Transport Employees Strike: ಸಾರಿಗೆ ಮುಷ್ಕರ, ಸೋಮವಾರ ಮಹತ್ವದ ಸಭೆ
ಬೆಂಗಳೂರು, ಡಿಸೆಂಬರ್ 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31ರಿಂದ ಈ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದೆ. ಮುಷ್ಕರ ಆರಂಭವಾದರೆ ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಇರಲಿದೆಯೇ?, ಇಲ್ಲವೇ? ಎಂಬುದು ಇನ್ನೂ ಸಹ ಗೊಂದಲವಾಗಿದೆ. ಮುಷ್ಕರ ವಾಪಸ್ ಪಡೆಯುವ ಕುರಿತು ಇನ್ನೂ ಸಹ ಯಾವುದೇ ಘೋಷಣೆ ಮಾಡಿಲ್ಲ.
ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕುರಿತು ಈಗಾಗಲೇ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಿದೆ.

ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಲ್ಕೂ ಸಾರಿಗೆ ನಿಗಮಗಳ ನೌಕರರು ಬಸ್ ಸೇವೆ ನಿಲ್ಲಿಸಿ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದಾರೆ. ಸರ್ಕಾರ ಸಾರಿಗೆ ನೌಕರರ ಮುಷ್ಕರ ತಡೆಯಲು ನಾಲ್ಕೂ ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಆದೇಶವನ್ನು ನೀಡಿದೆ. ಆದರೆ ಮುಷ್ಕರವನ್ನು ಇನ್ನೂ ಸಹ ವಾಪಸ್ ಪಡೆದಿಲ್ಲ.
ಸೋಮವಾರ ಮಹತ್ವದ ಸಭೆ: ಸರ್ಕಾರ ಈ ಮುಷ್ಕರವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಸ್ ನಿಲ್ಲಿಸಿ ಮುಷ್ಕರ ನಡೆಸದಂತೆ ತಡೆಯಲು ಎಸ್ಮಾ ಕಾಯ್ದೆ ಜಾರಿಗೊಳಿಸಲು ಸಹ ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೇ ಸಾರಿಗೆ ಇಲಾಖೆ ಆಯುಕ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜೊತೆ ಡಿಸೆಂಬರ್ 30ರ ಸೋಮವಾರ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ಆದ್ದರಿಂದ ಮುಷ್ಕರ ನಡೆಯಲಿದೆಯೇ?, ಇಲ್ಲವೇ? ಎಂಬುದು ಸೋಮವಾರ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಸರ್ಕಾರದ ಜೊತೆಗಿನ ಮಾತುಕತೆ ವಿಫಲವಾಗಿ ಮುಷ್ಕರ ನಡೆಸಲು ತೀರ್ಮಾನಿಸಿದರೆ ಡಿಸೆಂಬರ್ 31ರಿಂದ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಜನರಿಗೆ ತೊಂದರೆಯಾಗಲಿದೆ.
ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, "ಸಾರಿಗೆ ನಿಗಮಗಳ ನೌಕರರಿಗೆ ಈಗಾಗಲೇ ಎಲ್ಲಾ ಸಂಗತಿ ತಿಳಿಸಿದ್ದೇವೆ. 2020 ರಿಂದ 2023ರ ಫೆಬ್ರವರಿ ತನಕ ನಿವೃತ್ತರಾದ ನೌಕರರ ಗ್ರಾಚ್ಯುಟಿಗಾಗಿ 224.05 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಭವಿಷ್ಯ ನಿಧಿ ಹಾಗೂ ಇತರೆ ಬಾಕಿ ಮರು ಪಾವತಿಗಾಗಿ 2000 ಕೋಟಿ ರೂ. ನೀಡುತ್ತೇವೆ" ಎಂದು ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಹೆಚ್. ವಿ. ಅನಂತಸುಬ್ಬರಾವ್ ಮಾತನಾಡಿ, "ಸಾರಿಗೆ ನೌಕರರ ಬೇಡಿಕೆ ಈಡೇರಿಲ್ಲ. ಹಾಗಾಗಿ ಮುಷ್ಕರ ನಡೆಸುವುದು ಖಂಡಿತ. ಮುಷ್ಕರ ನಡೆಸುವ ಕುರಿತು ಸಾರಿಗೆ ಸಚಿವರಿಗೆ ನೋಟಿಸ್ ನೀಡಿದ್ದೇವೆ. ಆದರೆ ಸರ್ಕಾರ ಈ ತನಕ ಸ್ಪಂದಿಸಿಲ್ಲ. ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ" ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಈ ಮುಷ್ಕರಕ್ಕೆ ಕರೆ ನೀಡಿದೆ. ಈ ಕ್ರಿಯಾ ಸಮಿತಿಯ ಅಡಿ ಕೆ.ಎಸ್.ಆರ್.ಟಿ.ಸಿ, ಸ್ಟಾಫ್ & ವರ್ಕರ್ಸ್ ಫೆಡರೇಷನ್ (ಎ.ಐ.ಟಿ.ಯು.ಸಿ.), ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್ (ಸಿ.ಐ.ಟಿ.ಯು.), ಕೆ.ಎಸ್.ಆರ್.ಟಿ.ಸಿ. ಪ.ಜಾ. ಮತ್ತು ಪ.ಪಂ. ನೌಕರರ ಸಂಘ (40/ 78), ಕ.ರಾ.ರ.ಸಾ.ಸಂಸ್ಥೆ ಪ.ಜಾ. /ಪ.ಪಂ.ಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) (671/ 2001), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ (ರಿ) ಇವೆ.
ಸಾರಿಗೆ ನೌಕರರ ಬೇಡಿಕೆಗಳು: ಡಿಸೆಂಬರ್ 31ರಿಂದ ಬಸ್ ನಿಲ್ಲಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರು ಇಟ್ಟಿರುವ ಬೇಡಿಕೆಗಳು ಕೆಳಗಿನಂತಿವೆ.
* 01.01.2020 ರಿಂದ 38 ತಿಂಗಳ ವೇತನ ಹಿಂಬಾಕಿ ಪಾವತಿಸಲೇಬೇಕು.
* 01.01.2024 ರಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆ ಇತ್ಯರ್ಥಪಡಿಸಬೇಕು.
* ನಿವೃತ್ತರಾದ ನೌಕರರಿಗೆ 27.06.2024ರ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.












Click it and Unblock the Notifications