Vande Bharat Express: ರಾಮನಗರದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿ ಗಾಜುಗಳು ಪುಡಿಪುಡಿ
ರಾಮನಗರ, ಜುಲೈ 26: ಮೈಸೂರಿನಿಂದ ಚೆನ್ನೈಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ರಾಮನಗರದ ಹೊರವಲಯದಲ್ಲಿ ಕಲ್ಲು ತೂರಾಟ ನಡೆದಿದೆ. ದುಷ್ಕರ್ಮಿಗಳು ಬುಧವಾರ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಆದರೆ ರೈಲ್ವೇ ಇಲಾಖೆಯಿಂದ ಅಧಿಕೃತ ಹೇಳಿಕೆ ಇನ್ನೂ ಹೊರಬರಬೇಕಿದೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನೆ ಕುರಿತು ಸ್ಥಳೀಯರನ್ನು ವಿಚಾರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಜುಲೈ 8ರಂದು ರಾಮನಗರ ತಾಲೂಕಿನ ವಡೇರಹಳ್ಳಿಯಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಮಂಡ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 2022 ರಲ್ಲಿ ಪ್ರಾರಂಭವಾದಾಗಿನಿಂದ, ಮೈಸೂರು-ಚೆನ್ನೈ ವಂದೇ ಭಾರತ್ ರೈಲಿನ ಮೇಲೆ ಕನಿಷ್ಠ ಮೂರು ಬಾರಿ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಗಳಲ್ಲಿ ರೈಲಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿರುವ ಬಗ್ಗೆ ವರದಿಯಾಗಿದೆ.
ಈ ಮಧ್ಯೆ, ರಾಮನಗರದಲ್ಲಿ ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸರು ಬುಧವಾರ ಜಾಗೃತಿ ಕಾರ್ಯಕ್ರಮ ನಡೆಸಿದರು. ಕಲ್ಲು ತೂರಾಟದ ತೀವ್ರ ಪರಿಣಾಮಗಳ ಕುರಿತು ಪ್ರಯಾಣಿಕರಿಗೆ ಅರಿವು ಮೂಡಿಸಿದರು.
ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿತ್ತು. ಕಳೆದ ಕೆಲವು ವಾರಗಳಲ್ಲಿ ಕಲ್ಲು ತೂರಾಟದ ಹಲವಾರು ಘಟನೆಗಳು ವರದಿಯಾಗಿವೆ.

ಧಾರವಾಡ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ಧಾರವಾಡ ಹಾಗೂ ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಇದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಿಗ್ಗೆ 5.45 ಕ್ಕೆ ಹೊರಡಲಿದ್ದು, ಮಧ್ಯಾಹ್ನ 12.10 ಕ್ಕೆ ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಆರಂಭವಾಗಲಿದ್ದು, ರಾತ್ರಿ 7.45ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಪ್ರಯಾಣದ ಸಮಯ ಸರಿಸುಮಾರು 6 ಗಂಟೆ 30 ನಿಮಿಷಗಳಾಗಿವೆ. ಇದು ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ರೈಲು ಎಕ್ಸಿಕ್ಯೂಟಿವ್ ಚೇರ್ (EC) ಮತ್ತು AC ಚೇರ್ ಕಾರ್ (CC) ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಇಸಿ ಟಿಕೆಟ್ ದರ ರೂ. 2010 ಮತ್ತು CC ಟಿಕೆಟ್ ಬೆಲೆ ರೂ. 1165. ಧಾರವಾಡದಿಂದ ಬೆಂಗಳೂರಿಗೆ ಇಸಿ ಟಿಕೆಟ್ ದರ ರೂ. 2440 ಮತ್ತು ಸಿಸಿ ಟಿಕೆಟ್ ದರ ರೂ. 1330. ಧಾರವಾಡ - ಬೆಂಗಳೂರು ಟಿಕೆಟ್ ದರ ಹೆಚ್ಚಾಗಿರುತ್ತದೆ. ಏಕೆಂದರೆ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ತಿಂಡಿ ಹಾಗೂ ಊಟವನ್ನು ಪಡೆಯುತ್ತಾರೆ. ಆದರೆ ಬೆಂಗಳೂರು - ಧಾರವಾಡ ಪ್ರಯಾಣಿಕರಿಗೆ ಉಪಹಾರ ಮತ್ತು ತಿಂಡಿ ಮಾತ್ರ ಸಿಗುತ್ತದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಯಶವಂತಪುರ, ದಾವಣಗೆರೆ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಬೆಂಗಳೂರು ಮತ್ತು ಧಾರವಾಡ ನಡುವಿನ ರೈಲು ಮಾರ್ಗದ ಅಂತರವು 489 ಕಿಲೋಮೀಟರ್‌ಗಳು. ಇದು ಸರಾಸರಿ 70 ಕಿಮೀ ವೇಗದಲ್ಲಿ ಚಲಿಸುತ್ತದೆ.












Click it and Unblock the Notifications