ಶೀಘ್ರವೇ ದಾವಣಗೆರೆ ಪ್ರತ್ಯೇಕ ಹಾಲು ಒಕ್ಕೂಟ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ, ಆಗಸ್ಟ್ 14: ಶಿವಮೊಗ್ಗ ಹಾಲು ಒಕ್ಕೂಟದಿಂದ ಬೇರ್ಪಡಿಸಿ ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ರಚನೆ ಮಾಡಿ, ಹಾಲು ಉತ್ಪಾದಕರಿಗೆ ಹಸು ಖರೀದಿಸಲು 40 ಸಾವಿರ ರೂ ಸಬ್ಸಿಡಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಈ ಕುರಿತು ದಾವಣಗೆರೆಯಲ್ಲಿ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾ ಸಹಕಾರಿಗಳಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ನಮ್ಮ ಸರ್ಕಾರದ ಅವಧಿಯಲ್ಲಿಯೇ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟ ಬೇರ್ಪಡಿಸಿ ಪ್ರತೇಕ ಹಾಲು ಒಕ್ಕೂಟ ಮಾಡಲು ಕಳೆದ 6 ವರ್ಷಗಳ ಹಿಂದೆ ಪ್ರಯತ್ನಿಸಿದ್ದೆವು. ಅದಕ್ಕೂ ಕಲ್ಲು ಹಾಕಿದರು. ಆದಾದ ನಂತರ ಅಲ್ಲಿ ಒಂದು ಲೋಡು ಮಣ್ಣು ಕೂಡ ಹಾಕಿಸಲು ಸಾಧ್ಯವಾಗಿಲ್ಲ ಎಂದರು.

ಇದೀಗ ದಾವಣಗೆರೆ- ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣ ಮಾಡಿ, ಪ್ರತಿ ಹಸು ಖರೀದಿಗೆ 40 ಸಾವಿರ ರೂ ಸಬ್ಸಿಡಿ ಕೊಡಲಾಗುವುದು. ಗ್ರಾಮೀಣ ಪ್ರದೇಶದ ಜನರು ಇದರಿಂದ ಅಭಿವೃದ್ಧಿಯಾಗುತ್ತಾರೆ. 5 ರಿಂದ 10 ಸಾವಿರ ಹಸು ಖರೀದಿಸಿದರೂ ಕೂಡ ಸಬ್ಸಿಡಿ ನೀಡಲಾಗುವುದು.ಹಾಲು ಒಕ್ಕೂಟದ ಸದಸ್ಯರು ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರು ಜನರಿಗೆ ಒಳ್ಳೆಯ ಸೇವೆ ನೀಡಿದ್ದೇ ಆದಲ್ಲಿ ಜನರು ಆರ್ಥಿಕವಾಗಿ ಸ್ವಾವಲಂಭಿಗಳಾಗಲಿದ್ದಾರೆ. ಸರ್ಕಾರಕ್ಕೂ ತೆರಿಗೆ ಹೆಚ್ಚು ಬರಲಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಆಗಬೇಕೆಂಬುದು ಜಿಲ್ಲೆ ಹೈನುಗಾರರ, ಸಹಕಾರಿಗಳ ಬಹಳ ವರ್ಷಗಳ ಕನಸಾಗಿದೆ, ಹಾಗೇ ಅದು ನಮ್ಮ ಕನಸು ಕೂಡ. ಈ ನಿಟ್ಟಿನಲ್ಲಿ ನಾವು ಸಚಿವರಾಗಿದ್ದಾಗಲೇ ಸಾಕಷ್ಟು ಪ್ರಯತ್ನ ನಡೆದಿದ್ದವು. ಆದರೆ, ಆ ವೇಳೆಗೆ ಸರಕಾರ ಬದಲಾದ ಕಾರಣ ಕನಸು ನನಸಾಗಲಿಲ್ಲ. ಈ ಬಾರಿ ಶಿವಮೊಗ್ಗ ಹಾಲು ಒಕ್ಕೂಟದಿಂದ ದಾವಣಗೆರೆ-ಚಿತ್ರದುರ್ಗ ಬೇರ್ಪಡಿಸಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಹಸು ಖರೀದಿಗೆ ಸಬ್ಸಿಡಿ; ಜಿಲ್ಲೆಯಲ್ಲಿ ಹಾಲು ಒಕ್ಕೂಟ ಆಗಬೇಕಾದರೆ ಇಲ್ಲಿ ಹಾಲು ಉತ್ಪಾದನೆ ಹೆಚ್ಚಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿಯೊಬ್ಬ ಹೈನುಗಾರರಿಗೆ ಹಸು ಖರೀದಿಸಲು ಸರಕಾರದಿಂದ 40,000 ರೂ. ಸಬ್ಸಿಡಿ ಕೊಡಿಸುವ ಜವಾಬ್ದಾರಿ ನಮ್ಮದು. ಇದರಿಂದ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚುವ ಜತೆಗೆ, ರೈತರ ಆದಾಯ ಕೂಡ ಹೆಚ್ಚಾಗುತ್ತದೆ. ಈಗಾಗಲೆ ಈ ಸಂಬಂಧ ನಾವು ಯೋಜನೆ ಒಂದನ್ನು ಸಿದ್ಧಪಡಿಸಿದ್ದೇವೆ,'' ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.












Click it and Unblock the Notifications