ಕಾಂಗ್ರೆಸ್ ಸರಕಾರದ ಒಂದು ವರ್ಷ ಕೊಲೆಗಡುಕರಿಗೆ ಹರ್ಷ: ಆರ್ ಅಶೋಕ್
ಬೆಂಗಳೂರು, ಮೇ 20: ಕಾಂಗ್ರೆಸ್ ಸರಕಾರದ ಒಂದು ವರ್ಷ ಕೊಲೆಗಡುಕರಿಗೆ ಹರ್ಷ. ಒನ್ ಇಯರ್ ಖಜಾನೆ ಫುಲ್ ಕ್ಲಿಯರ್, ಖಾಲಿ ಖಾಲಿ. ವರುಷ ಒಂದು ಸಮಸ್ಯೆಗಳು ನೂರೊಂದು. ಕಾಂಗ್ರೆಸ್ ಸರಕಾರ ಬಂತು. ಜನರ ಮುಖದಲ್ಲಿ ಹರ್ಷ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೊಲೆಗಡುಕರಿಗೆ ಧನ್ಯವಾದ ಹೇಳಿದ್ದಾರಾ? ತಮ್ಮ ಸರಕಾರದ ಅವಧಿ ಮುಗಿದುದಕ್ಕೆ ಬೈಬೈ- ಗುಡ್ ಬೈ ಎಂದು ಧನ್ಯವಾದ ಹೇಳಿದ್ದಾರೋ ಅರ್ಥ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತಿಳಿಸಿದರು.ಅವರ ಮುಖದ ಕಳೆ ನೋಡಿದರೆ ಅವರು ಸರಕಾರದ ಕೊನೆ ಅವಧಿ ಎದುರಿಸುತ್ತಿರುವಂತಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಲೂಟಿ ಎಷ್ಟು ಕೋಟಿ ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನಾ, ಅಂಜಲಿ ಎಂಬ ಮಹಾಲಕ್ಷ್ಮಿಯರು. ನಮ್ಮ ಮನೆಯ ಮಹಾಲಕ್ಷಿಯರಿಗಿಲ್ಲ ಬದುಕುವ ಭಾಗ್ಯ ಎಂದರಲ್ಲದೆ, ನೇಹಾ, ಮೀನಾ, ಅಂಜಲಿ ಆಯ್ತು. ಮುಂದೆ ಯಾರೆಂದು ನಮ್ಮ ಹೆಣ್ಮಕ್ಕಳು ಆತಂಕದಿಂದ ಕಾಯುತ್ತಿದ್ದಾರೆ ಎಂದು ನುಡಿದರು.
ಈ ವೇಳೆ ಬಿ ವೈ ವಿಜಯೇಂದ್ರ ಮಾತನಾಡಿ, ಕರ್ನಾಟಕ ಎಂದರೆ ಕೊಲೆಗಡುಕರ ಸರಕಾರ ಎಂದು ದೇಶದೆಲ್ಲೆಡೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾತು ಕೇಳುತ್ತಿದೆ. ಕೊಲೆ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ನಿಷ್ಕ್ರಿಯವಾಗಿದೆ. ಲವ್ ಜಿಹಾದ್ ಪ್ರಕರಣದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದೆ. ಕೊಲೆಗಡುಕರಿಗೆ ಶಕ್ತಿ ಕೊಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳುವಂತಾಗಿದೆ.
ಮಹಿಳಾ ಸುರಕ್ಷತೆ ಬಗ್ಗೆ ಯಕ್ಷಪ್ರಶ್ನೆ ಮೂಡಿದೆ. ಅಭಿವೃದ್ಧಿ ಇಲ್ಲ. ರೈತರ ವಿಚಾರದಲ್ಲಿ ಕಾಳಜಿ ಇಲ್ಲದಂತಾಗಿದೆ. ಲವ್ ಜಿಹಾದ್ ಹೆಚ್ಚಳ, ಹಿಂದೂ ಕಾರ್ಯಕರ್ತರ ಹತ್ಯೆಯೂ ದಿನೇದಿನೇ ಹೆಚ್ಚಾಗುತ್ತಿದ್ದರೂ ಸರಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಹುಬ್ಬಳ್ಳಿ ಕಾಲೇಜು ಕ್ಯಾಂಪಸ್ಸಿನ ನೇಹಾ ಹತ್ಯೆ ಪ್ರಕರಣ, ಮನೆಗೆ ನುಗ್ಗಿ ಅಂಜಲಿ ಹತ್ಯೆ, ಕೊಡಗಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿ ಹತ್ಯೆ, ಕೊಡಗಿನಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಗುಲ್ಬರ್ಗದಲ್ಲಿ ಈ ಸರಕಾರ ಬಂದ ಬಳಿಕ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಆಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹೆಚ್ಚಾಗಿದೆ. 3-4 ತಿಂಗಳಿನಿಂದ 450ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆದಿವೆ. ಇದರಿಂದ ರಾಜ್ಯವೇ ದೇಶದ ಮುಂದೆ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಮೊತ್ತವನ್ನು ಬೇರೆಡೆಗೆ ವರ್ಗಾವಣೆ ಮಾಡಿ ಅನ್ಯಾಯ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ರಾಜ್ಯ ಸರಕಾರ ಹೆಚ್ಚುವರಿಯಾಗಿ ಕೊಡುತ್ತಿದ್ದ 4 ಸಾವಿರವನ್ನು ತಡೆ ಹಿಡಿದಿದ್ದಾರೆ ಎಂದರಲ್ಲದೆ, ಪ್ರಕೃತಿ ವಿಕೋಪ ನಿಧಿಯಡಿ ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಬರಗಾಲದ ಸಂದರ್ಭದಲ್ಲೂ 7 ತಾಸು ವಿದ್ಯುತ್ ಕೊಡದ ನಿಷ್ಕ್ರಿಯ ಸರಕಾರ ಇಲ್ಲಿದೆ ಎಂದು ದೂರಿದರು.












Click it and Unblock the Notifications