9 ವರ್ಷದಲ್ಲಿ ಹಿಂದೂಗಳಿಗೆ ಏನು ಅನುಕೂಲ ಆಗಿದೆ: ಕಾಂಗ್ರೆಸ್ ನಾಯಕ
ಧಾರವಾಡ ಡಿಸೆಂಬರ್ 08: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸೂಪರ್‌ಸ್ಟಾರ್ ಆಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಈ ರೀತಿ ಮಾತನಾಡದ ಅವರು ಈಗ ಕೇವಲ ಐದು ವಿಷಯಗಳನ್ನೇ ಮಾತನಾಡುತ್ತಿದ್ದಾರೆ. ಹಿಂದುಗಳ ಬಗ್ಗೆ ಮಾತನಾಡುತ್ತಾರೆ. ಕಳೆದ 9 ವರ್ಷಗಳಲ್ಲಿ ಹಿಂದೂಗಳಿಗೆ ನಿಮ್ಮಿಂದ ಏನು ಅನುಕೂಲ ಆಗಿದೆ? ಎಂದು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಕುರಿತು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನೀವು ಮಾಧ್ಯಮದವರು ಯತ್ನಾಳ್‌ರನ್ನು ಮಾತನಾಡಿಸಿ ಟಿಆರ್‌ಪಿ ಪಡೆಯುತ್ತೀರಿ. ಅವರಿಗೂ ಟಿಆರ್‌ಪಿ ಬೇಕು. ಅದಕ್ಕೆ ಹೀಗೆಲ್ಲ ಮಾತನಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೂ, ಮುಸಲ್ಮಾನರು, ಪಾಕಿಸ್ತಾನ್, ಐಸಿಸ್ ಸೇರಿದಂತೆ ಇವೇ ಐದಾರು ವಿಷಯಗಳನ್ನು ಬಿಟ್ಟು ಬೇರೆನು ಮಾತನಾಡುವುದಿಲ್ಲ ಎಂದು ಲಾಡ್ ಹರಿಹಾಯ್ದರು.
ಬಿಜೆಪಿ ಇದ್ದಾಗ ಮಾತನಾಡಿಲ್ಲ ಏಕೆ?
ಇಂತಹ ವಿಷಯಗಳ ಕುರಿತು ಮಾತನಾಡುವ ಅವರು ಕೇಂದ್ರದಲ್ಲಿ ಅವರದ್ದೇ ಬಿಜೆಪಿ ಸರ್ಕಾರ ಇದೆ. ಆರು ತಿಂಗಳ ಹಿಂದೆ ರಾಜ್ಯದಲ್ಲಿ ಅವರದ್ದೆ ಬಿಜೆಪಿ ಸರ್ಕಾರ ಇತ್ತು. ಆಗ ಏಕೆ ಈ ರೀತಿಯಾಗಿ ಮುಸಲ್ಮಾನ, ಐಸಿಸ್ ಎಂದು ಮಾತನಾಡಲಿಲ್ಲ. ಇದೀಗ ನಮ್ಮ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಈ ರೀತಿಯ ಮಾತನಾಡುತ್ತಿದ್ದಾರೆ. ಐದು ವರ್ಷದ ಹಿಂದೆ ಹೀಗೆಲ್ಲ ಇರಲಿಲ್ಲ. ಆಗ ಅವರು ಐಸಿಸ್ ಬಗ್ಗೆ ಮಾತನಾಡಬೇಕಿತ್ತು ಎಂದು ಪ್ರಶ್ನಿಸಿದರು.
ಮಾಧ್ಯಮಗಳು ದಯಮಾಡಿ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಕಳೆದ ಒಂಬತ್ತು ವರ್ಷದಲ್ಲಿ ಒಂದು ಕೋಟಿ ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಯತ್ನಾಳ್ ಅವರನ್ನು ಕೇಳಿ. ಬರೀ ಅವರು ಹಿಂದುಗಳ ಬಗ್ಗೆ ಮಾತನಾಡುತ್ತಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಹಿಂದೂಗಳಿಗೆ ನಿಮ್ಮಿಂದ, ಬಿಜೆಪಿ ಸರ್ಕಾರದಿಂದ ಏನು ಪ್ರಯೋಜನ ಆಗಿದೆ ಎಂದು ಕೇಳಿದರು.

ಯತ್ನಾಳ್ ಅವರು ಕೇವಲ ರಾಜಕೀಯ ಪ್ರಚಾರಕ್ಕಾಗಿ ಮಾತಾಡಿದರೆ ನಾವು ಏನು ಉತ್ತರ ಕೋಡಬೇಕು.
ಯತ್ನಾಳ ಸಾಹೇಬ್ರು ಒನ್‌ಟು ತ್ರಿ ಆಲ್ ಇಂಡಿಯಾ ಫ್ರಿ, ಏನಾದ್ರು ಮಾತಾಡಬಹು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಂತೋಷ್ ಲಾಡ್ ಹೀಗೆ ಪ್ರತಿಕ್ರಿಯಿಸಿದರು.
ಐಸಿಸ್ ಮೌಲ್ವಿ ಜತೆ ಸಿಎಂ ಹೇಳಿಕೆಗೆ ತಿರುಗೇಟು
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯ ಮುಸ್ಲಿಮರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಿಎಂ ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದ ಮೌಲ್ವಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನೊಂದು ವಾರದಲ್ಲಿ ಮಾತನಾಡುತ್ತೇನೆ ಎಂದು ಆರೋಪಿಸಿದ್ದರು. ಈ ಕುರಿತು ಕಾಂಗ್ರೆಸ್ ನಾಯಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಿರುಗೇಟು ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ಯತ್ನಾಳ್ ಅವರಿಗೆ ನಾನು ಟಾರ್ಗೆಟ್ ಅಲ್ಲ, ಅವರಿಗೆ ಪ್ರಧಾನಿ ಮೋದಿ ಟಾರ್ಗೆಟ್. ಏಕೆಂದರೆ ಅವರಿಗೆ ಕರ್ನಾಟಕ ಬಿಜೆಪಿ ಹುದ್ದೆಗಳನ್ನು ನೀಡಲಿಲ್ಲ. ಹೀಗಾಗಿ ಅವರು ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.












Click it and Unblock the Notifications