ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಎದುರು ದುರ್ಬಲವಾದ ಬಿಜೆಪಿ!
ಬೆಂಗಳೂರು, ಮಾರ್ಚ್ 20: ರಾಜ್ಯದಲ್ಲಿ ಆಡಳಿತ ಪಕ್ಷವನ್ನು ಎದುರಿಸುವಲ್ಲಿ ವಿಪಕ್ಷಗಳು ದರ್ಬಲವಾಗಿದೆಯಾ? ಎಂಬ ಪ್ರಶ್ನೆಗೆ ಹೆಚ್ಚಿನವರು ಹೌದು ಎಂಬ ಉತ್ತರವನ್ನೇ ನೀಡುತ್ತಿದ್ದಾರೆ. ಸದ್ಯಕ್ಕೆ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷಗಳಲ್ಲಿನ ಒಳಜಗಳಗಳು ಲಾಭವನ್ನೇ ತಂದುಕೊಡುತ್ತಿರುವ ಕಾರಣದಿಂದಾಗಿ ಗ್ಯಾರಂಟಿ ಯೋಜನೆಯನ್ನು ಮುಂದಿಟ್ಟುಕೊಂಡು ಅದರಾಚೆಗೆ ಬೇರೆ, ಬೇರೆ ವಲಯಗಳಿಂದ ತೆರಿಗೆ ಮತ್ತು ಬೆಲೆ ಏರಿಕೆ ಮೂಲಕ ಸಂಪನ್ಮೂಲಗಳನ್ನು ಕ್ರೊಢೀಕರಣದಲ್ಲಿ ತೊಡಗಿಕೊಂಡಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಅದರ ಪರಿಣಾಮಗಳು ಜನಸಾಮಾನ್ಯರ ಜೇಬನ್ನು ಸುಡುತ್ತಿದೆ.
ಕಳೆದೊಂದು ವರ್ಷದಲ್ಲಿ ಸುಮಾರು ಹದಿನಾರಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಜೊತೆಗೆ ವಿದ್ಯುತ್, ಬಸ್, ನೋಂದಣಿ, ಕಂದಾಯ, ನೀರಿನ ದರ, ಹಾಲು ಹೀಗೆ ಎಲ್ಲವೂ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದರ ಪರಿಣಾಮಗಳು ಜನಸಾಮಾನ್ಯರು ಎದುರಿಸಲೇ ಬೇಕಾಗಿದೆ. ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಬೆಲೆ ಏರಿಕೆಯ ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇವತ್ತು ಬೆಲೆ ಇಳಿಕೆ ಮಾಡಿದ ಯಾವುದಾದರೂ ಒಂದು ಉದಾಹರಣೆ ಇದೆಯಾ? ಎಂದು ಜನ ಸಾಮಾನ್ಯರು ಪೇಚಾಡಿಕೊಳ್ಳುತ್ತಿದ್ದಾರೆ.

ಖಾಸಗಿ ಉದ್ಯೋಗಿಗಳು ಸೇರಿದಂತೆ ಆಟೋ, ಟ್ಯಾಕ್ಸಿ, ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವವರ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತರ ಬದುಕು ಇದರಿಂದ ಹೊರತಾಗಿಲ್ಲ. ಇಲ್ಲಿ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಒಂದಷ್ಟು ಉಪಯುಕ್ತವಾಗಿದೆ ಎಂಬುದನ್ನು ತಳ್ಳಿಹಾಕಲಾಗದು ಆದರೆ ಅದರ ಪರಿಣಾಮಗಳನ್ನು ಗ್ಯಾರಂಟಿ ಯೋಜನೆಯ ಲಾಭ ಪಡೆದವರು ಸೇರಿದಂತೆ ಎಲ್ಲರೂ ಅನುಭವಿಸಬೇಕಾಗಿದೆ. ಇದೆಲ್ಲದರ ನಡುವೆ ಹಗರಣ, ದುರುಪಯೋಗದ ವರದಿಗಳು ಬರುತ್ತಿದ್ದರೂ ಯಾವುದೂ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಸರ್ಕಾರ ಏನೇ ಮಾಡಿದರೂ ಸಾರ್ವಜನಿಕರು ಏನೂ ಮಾಡಲಾಗುವುದಿಲ್ಲ.
ಅಡ್ಜೆಸ್ಟ್‌ಮೆಂಟ್ ರಾಜಕಾರಣ ನಡೆಯುತ್ತಿದೆಯಾ?
ಆಡಳಿತ ಪಕ್ಷಗಳು ದಾರಿತಪ್ಪಿದಾಗ ಎಚ್ಚರಿಸಿ ಸರಿದಾರಿಯಲ್ಲಿ ಹೋಗುವಂತೆ ಎಚ್ಚರಿಸುವ ಕೆಲಸವನ್ನು ವಿಪಕ್ಷಗಳು ಮಾಡಬೇಕಾಗುತ್ತದೆ. ಆದರೆ ರಾಜ್ಯದಲ್ಲಿ ವಿಪಕ್ಷಗಳು ವಿಫಲವಾಗಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷಗಳಿಲ್ಲದ ಕಾರಣ ಮತ್ತು ವಿಪಕ್ಷಗಳ ದೌರ್ಬಲ್ಯಗಳು ಆಡಳಿತ ಪಕ್ಷದವರಿಗೆ ವರಪ್ರಸಾದವಾಗಿದೆ. ಇವತ್ತು ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿರುವುದರಿಂದ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಅವಕಾಶವಿದೆ. ಆದರೆ ಅದ್ಯಾವುದೂ ಆಗದೆ ಇರುವುದು ಅಡ್ಜೆಸ್ಟ್ ಮೆಂಟ್ ರಾಜಕಾರಣ ನಡೆಯುತ್ತಿದೆಯಾ? ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ಆಡಳಿತ ಪಕ್ಷದವರು ಸಿಎಂ, ಸಚಿವ ಸ್ಥಾನಗಳಿಗೆ ಕಚ್ಚಾಡುವುದು ಮಾಮೂಲಿ ಆದರೆ ರಾಜ್ಯದ ರಾಜಕೀಯದ ದುರಂತ ಏನೆಂದರೆ ವಿಪಕ್ಷದಲ್ಲಿದ್ದವರು ಕಚ್ಚಾಡಿಕೊಂಡು ಪಕ್ಷವೊಂದು ಮೂರು ಬಾಗಿಲು ಎಂಬಂತೆ ಆಗಿರುವುದು ಬೇಸರದ ಸಂಗತಿ. ವಿಪಕ್ಷದಲ್ಲಿ ಒಗ್ಗಟ್ಟು ಇಲ್ಲದಿರುವುದು ಮತ್ತು ತಮ್ಮದೇ ಪಕ್ಷದ ನಾಯಕರ ವಿರುದ್ಧ ಆರೋಪ, ಟೀಕೆಗಳನ್ನು ಮಾಡುತ್ತಾ ಓಡಾಡುತ್ತಿರುವುದು ವಿಪಕ್ಷ ಅದರಲ್ಲೂ ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ದೊಡ್ಡದೊಂದು ಅವಮಾನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಒಗ್ಗಟ್ಟಿಲ್ಲದ ಬಿಜೆಪಿ
ಕಳೆದ ಎರಡು ವರ್ಷದಿಂದ ನೋಡುತ್ತಾ ಬಂದಿದ್ದೇ ಆದರೆ ಇಲ್ಲಿವರೆಗೆ ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶನವಂತು ಕಂಡು ಬರಲೇ ಇಲ್ಲ. ಬೆಲೆ ಏರಿಕೆ ಇನ್ನಿತರ ವಿಚಾರಕ್ಕೆ ಸಂಬಂಧಿಸಿದಂತೆ ಒಗ್ಗಟ್ಟಿನ ಹೋರಾಟವಂತು ನಡೆಯಲೇ ಇಲ್ಲ. ನಾಯಕರೆಲ್ಲರೂ ಬಣಜಗಳದಲ್ಲಿ ಕಳೆದು ಹೋದರು. ಜತೆಗೆ ತಮಗಿದ್ದ ಮರ್ಯಾದೆಯನ್ನೂ ಕಳೆದುಕೊಂಡರು. ಈಗಿನ ಪರಿಸ್ಥಿತಿಯಲ್ಲಿ ಬಣಜಗಳವಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ಪ್ರಬಲ ವಿರೋಧಪಕ್ಷವೊಂದು ಇಂತಹ ಸ್ಥಿತಿಗೆ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯೇ. ಇದನ್ನು ಸರಿಮಾಡಬೇಕಾದ ಹೈಕಮಾಂಡ್ ಮೀನಾ ಮೇಷ ಎಣಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಇದು ಸದ್ಯಕ್ಕೆ ಸರಿಹೋಗುವ ವಿಚಾರವಲ್ಲ.
ಪ್ರಸ್ತುತ ವಿರೋಧ ಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಒಣಬೇಗುದಿ ಜೋರಾಗಿದೆ. ಇಲ್ಲಿ ನಾಯಕರ ನಡುವಿನ ಪ್ರತಿಷ್ಠೆಯ ಕಿತ್ತಾಟಗಳು ಅವರ ಕರ್ತವ್ಯವನ್ನು ಮರೆಸುತ್ತಿದೆ. ಇದರಿಂದ ವಿರೋಧ ಪಕ್ಷಗಳು ಜನರು ನಿರೀಕ್ಷಿಸಿದಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಗೊತ್ತಾಗುತ್ತಿದೆ. ಆಡಳಿತ ಪಕ್ಷವಾದ ಕಾಂಗ್ರೆಸ್ ಮುಂದಿನ 2028ರಲ್ಲಿಯೂ ನಾವೇ ಆಡಳಿತಕ್ಕೆ ಬರುತ್ತೇವೆ ಎಂಬ ವಿಶ್ವಾಸದಲ್ಲಿದೆ. ಇಂತಹದೊಂದು ಆತ್ಮವಿಶ್ವಾಸ ತುಂಬಿರುವುದು ದುರ್ಬಲಗೊಂಡಿರುವ ವಿರೋಧಪಕ್ಷಗಳಿಂದ ಎನ್ನುವುದು ಅಷ್ಟೇ ಸತ್ಯ.
ರಾಜ್ಯದಲ್ಲಿ ವಿಪಕ್ಷಗಳು ದುರ್ಬಲವಾಗಿರುವುದು ಸತ್ಯ
ಇನ್ನಾದರೂ ಆಡಳಿತ ಪಕ್ಷದ ಕಿವಿಹಿಂಡಿಯುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತವೆಯಾ? ಅಥವಾ ಕಚ್ಚಾಡುವುದರಲ್ಲಿಯೇ ಮುಂದಿನ ಮೂರು ವರ್ಷಗಳನ್ನು ಮುಗಿಸಿ ಬಿಡುತ್ತವೆಯಾ ಗೊತ್ತಿಲ್ಲ. ಈಗಾಗಲೇ ಜನವಲಯದಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಪ್ರಬಲ ವಿರೋಧ ಪಕ್ಷ ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ನಾಯಕರು ನಡೆದುಕೊಳ್ಳುತ್ತಿರುವ ರೀತಿ, ನೀತಿಗಳು ಅಸಹ್ಯ ಮೂಡಿಸುತ್ತಿವೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಎಲ್ಲವನ್ನು ಸರಿಪಡಿಸಿಕೊಂಡು ಮುನ್ನಡೆಯುವ ಯಾವುದೇ ಮುನ್ಸೂಚನೆ ಕಾಣಿಸದ ಕಾರಣ ವಿಪಕ್ಷ ದುರ್ಬಲವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.











Click it and Unblock the Notifications