ಬರೋಬ್ಬರಿ 187 ಕೋಟಿ ಹಗರಣ: ಸಿದ್ದರಾಮಯ್ಯ ರಾಜೀನಾಮೆಗೆ...
ಬೆಂಗಳೂರು, ಆಗಸ್ಟ್ 28: 2024ರಲ್ಲಿ ಬಯಲಾಗಿದ್ದ ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯ (ED) ಈವರೆಗೆ 5 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಪ್ರಕಟಿಸಿದೆ. . 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಬೆಂಗಳೂರಿನ ಇ.ಡಿ ಅಧಿಕಾರಿಗಳು, ಆರೋಪಿಗಳಿಂದ ಸ್ಥಿರಾಸ್ತಿ ಮತ್ತು ಬ್ಯಾಂಕ್ ಠೇವಣಿ ರೂಪದಲ್ಲಿ 5 ಕೋಟಿ ರೂವರೆಗಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಈ ಕುರಿತು ಮಾಜಿ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿದ್ದು, ಕರ್ನಾಟಕ ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಸಂಬಂಧ E.D. 5 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆರೋಪಿ ವ್ಯಕ್ತಿಗಳು/ಸಂಸ್ಥೆಗಳ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ₹ 5 ಕೋಟಿ ರೂ. (ಅಂದಾಜು) ಮೊತ್ತದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ನಾನು ಸ್ವಾಗತ ಮಾಡುವೆ ಎಂದು ಶ್ರೀರಾಮುಲು ಅವರು ಹೇಳಿದ್ದಾರೆ.

ಇನ್ನೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹ 187 ಕೋಟಿ ಹಗರಣದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕು. ಈ ಪ್ರಕರಣದಲ್ಲಿ ಗಂಭೀರ ಆರೋಪ ಹೊತ್ತಿರುವ ಬಳ್ಳಾರಿ ಸಂಸದರಾದ E.V. ತುಕರಾಂ, ಶಾಸಕರಾದ ನಾಗೇಂದ್ರ, ನಾ.ರಾ.ಭರತ್ ರೆಡ್ಡಿ, ಗಣೇಶ್, ಡಾ.ಶ್ರೀನಿವಾಸಮೂರ್ತಿ ನಿಗಮದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮಕ್ಕೆ ಸೇರಿದ ₹ 187 ಕೋಟಿ ದುರ್ಬಳಕೆ ಮಾಡಿಕೊಂಡಿದ್ದು, ₹ 89 ಕೋಟಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. 700ಕ್ಕೂ ಅಧಿಕ ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ನಮ್ಮ ಆರೋಪ ನಿಜವಾಗಿದೆ. ಇದೇ ಹಣವನ್ನು ಲೋಕಸಭೆ ಚುನಾವಣೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡಿರುವ ಮಾಹಿತಿಯು ಲಭ್ಯವಾಗಿದ್ದು, ರಾಜ್ಯ ಸರ್ಕಾರ ಯಾವ ಮಟ್ಟದ ದುರಾಡಳಿತ ನಡೆಸಿದೆ ಎಂಬುದು ಸ್ಪಷ್ಟವಾಗಿದೆ.
ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಾಗೂ ಬ್ಯಾಂಕ್‌ನಲ್ಲಿ ಖಾತೆ ತೆರೆದಾಗ ಆರ್ಥಿಕ ಇಲಾಖೆ ಗಮನಕ್ಕೆ ಏಕೆ ಬರಲಿಲ್ಲ? ಸ್ವಂತ ಹಣಕಾಸು ಇಲಾಖೆ ಜವಾಬ್ದಾರಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಹೊಣೆಗಾರರಲ್ಲವೇ? ಎಂದು ಮಾಜಿ ಸಚಿವರಾದ ಶ್ರೀರಾಮುಲು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications