ಬಿಜೆಪಿ ನಿಷ್ಠಾವಂತರಿಗೆ ಟಿಕೆಟ್: ಉಳಿದ ಐದು ಕ್ಷೇತ್ರಗಳ ಟಿಕೆಟ್ ಘೋಷಣೆ- ಮಾಜಿ ಸಿಎಂ ಹೇಳಿದ್ದೇನು?
ಚಿತ್ರದುರ್ಗ, ಮಾರ್ಚ್ 15: ಲೋಕಸಭಾ ಚುನಾವಣೆಗೆ ಕಾವು ಜೋರಾಗಿದೆ. ಬಿಜೆಪಿ ಎಲ್ಲ ನಿಷ್ಠಾವಂತರಿಗೇ ಟಿಕೆಟ್ ಕೊಟ್ಟಿದೆ. ಉಳಿದ ಕ್ಷೇತ್ರಗಳ ಟಿಕೆಟ್ ನಾಳೆ ಅಥವಾ ನಾಡಿದ್ದು ಹೆಸರು ಪ್ರಕಟ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದು ನಂತರ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಶ್ರೀಗಳ ದರ್ಶನಕ್ಕೆ ಬಂದಿದ್ದೇವೆ. ಒಳ್ಳೆಯ ಕಾರ್ಯ ಮಾಡುವಂತೆ ಶ್ರೀಗಳು ತಿಳಿಸಿದ್ದಾರೆ. ನಾನು ಅದೇ ರೀತಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದ್ದಾರೆ.

ಚಿತ್ರದುರ್ಗ ಲೋಕಸಭಾ ಟಿಕೆಟ್ ಘೋಷಣೆ ಕುರಿತು ಪಾರ್ಲಿಮೆಂಟ್ರಿ ಬೋರ್ಡ್ ಕಮಿಟಿಯಲ್ಲಿ ಚರ್ಚೆ ಆಗಿದೆ. ಮಾದಾರ ಚೆನ್ನಯ್ಯ ಶ್ರೀಗಳ ಹೆಸರು ಕೇಳಿಬಂದ ವಿಚಾರ ನಾನು ಎಲ್ಲೂ ಚರ್ಚೆ ಮಾಡಿಲ್ಲ. ಹಾಲಿ ಎಂಪಿಗೆ ಟಿಕೆಟ್ ತಪ್ಪುತ್ತದೆ ಅನ್ನುವುದು ಊಹಾಪೋಹಾ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಭೆ ಕರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪ ಅವರೊಂದಿಗೆ ನಾನು, ನಮ್ಮ ವರಿಷ್ಠರು ಮಾತನಾಡಿದ್ದೇವೆ. ಎಲ್ಲಾ ಸರಿಹೋಗತ್ತದೆ ಏನು ಆಗುವುದಿಲ್ಲ. ಹಾವೇರಿ ಸಂಸದ ಶಿವಕುಮಾರ ಉದಾಸಿ ಕೂಡ ನಮ್ಮ ಜೊತೆಗೆ ಬರುತ್ತಾರೆ ಎಂದರು.
ನಾನು ಕಳೆದ 34 ವರ್ಷಗಳಿಂದ ರಾಜಕಾರಣದಲ್ಲಿದ್ದೀನೆ. ನನಗೆ ದೊಡ್ಡ ಪ್ರಮಾಣದ ಬೆಂಬಲಿಗರಿದ್ದಾರೆ. ನಾನು ಎರಡು ಬಾರಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ ಸದಸ್ಯರಾಗಿ ಆಯ್ಕೆ ಜನರ ಜೊತೆಗಿದ್ದು ಕೆಲಸ ಮಾಡಿರುವುದರಿಂದ ಸಾಕಷ್ಟು ಜನ ಬೆಂಬಲಿಗರಿದ್ದಾರೆ ಎಂದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕೇಳಿ ಬಂದಿರುವ ಪೋಕ್ಸೊ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗೃಹ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅದನ್ನು ಜವಾಬ್ದಾರಿಯಿಂದ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.
ದೂರು ಕೊಟ್ಟವರು ಈ ಹಿಂದೆ ಬೇರೆಯವರ ಮೇಲೆ ದೂರು ಕೊಟ್ಟಿದ್ದು, ಮಾನಸಿಕ ಅಸ್ವಸ್ಥತೆ ಕುರಿತು ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ. ರಾಜಕಾರಣದಲ್ಲಿ ಯಡಿಯೂರಪ್ಪ ಅವರ ಹೆಸರಿಗೆ ಕಳಂಕ ತರುವಪ್ರಯತ್ನ ಮಾಡುತ್ತಾರೆ. ಇದರಲ್ಲಿ ಯಾವುದೇ ಸದುದ್ದೇಶ ಇಲ್ಲ. ತನಿಖೆಯಲ್ಲಿ ಸತ್ಯ ಹೊರಬರುತ್ತದೆ ಎನ್ನುವ ನಂಬಿಕೆ ಇದೆ. ಚುನಾವಣೆ ಸಂದರ್ಭದಲ್ಲಿ ಇಂಥ ಘಟನೆಗಳು ನಡೆಯುತ್ತವೆ. ಸತ್ಯಕ್ಕೆ ಯಾವತ್ತೂ ಜಯವಾಗುತ್ತದೆ ಎಂದು ಹೇಳಿದರು.
ದರಿದ್ರ ಸರ್ಕಾರ
ರಾಜ್ಯದಲ್ಲಿ ಇಷ್ಟು ದೊಡ್ಡ ಬರ ಬಂದಿದೆ. ಜನರಿಗೆ ಕುಡಿಯುವ ನೀರು ಕೊಡಲಾರದಷ್ಟು ದರಿದ್ರ ಸರ್ಕಾರ ಇದು. ಇವರ ಖಜಾನೆ ಖಾಲಿ ಇದೆ. ಭಾಷಣದಲ್ಲಿ ಸರ್ಕಾರದ ಖಜಾನೆ ತುಂಬಿದೆ. ಸಿದ್ದರಾಮಯ್ಯ ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನು ರಾಜ್ಯದ ಜನರು ತೀರಿಸಬೇಕು. ಇದೊಂದು ದರಿದ್ರ ಸರ್ಕಾರ ಬಂದಿದೆ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ನರೇದ್ರ ಮೋದಿಯವರು ಅಭಿವೃದ್ಧಿಯನ್ನು ಶಿಖರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ ಅಭಿವೃದ್ಧಿ ಯನ್ನು ಪಾತಾಳಕ್ಕೆ ತಗೆದುಕೊಂಡು ಹೋಗಿದೆ ಎಂದು ಆರೋಪಿಸಿದರು. ನನಗೆ ರಾಣೆಬೆನ್ನೂರಿನ ಜೊತೆಗೆ ನಂಟಿದೆ. 1983 ರಲ್ಲಿ ಇಲ್ಲಿ ಚುನಾವಣೆ ಮಾಡಿದ್ದೆ.
ತುಂಗಾ ಮೇಲ್ದಂಡೆ ಯೋಜನೆಯಿಂದ ಹಾವೇರಿ, ರಾಣೆಬೆನ್ನೂರು, ದಾವಣಗೆರೆಗೆ ನೀರು ಕೊಡುತ್ತೇನೆ ಎಂದು ಹೇಳಿದ್ದೆ. ಆಗ ಹಿರಿಯ ನೀರಾವರಿ ಹೋರಾಟಗಾರ ಬನ್ನಿಕೊಪ್ಪ ಅವರು ಯೋಜನೆ ಸಾಧ್ಯ ಇಲ್ಲ ಅಂತ ಹೇಳಿದರು. ವಾಸ್ತವ ಹಾಗೇ ಇತ್ತು. ಬಹಳ ಆಳದಿಂದ ನೀರು ಎತ್ತಬೇಕಿತ್ತು. ನಾನು ನೀರಾವರಿ ಸಚಿವನಾಗಿ ಒಂದು ಲಕ್ಷ ಎಕರೆ ಜಮೀನಿಗೆ ಹಾವೇರಿ ಜಿಲ್ಲೆಯಲ್ಲಿ ನೀರಾವರಿಯಾಗಿದೆ ಎಂದರು.
ನಾನು ಮಾಡಿರುವ ಕೆಲಸಕ್ಕಿಂತ ಮಾಡುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಬರುವ ದಿನಗಳಲ್ಲಿ ಹಾವೇರಿ ಗದಗ ಜಿಲ್ಲೆ ಗಳಿಗೆ ಕೇಂದ್ರದಿಂದ ಬರುವ ಯೋಜನೆಗಳನ್ನು ತಂದು ದೊಡ್ಡ ಪ್ರಮಾಣದ ಬದಲಾವಣೆ ಮಾಡುತ್ತೇನೆ. ರಾಣೆಬೆನ್ನೂರನ್ನು ಉತ್ತರ ಕರ್ನಾಟಕದ ದೊಡ್ಡ ವಾಣಿಜ್ಯ ನಗರವನ್ನಾಗಿ ಮಾಡುತ್ತೇನೆ ಎಂದು ಹೇಳಿದರು.
ರಾಣೆಬೆನ್ನೂರು ತಾಲೂಕಿನಲ್ಲಿ ದೊಡ್ಡ ಬೃಹತ್ ಕೈಗಾರಿಕೆ ಯೋಜನೆ ತರಲು ಅವಕಾಶ ಇದೆ. ರಾಣೆಬೆನ್ನೂರು ತಾಲೂಕಿನ ಋಣ ಬಹಳಷ್ಟಿದೆ. ದೊಡ್ಡ ಪ್ರಮಾಣದಲ್ಲಿ ಕಮಲಕ್ಕೆ ಮತ ಹಾಕಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಹೇಳಿದರು.












Click it and Unblock the Notifications