ಚಿತ್ರಗಳು : ಸಾಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ
ಕೋಲ್ಕತ್ತಾ, ಅಕ್ಟೋಬರ್ 24 : ಪಶ್ಚಿಮ ಬಂಗಾಳದ ಸಾಂತ್ರಗಚಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಲ್ಲಿ ಇಬ್ಬರು ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ. ಮೃತಪಟ್ಟ ಪ್ರಯಾಣಿಕರ ಕುಟುಂಬ ವರ್ಗಕ್ಕೆ ಭಾರತೀಯ ರೈಲ್ವೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಮಂಗಳವಾರ ಸಂಜೆ 6.30ರ ವೇಳೆಗೆ ಸಾಂತ್ರಗಚಿ ರೈಲು ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಕಾಲ್ತುಳಿತ ಸಂಭವಿಸಿತ್ತು. ಎರಡು ರೈಲು ಒಟ್ಟಿಗೆ ಬಂದಿದ್ದರಿಂದ ಮೇಲ್ಸೇತುವೆಯಲ್ಲಿ ಜನಜಂಗುಳಿ ಹೆಚ್ಚಾಗಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಕಾಲಕಾಂತ್ ಸಿಂಗ್ (32) ಮತ್ತು ತಸೀರ್ ಸರ್ದಾರ್ (61) ಮೃತಪಟ್ಟಿದ್ದಾರೆ ಎಂದು ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೃತಪಟ್ಟವರ ಕುಟುಂಬಕ್ಕೆ ರೈಲ್ವೆ ಇಲಾಖೆ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.
ಪಶ್ಚಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೌರಾ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಕಾಲ್ತಿಳಿತದ ಘಟನೆ ಬಗ್ಗೆ ತನಿಖೆ ನಡೆಸಲು ರೈಲ್ವೆ ಇಲಾಖೆ ಆದೇಶ ನೀಡಿದೆ....

ಒಟ್ಟಿಗೆ ಬಂದ ಎರಡು ರೈಲುಗಳು
ಮಂಗಳವಾರ ಸಂಜೆ 6.30ರ ಸುಮಾರಿಗೆ ಸಾಂತ್ರಗಚಿ ರೈಲು ನಿಲ್ದಾಣಕ್ಕೆ ಎರಡು ರೈಲುಗಳು ಒಟ್ಟಿಗೆ ಬಂದವು. ಪ್ರಯಾಣಿಕರು ರೈಲನ್ನು ಏರಲು ಧಾವಂತಗೊಂಡರು ಆಗ ಮೇಲ್ಸೇತುವೆಯಲ್ಲಿ ಜನಜಂಗುಳಿ ಹೆಚ್ಚಾಗಿ ಕಾಲ್ತುಳಿತ ನಡೆಯಿತು. ಘಟನೆಯಲ್ಲಿ ಇಬ್ಬರು ಮೃತಪಟ್ಟರು.

ಆಗ್ನೇಯ ರೈಲ್ವೆ ಹೇಳಿದ್ದೇನು?
ನಾಗರ್‌ಕೊಯಿಲ್-ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಎರಡು ಸ್ಥಳೀಯ ರೈಲುಗಳು ಏಕಕಾಲಕ್ಕೆ ಸಾಂತ್ರಗಚಿ ರೈಲು ನಿಲ್ದಾಣಕ್ಕೆ ಆಗಮಿಸಿವೆ. ಇದರಿಂದಾಗಿ ಪ್ರಯಾಣಿಕರು ಧಾವಂತಗೊಂಡು ಕಾಲ್ತುಳಿತ ನಡೆದಿದೆ ಎಂದು ಆಗ್ನೇಯ ರೈಲ್ವೆ ಘಟನೆ ಬಗ್ಗೆ ವಿವರಣೆ ನೀಡಿದೆ.

12 ಜನರಿಗೆ ಗಾಯ
ಕಾಲ್ತುಳಿತದಲ್ಲಿ 12 ಜನರು ಗಾಯಗೊಂಡರು ಅವರನ್ನು ಹೌರಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಭಾರತೀಯ ರೈಲ್ವೆ ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ, ಸಾಮಾನ್ಯವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರ ಮೃತಪಟ್ಟವರಿಗೆ 5 ಲಕ್ಷ ಮತ್ತು ಗಾಯಗೊಂಡವರಿಗೆ 1 ಲಕ್ಷ ಪರಿಹಾರ ಘೋಷಿಸಿದೆ.

ತನಿಖೆಗೆ ಆದೇಶ
ಎರಡು ರೈಲುಗಳು ಒಟ್ಟಿಗೆ ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಈ ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಶಾಲಿಮಾರ್-ವಿಶಾಖಪಟ್ಟಣ ಎಕ್ಸ್‌ಪ್ರೆಸ್, ಸಾಂತ್ರಗಚಿ-ಚೆನ್ನೈ ಎಕ್ಸ್‌ಪ್ರೆಸ್ ರೈಲುಗಳು ನಿಲ್ದಾಣಕ್ಕೆ ಬಂದವು. ಇನ್ನು ಕಾಲ್ತುಳಿತ ಘಟನೆ ಬಗ್ಗೆ ತನಿಖೆ ನಡೆಸಲು ಆಗ್ನೇಯ ರೈಲ್ವೆ ಆದೇಶ ನೀಡಿದೆ.












Click it and Unblock the Notifications