Ramesh Kumar: ಮುಸ್ಲಿಂ ಮುಖಂಡರ ಎದುರು ಕಣ್ಣಿರು ಹಾಕಿದ್ಯಾಕೆ ರಮೇಶ್ ಕುಮಾರ್?
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಸ್ಲಿಂ ಮುಖಂಡರ ಎದುರು ಕಣ್ಣೀರು ಹಾಕಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮುಸ್ಲಿಂ ಮುಖಂಡರೊಬ್ಬರ ಆರೋಗ್ಯವನ್ನು ವಿಚಾರಿಸುವ ಸಂದರ್ಭದಲ್ಲಿ ದುಃಖವನ್ನು ತಡೆಯಲಾರೆ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ದರ್ಗಾದಲ್ಲಿ ಮುಸ್ಲಿಂ ಮುಖಂಡರ ಎದುರು ಕಣ್ಣೀರು ಹಾಕಿದ ಮಾಜಿ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್. #karnatakapolitics #rameshkumar pic.twitter.com/rApYgHVftf
— Naveen Navi (@IamNavinaveen) April 20, 2023
ಏಪ್ರಿಲ್ 18ರಂದು ಕೋಲಾರ ಜಿಲ್ಲೆ, ಶ್ರೀನಿವಾಪುರ ತಾಲೂಕಿನ ಅಡ್ಡಗಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮುನ್ನ ಅವರು, ತಮ್ಮ ಸ್ವಗ್ರಾಮದಲ್ಲಿರುವ ಮಸೀದಿಗೆ ಭೇಟಿ ನೀಡಿದ್ದ ವೇಳೆ ಮುಸ್ಲಿಂ ಮುಖಂಡ ಎದುರಾಗಿದ್ದಾನೆ. ಆತನಿಗೆ ಪಾರ್ಶ್ವವಾಯುವಿನಿಂದ ಅಂಗವೈಕಲ್ಯ ಆಗಿರುವುದನ್ನು ನೋಡಿ ರಮೇಶ್ ಕುಮಾರ್ ದುಃಖಿತರಾಗಿದ್ದು, ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ರಮೇಶ್ ಕುಮಾರ್ ಮಂಗಳವಾರದಂದು ನಾಮಪತ್ರ ಸಲ್ಲಿಕೆ ಮಾಡಿದರು. ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 4.51 ಕೋಟಿ ರುಪಾಯಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದರು. ರಾಯಲ್ಪಾಡು ಹೋಬಳಿಯಲ್ಲಿ 57.25 ಎಕರೆ ಕೃಷಿಭೂಮಿಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ರಮೇಶ್ ಕುಮಾರ್ ಪತ್ನಿ ವಿಜಯಮ್ಮ ನಿಧನರಾಗಿದ್ದರು. ರಮೇಶ್ ಕುಮಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ಸಿಗದಿದ್ದಕ್ಕೆ ರಮೇಶ್ ಕುಮಾರ್ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಈ ಬೆನ್ನಲ್ಲೇ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾತುಕತೆ ನಡೆಸಿದ್ದರು. ಸಿದ್ದರಾಮಯ್ಯಗೆ ಕೋಲಾರದಲ್ಲಿ ಟಿಕೆಟ್ ಸಿಗದಿದ್ದರೆ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು ಎನ್ನಲಾಗಿತ್ತು, ಆದರೆ ಪಕ್ಷದ ವರಿಷ್ಠರು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಒಬ್ಬರಿಗೆ ಒಂದೇ ಕ್ಷೇತ್ರದಲ್ಲಿ ಟಿಕೆಟ್ ಎನ್ನುವ ನಿಯಮಕ್ಕೆ ಅಂಟಿಕೊಂಡ ಕಾಂಗ್ರೆಸ್ ಕೋಲಾರದಿಂದ ಸಿದ್ದರಾಮಯ್ಯಗೆ ಟಿಕೆಟ್ ನಿರಾಕರಿಸಿತ್ತು. ಸಿದ್ದರಾಮಯ್ಯ ಸದ್ಯ ತಮ್ಮ ಸ್ವಕ್ಷೇತ್ರ ವರುಣಾದಲ್ಲಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಸಿದ್ದು ಎದುರಿಗೆ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ.
ರಮೇಶ್ ಕುಮಾರ್ ಕಣ್ಣಿರು ಹಾಕಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕ ರೀತಿ ಅಭಿಪ್ರಾಯಗಳು ಕೇಳಿಬಂದಿವೆ. ಹೆಚ್ಚಿನ ಜನ ರಾಜಕಾರಣಿಗಳು ಚುನಾವಣೆ ಬಂದರೆ ಸಾಕು ಕಣ್ಣೀರಿನ ನಾಟಕ ಶುರು ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ರಮೇಶ್ ಕುಮಾರ್ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ವೋಟಿಗಾಗಿ ಇಷ್ಟೆಲ್ಲಾ ನಾಟಕ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications