ಮೂರು ಕ್ಷೇತ್ರಗಳ ಉಪ ಚುನಾವಣೆ: ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ
ಬೆಂಗಳೂರು, ನವೆಂಬರ್ 09: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದೆ. ಮತದಾನದ ಹಿನ್ನಲೆಯಲ್ಲಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ ಹೇರಲಾಗಿದೆ. ಚುನಾವಣಾ ಫಲಿತಾಂಶ ನವೆಂಬರ್ 23ರಂದು ಪ್ರಕಟವಾಗಲಿದೆ.
ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ನವೆಂಬರ್ 13ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ನವೆಂಬರ್ 11ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಮತದಾನ ಮುಕ್ತಾಯ ಸಮಯದ ಪೂರ್ವ 48 ಗಂಟೆ ಅವಧಿಯಲ್ಲಿ ಅಂದರೆ, ನವೆಂಬರ್ 11ರ ಸಂಜೆ 6 ಗಂಟೆಯಿಂದ ನವೆಂಬರ್ 13ರ ಸಂಜೆ 6.30ರ ತನಕ ನಿರ್ಬಂಧ ಹೇರಲಾಗಿದೆ.

ಈ ಸಮಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ರೀತಿ, ಮಾಧ್ಯಮಗಳು, ಟಿವಿ ವಾಹಿನಿಗಳಲ್ಲಿ ಜಾಹೀರಾತು, ಚರ್ಚೆ, ಸಂವಾದ, ಸಂದರ್ಶನ, ವಿಶ್ಲೇಷಣೆ, ಚುನಾವಣೋತ್ತರ ಸಮೀಕ್ಷೆ ಹೀಗೆ ಯಾವುದೇ ಜಾಹೀರಾತು ಹಾಗೂ ಸುದ್ದಿಯನ್ನು ವಿದ್ಯುನ್ಮಾನ ವಾಹಿನಿ, ಕೇಬಲ್ ಟಿವಿ, ರೇಡಿಯೊ, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು, ಬಿತ್ತರಿಸುವುದು ನಿರ್ಬಂಧಿಸಲಾಗಿದೆ.
ಕಠಿಣ ಕ್ರಮ: ಚುನಾವಣಾ ಆಯೋಗದ ಈ ನಿರ್ಬಂಧ ನಿಯಮ ಉಲ್ಲಂಘಿಸಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸುದ್ದಿ ಬಿತ್ತರಿಸಿದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ-1951ರ ಕಲಂ 126ರ ಅನ್ವಯ 2 ವರ್ಷಗಳ ಶಿಕ್ಷೆ ಅಥವಾ ದಂಡ, ಇಲ್ಲವೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮತದಾನ ಪೂರ್ವ 48 ಗಂಟೆ ಅವಧಿಯಲ್ಲಿ ಮಾಧ್ಯಮಗಳು, ವಿದ್ಯುನ್ಮಾನ ವಾಹಿನಿ, ಕೇಬಲ್ ಟಿವಿ, ರೇಡಿಯೊ, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಬಿತ್ತರಿಸುವ ಚುನಾವಣಾ ಸುದ್ದಿಯಲ್ಲಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಪರವಾಗಿರುವ ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ಪ್ಯಾನಲಿಸ್ಟ್ ಅಭಿಪ್ರಾಯಗಳು, ಮನವಿಗಳು ಇಲ್ಲದಿರುವುದುನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ ಯಾವುದೇ ಅಭಿಪ್ರಾಯ ಸಂಗ್ರಹದ ಫಲಿತಾಂಶ ಪ್ರಕಟ, ವಿಶ್ಲೇಷಣೆ, ಪ್ರದರ್ಶನ ಮಾಡುವುದನ್ನು ಸಹ ನಿರ್ಬಂಧಿಸಲಾಗಿದೆ.
ಎಕ್ಸಿಟ್ ಪೋಲ್ ನಿಷೇಧ: ಮತದಾನದ ಪೂರ್ವ 48 ಗಂಟೆ ಮತ್ತು ಮತದಾನದ ಸಮಯ ಮುಗಿದ ನಂತರದ ಅರ್ಧ ಗಂಟೆವರೆಗೂ ಯಾವುದೇ ಸುದ್ದಿ ವಾಹಿನಿ, ಕೇಬಲ್ ಟಿವಿ ಸೇರಿದಂತೆ ಇನ್ನಿತರ ಡಿಜಿಟಲ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ.
ಹೀಗಾಗಿ ಎಲ್ಲಾ ಮಾಧ್ಯಮ ಸಂಸ್ಥೆಗಳು ಚುನಾವಣಾ ಆಯೋಗವು ಕಾಲ ಕಾಲಕ್ಕೆ ಹೊರಡಿಸುವ ಎಲ್ಲಾ ಮಾರ್ಗದರ್ಶನಗಳನ್ನು ಪಾಲಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
2024ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಶಾಸಕರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆ ಕಣದಲ್ಲಿ ಒಟ್ಟು 45 ಅಭ್ಯರ್ಥಿಗಳಿದ್ದಾರೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಮೂರು ಕ್ಷೇತ್ರಗಳ ಪೈಕಿ ಶಿಗ್ಗಾವಿಯಲ್ಲಿ 8, ಸಂಡೂರಿನಲ್ಲಿ 6 ಮತ್ತು ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಎಂದರೆ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ 50 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.












Click it and Unblock the Notifications