Kaveri Water: ತಮಿಳುನಾಡಿಗೆ ಹರಿಯಿತು 10 ಟಿಎಂಸಿ ಹೆಚ್ಚುವರಿ ನೀರು
ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜುಲೈ 1 ರಿಂದ 22 ರ ನಡುವೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ 10 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿದಿದೆ.
ತಮಿಳುನಾಡಿನ ಬೇಡಿಕೆಯ ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ಜುಲೈ 30 ರಂದು ನಡೆಯಲಿದ್ದು, ಆಗಸ್ಟ್ ತಿಂಗಳ ನೀಡನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ಮಾಡಲಿದೆ.

ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡು ಆಗಸ್ಟ್‌ನಲ್ಲಿ 45.95 ಟಿಎಂಸಿ ಅಡಿ ನೀರು ಹರಿಸಬೇಕಿದೆ. ಜಲಸಂಪನ್ಮೂಲ ಇಲಾಖೆ ಪ್ರಕಾರ, ಜುಲೈ 1 ರಿಂದ 22 ರ ಅವಧಿಯಲ್ಲಿ ತಮಿಳುನಾಡಿಗೆ ನಿಗದಿತ 22 ಟಿಎಂಸಿ ನೀರು ಬಿಡಬೇಕಿತ್ತು ಆದರೆ ಬಿಳಿಗುಂಡ್ಲುವಿನಲ್ಲಿ 32 ಟಿಎಂಸಿ ನೀರು ಹರಿದಿರುವ ಬಗ್ಗೆ ದಾಖಲೆಯಾಗಿದೆ.
ರಾಜ್ಯದ ಜಲಾಶಯಗಳು ಭರ್ತಿ
ಕರ್ನಾಟಕದಲ್ಲಿ ಕಾವೇರಿ ಜಲಾನಯನ ವ್ಯಾಪ್ತಿಯ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದ್ದು, ಕಬಿನಿ ಜಲಾಶಯ ಕೂಡ ಭರ್ತಿಯಾಗಿದೆ. ಹೇಮಾವತಿ ಜಲಾಶಯ ಕೂಡ ಭರ್ತಿಯಾಗಿದ್ದು ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಹಾರಂಗಿ ಜಲಾಶಯ ಕೂಡ ಇನ್ನೇನು ಭರ್ತಿಯಾಗುವ ಹಂತ ತಲುಪಿದೆ.
ತಮಿಳುನಾಡಿನ ಸೇಲಂನಲ್ಲಿರುವ ಮೆಟ್ಟೂರು ಜಲಾಶಯದ ಸಂಗ್ರಹದಲ್ಲಿ ಭಾರಿ ಏರಿಕೆಯಾಗಿದೆ. ಮೆಟ್ಟೂರು ಜಲಾಶಯದ ಗರಿಷ್ಠ ಸಾಮರ್ಥ್ಯ 93.47 ಟಿಎಂಸಿ ಆಗಿದ್ದು ಸದ್ಯ ಜಲಾಶಯದ ನೀರಿನ ಮಟ್ಟ 49 ಟಿಎಂಸಿ ಆಗಿದೆ.
ಕೇಳಿದಷ್ಟು ನೀರು ಸಿಕ್ಕಿದೆ
ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ ನಂತರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡಿನ ಜಲಸಂಪನ್ಮೂಲ ಕಾರ್ಯದರ್ಶಿ ಕೆ ಮಣಿವಾಸನ್, ಜುಲೈ ತಿಂಗಳಿಗೆ ಕರ್ನಾಟಕದಿಂದ ನೀರು ಬಿಡುಗಡೆಗೆ ಯಾವುದೇ ಬಾಕಿ ಇಲ್ಲ ಎಂದು ಒಪ್ಪಿಕೊಂಡರು.
ಸುಪ್ರೀಂ ಕೋರ್ಟ್ ಸೂಚಿಸಿದಷ್ಟು ನೀರನ್ನು ನಾವು ಸ್ವೀಕರಿಸಿದ್ದೇವೆ. ಕರ್ನಾಟಕ ಕೂಡ ನೀರು ಬಿಡುಗಡೆಗೆ ವಿರೋಧಿಸಿಲ್ಲ. ಕಬಿನಿ ಜಲಾಶಯದಿಂದ ಕೂಡ ನೀರು ಬಿಡಲಾಗುತ್ತಿದೆ. ಕರ್ನಾಟಕವು ಸುಪ್ರೀಂ ಕೋರ್ಟ್ ಸೂಚಿಸಿದ ಬಿಡುಗಡೆ ವೇಳಾಪಟ್ಟಿಗೆ ಬದ್ಧವಾಗಿರಬೇಕು ಮತ್ತು ಪ್ರಾಧಿಕಾರದಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು ತಮಿಳುನಾಡು ಸರ್ಕಾರ ಒತ್ತಾಯಿಸಿದೆ. ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
ನೀರಿನ ಕೊರತೆಯಿಂದಾಗಿ, ಅಲ್ಪಾವಧಿ ಭತ್ತದ ಕೃಷಿಗೆ ಬೆಂಬಲ ನೀಡುವ ವಾಡಿಕೆಯಂತೆ ಜೂನ್ 12 ರಂದು ತಮಿಳುನಾಡು ಸರ್ಕಾರವು ಮೆಟ್ಟೂರು ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲಿಲ್ಲ.












Click it and Unblock the Notifications