಕೋಲ್ಕತ್ತಾ, ಆಗಸ್ಟ್ 06: "ಇಂಥ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾವು ಈ ಮಸೂದೆಯ ಪರ ಮತಹಾಕುವುದಕ್ಕೆ ಸಾಧ್ಯವಿಲ್ಲ" ಎಂದು 370 ನೇ ವಿಧಿ ರದ್ದತಿಯ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಕೇಂದ್ರ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಿತು. ಆದರೆ ಈ ಬಗ್ಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಸೃಷ್ಟಿಯಾಗಿತ್ತು. ಆದರೆ ಕುತೂಹಲಕ್ಕೆ ತಣ್ಣೀರೆರಚುವಂತೆ ಅವರು ಯಾವ ಪ್ರತಿಕ್ರಿಯೆಯನ್ನೂ ನೀಡದೆ ತಟಸ್ಥವಾಗುಳಿದಿದ್ದರು.
ವಿವಾದಾತ್ಮಕ ವಿಷಯವಾಗಿರುವುದರಿಂದ ಯಾವ ರೀತಿಯ ಪ್ರತಿಕ್ರಿಯೆ ನೀಡಿದರೂ ಸಮಸ್ಯೆಯಾಗುತ್ತದೆಂದು ಟಿಎಂಸಿಯ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಅವರು ನೀದಿದ ಸಲಹೆಯ ಮೇರೆಗೆ ದೀದಿ ಮೌನವಾಗಿದ್ದಾರೆ ಎನ್ನಲಾಗಿತ್ತು.

ಆದರೆ ಪತ್ರಕರ್ತರ ಒತ್ತಾಯದ ಮೇರೆಗೆ ಈ ಕುರಿತು ಮಮತಾ ಬ್ಯಾನರ್ಜಿ ಇಂದು ಪ್ರತಿಕ್ರಿಯೆ ನೀಡಿದ್ದು, "ನಾವು ಈ ಮಸೂದೆಯನ್ನು ಬೆಂಬಲಿಸುವುದಿಲ್ಲ, ಇದರ ಪರ ಮತ ಹಾಕುವುದಿಲ್ಲ. ಅವರು ಎಲ್ಲಾ ರಾಜಕೀಯ ಪಕ್ಷ ಮತ್ತು ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರಕ್ಕೆ ಬರಬೇಕಿತ್ತು. ಕಾಶ್ಮೀರ ವಿಷಯದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ನೀವು(ಕೇಂದ್ರ ಸರ್ಕಾರ) ಎಲ್ಲರೊಂದಿಗೂ ಚರ್ಚಿಸಬೇಕು" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಫಾರೂಖ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಅವರ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರಿಗೆ ಉಸಿರುಕಟ್ಟಿಸುವಂಥ ವಾತಾವರಣ ಸೃಷ್ಟಿಸಬೇಡಿ ಎಂದು ನಾನು ಸರ್ಕಾರಕ್ಕೆ 'ಮನವಿ' ಮಾಡುತ್ತೇನೆ. ಅವರು ಉಗ್ರರಲ್ಲ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಅವರನ್ನು ಬಿಡುಗಡೆಗೊಳಿಸಬೇಕು" ಎಂದು ಸಹನೆಯಿಂದಲೇ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಎಂದರೆ ಸಿಡಿಮಿಡಿ ಎನ್ನುತ್ತಿದ್ದ ಮಮತಾ ಬ್ಯಾನರ್ಜಿ ಅವರು ಇಂಥ ಮಹತ್ವದ ವಿಚಾರದ ಕುರಿತು ಇಷ್ಟೆಲ್ಲ ತಣ್ಣಗೆ ಪ್ರತಿಕ್ರಿಯೆ ನೀಡಿದ್ದು ಅಚ್ಚರಿ ಮೂಡಿಸಿದೆ.












Click it and Unblock the Notifications