ಕರ್ನಾಟಕ 28 ಲೋಕಸಭಾ ಕ್ಷೇತ್ರಗಳ ಲೆಕ್ಕಾಚಾರ: ಕುಮಾರಸ್ವಾಮಿ ಕೊಟ್ಟ ಅಂಕಿ ಅಂಶಗಳು ಇಲ್ಲಿವೆ
ಬೆಂಗಳೂರು, ಜೂನ್ 04: ದೇಶದಲ್ಲಿ ಎನ್ ಡಿಎ ಪರವಾದ ಅಲೆ ಇದೆ. ಮೂರನೇ ಬಾರಿಗೆ ಮೋದಿ ಸರ್ಕಾರ ಬರುವುದು ಖಚಿತ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಉತ್ತಮ ಫಲಿತಾಂಶ ನೀಡಲಿದೆ. ಅದನ್ನೇ ಮತಗಟ್ಟೆ ಸಮೀಕ್ಷೆ ಹೇಳಿದೆ. ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕೊನೆಪಕ್ಷ 25 ಸೀಟು ಗೆಲ್ಲುತ್ತೇವೆ. ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದು ಮೋದಿ ಎಕ್ಸಿಟ್ ಪೋಲ್, ಮಿಡಿಯಾ ಎಕ್ಸಿಟ್ ಪೋಲ್ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದು ಅವರ ಅಭಿಪ್ರಾಯ.ಇಂದು ಮಧ್ಯಾಹ್ನದವರೆಗೆ ಅವರು ಸಂತೋಷವಾಗಿರಲಿ. ಅವರ ಸಂತೋಷಕ್ಕೆ ನಾನು ಯಾಕೆ ಅಡ್ಡಿಪಡಿಸಲಿ, ಅವರು ಸಂತೋಷವಾಗಿರಲಿ ಬಿಡಿ ಎಂದು ಕುಮಾರಸ್ವಾಮಿ ತಿಳಿಸಿದರು.

ವಿಧಾನಸಭೆ ಚುನಾವಣೆ ನಂತರ ಕೇಂದ್ರದ ಗೃಹ ಸಚಿವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮೈತ್ರಿಗೆ ಒಪ್ಪಿದರು. ಎರಡೂ ಪಕ್ಷಗಳ ಮೈತ್ರಿಯಲ್ಲಿ ಒಟ್ಟಾಗಿ ಹೋಗಬೇಕೆಂದು ಸಲಹೆ ನೀಡಿದರು. ಮೈತ್ರಿಯಾಗಿ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡಿದ್ದೆವೆ. ಪ್ರಧಾನಿ 200ಕ್ಕೂ ಹೆಚ್ಚು ಪ್ರಚಾರ ಸಭೆ ನಡೆಸಿದ್ದರು. ಕರ್ನಾಟಕದಲ್ಲಿ ಎನ್ ಡಿಎ ಗೆಲುವಿಗೆ ಅವರು ಕಾಣಿಕೆ ದೊಡ್ಡದು. ಅದಕ್ಕಾಗಿ ನಾನು ಪ್ರಧಾನಿಗಳು ಸೇರಿ ಅಮಿತ್ ಶಾ, ನಡ್ಡಾ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ವಿಚಾರ ಏನಿದ್ದರೂ ತನಿಖೆ ಮಾಡುತ್ತಿರುವ ಎಸ್ ಐಟಿ ಹಾಗೂ ಸರಕಾರಕ್ಕೆ ಬಿಟ್ಟಿದ್ದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಪ್ರಜ್ವಲ್ ಘಟನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಒಂದು ತಿಂಗಳಿಂದ ನೋಡಿದ್ದೇನೆ. ಅವರು ವಿದೇಶದಿಂದ ವಾಪಸ್ ಬಂದು ಎಸ್ ಐಟಿ ಮುಂದೆ ಹಾಜರಾಗಬೇಕು ಎಂದು ನಾನು ಮತ್ತು ದೇವೇಗೌಡರು ಹೇಳಿದ್ದೆವು. ಜತೆಗೆ ದೇವೇಗೌಡರು ಕೊನೆಯ ಎಚ್ಚರಿಕೆ ನೀಡಿದ್ದರು. ನಮ್ಮ ಮಾತಿನಂತೆ ಅವರು ಬಂದು ಹಾಜರಾಗಿದ್ದಾರೆ. ಅಲ್ಲಿಗೆ ನಮ್ಮ ಕುಟುಂಬದ ಪಾತ್ರ ಮುಗಿಯಿತು. ಇನ್ನು ಎಸ್ ಐಟಿ ಮತ್ತು ಸರ್ಕಾರದ್ದೇ ಜವಾಬ್ದಾರಿ ಎಂದರು.
ಪ್ರಜ್ವಲ್ ರೇವಣ್ಣ ಈಗ ವಾಪಸ್ ಬಂದಿದ್ದಾರೆ. ತನಿಖೆ ನಡೆಯುತ್ತಿದೆ. ಅವರು ಗೆದ್ದ ಮೇಲೆ ಏನೂ ಅಂತ ನೋಡೋಣ ಎಂದ ಅವರು, ಭಾವಾನಿ ರೇವಣ್ಣ ಅವರಿಗೆ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ಪ್ರಕಾರ ಭವಾನಿ ರೆವಣ್ಣ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಪದೇ ಪದೆ ಮಾತನಾಡುವುದಿಲ್ಲ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎನ್.ಜವರಾಯಿಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕು ಎನ್ನುವುದು ಪಕ್ಷದ ಬಯಕೆ ಆಗಿತ್ತು. ಎಲ್ಲರ ಒಕ್ಕೊರಲ ಮಾತು ಆಗಿತ್ತು ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಹೇಳಿದರು. ಪಕ್ಷದ ಎಲ್ಲಾ ಶಾಸಕರ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗಿದೆ. ಜವರಾಯಿಗೌಡ ಅವರು ಯಶವಂತಪುರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಸಲ ಸೋಲು ಕಂಡಿದ್ದರು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರನ್ನೇ ಅಭ್ಯರ್ಥಿ ಮಾಡಬೇಕು ಎಂದು ಕಾರ್ಯಕರ್ತರಿಂದ ಒತ್ತಾಯವಿತ್ತು. ಈ ಹಿನ್ನೆಲೆಯಲ್ಲಿ ಜವರಾಯಿಗೌಡ ಅವರೇ ಅಭ್ಯರ್ಥಿಯಾಗಿದ್ದಾರೆ ಎಂದರು.












Click it and Unblock the Notifications