ಕೈ ಸರ್ಕಾರ ಪತನಕ್ಕೆ ಕಮಲ-ದಳ ಪ್ಲಾನ್; ಇನ್ನೂ ಮೂರು ವರ್ಷ ಕಾಯುತ್ತೇವೆ ಎಂದ ಕೌರವ
ದಾವಣಗೆರೆ, ಸೆಪ್ಟೆಂಬರ್ 02: ಸರ್ಕಾರ ಕೆಡವಲು ಬಿಜೆಪಿ- ಜೆಡಿಎಸ್ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಸರ್ಕಾರದ ಕುರಿತು ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಾಜಿ ಸಚಿವ ಬಿ ಸಿ ಪಾಟೀಲ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದು ಹುಚ್ಚರ ಸಂತೆ, ಮೂರ್ಖರ ಪರಮಾವಧಿ ಯಾರಾದರೂ 136 ಸೀಟ್ ಇರುವ ಸರ್ಕಾರ ಕೆಡವಲು ಸಾಧ್ಯ ಇದೀಯಾ?. ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೊಂಡು ಇರೋದು, ಅಂತಹ ಅವಶ್ಯಕತೆ ನಮಗೆ ಇಲ್ಲ. ಇನ್ನೂ ಮೂರು ವರ್ಷ ಕಾಯುತ್ತೇವೆ. ಇವರೇ ಸರ್ಕಾರ ಬೀಳಿಸಿಕೊಂಡಾಗ ಜನರ ಮುಂದೆ ಹೋಗಿ ಜನರಿಂದ ಆಯ್ಕೆಯಾಗಿ ಸರ್ಕಾರ ರಚನೆ ಮಾಡುತ್ತೇವೆ. ಅದನ್ನ ಬಿಟ್ಟು ಈ ಕಿಚಡಿ ಸರ್ಕಾರವನ್ನು ಬೀಳೋಸದಕ್ಕೆ ಹೋಗುವುದಿಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿ ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ತಮ್ಮ ಬೆಲೆಯನ್ನೇ ತಾವು ಬೆಲೆ ಕಟ್ಟಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಶಾಸಕರು ಮಾಡುತ್ತಿದ್ದಾರೆ. ಆಗ ಹತ್ತು ಜನರು ಹೊರ ಬಂದಿದ್ದಕ್ಕೆ ಸರಕಾರ ರಚನೆ ಆಯ್ತು. ಈಗ ಸರ್ಕಾರ ಮಾಡಬೇಕು ಎಂದರೆ ಕನಿಷ್ಠ 90 ಜನ ಶಾಸಕರು ಹೊರಗೆ ಬರಬೇಕು ಅದು ಸಾಧ್ಯನಾ?. ಸರ್ಕಾರ ವೈಫಲ್ಯವಾಗಿದ್ದರಿಂದ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಜನರು ಕೇಳುತ್ತಿದ್ದಾರೆ. ಜನರ ಮೈಂಡ್ ಬೇರೆ ಕಡೆ ಸೆಳೆಯಲು ವಾರಕ್ಕೊಂದು ಕಾರಣ ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ಬಿಸಿ ಪಾಟೀಲ್ ಹೇಳಿದರು.
ಕೋವಿಡ್ ಸಮಯದಲ್ಲಿ ಹಗರಣಗಳಾಗಿದೆ ಎಂದು ಹೇಳುವ ಕಾಂಗ್ರೆಸ್ ಆಗ ವಿರೋಧ ಪಕ್ಷವಾಗಿ ಏಕೆ ಸುಮ್ಮನಿತ್ತು ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬದಲಾವಣೆ ಆಗಿ ಒಂದು ವರ್ಷ ನಾಲ್ಕು ತಿಂಗಳಾದ ಮೇಲೆ ಈಗ ಬಿಜೆಪಿ ಹಗರಣದ ಬಗ್ಗೆ ಮಾತನಾಡುತ್ತಾರೆ. ಇಷ್ಟು ದಿನ ಏನ್ ಮಾಡ್ತಾ ಇದ್ದರು. ಹಗರಣದಲ್ಲಿ ಕಾಂಗ್ರೆಸ್ ನಾಯಕರಿಗೂ ಕೂಡ ಏನಾದರೂ ಪಾಲು ಇದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ಆಗ ಸುಮ್ಮನೆ ಕೂತುಕೊಂಡು ಈಗ ಮಾತನಾಡುತ್ತಿರೀ ಎಂದರೆ ಹೇಗೆ? ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಕೋವೀಡ್ ಹಗರಣದ ವರದಿ ಕೈ ಸೇರಿದೆ ಎಂದು ಹೇಳುತ್ತೀರಿ ಅದನ್ನು ಬಿಚ್ಚಿ ಇಡ್ತಿರೋ ಹೊರಗೆ ಇಡ್ತಿರೋ ಒಟ್ಟು ತನಿಖೆ ಮಾಡಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲಾರೂ ಕಾನೂನಿನ ಅಧೀನರು. ಕಾನೂನಿನ ಮೂಲಕ ತನಿಖೆ ಮಾಡಿ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಅವರಿವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಾರೆ. ಈ ಸರಕಾರ ಸಂಪೂರ್ಣ ವೈಫಲ್ಯವಾಗಿದೆ ಯಾವುದೇ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಗ್ಯಾರಂಟಿಗಳನ್ನು ಹೇಳಿಕೊಂಡು ಬಂದು ಅದನ್ನು ಕೂಡಾ ಸರಿಯಾಗಿ ಕೊಡುತ್ತಿಲ್ಲ. ಎಲ್ಲಾ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ ಏನು ಅಭಿವೃದ್ಧಿ ಮಾಡಿಲ್ಲ. ನಿಮ್ಮ ಹಗರಣಗಳನ್ನ ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಮುಡಾ ಹಗರಣ ಕೋರ್ಟ್ ನಲ್ಲಿ ನಾಳೆ ತೀರ್ಪು ಬರುತ್ತದೆ ಎಂದಿದ್ದಾರೆ.












Click it and Unblock the Notifications