Mukhyamantri Chandru: ಎಎಪಿ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ
ಬೆಂಗಳೂರು, ಜುಲೈ 13: ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷದಲ್ಲಿ (AAP) ಮಹತ್ವದ ಬೆಳವಣಿಗೆಗಳು ನಡೆದಿದೆ. ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲೇ ಎಎಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ನಡೆದಿದೆ.
ಆಮ್ ಆದ್ಮಿ ಪಕ್ಷದ (AAP) ಕರ್ನಾಟಕ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಹೆಸರಾಂತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ಮಾಜಿ ಶಾಸಕರಾದ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಎಎಪಿ ಪಕ್ಷದ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ದೆಹಲಿಯಲ್ಲಿ ಬುಧವಾರ ರಾತ್ರಿ ಘೋಷಣೆ ಮಾಡಿದ್ದಾರೆ.

ರಾಜ್ಯಾಧ್ಯಕ್ಷ ಜೊತೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಬಿ.ಟಿ. ನಾಗಣ್ಣ ಹಾಗೂ ಅರ್ಜುನ್ ಪರಪ್ಪ ಹಲಗಿಗೌಡರ್ ಅವರನ್ನು ನೇಮಕ ಮಾಡಿದೆ ಪಕ್ಷ ಅಧಿಕೃತವಾಗಿ ತಿಳಿಸಿದೆ. ಈ ಹಿಂದೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಅವರು ಕಾರ್ಯನಿರ್ವಹಿಸುತ್ತಿದ್ದರು, ಇದೀಗ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಪಕ್ಷ ಪ್ರಕಟಣೆ ಹೊರಡಿಸಿದೆ.
ವಿಧಾನಸಭೆಯಲ್ಲಿ ಸ್ಪರ್ಧಿಸದ ಎಎಪಿ ರಾಜ್ಯಾಧ್ಯಕ್ಷರು
ಕಳೆದ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿದರೇ ವಿನಃ ಖುದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ. ಪಕ್ಷ ಸಂಘಟನೆಗಾಗಿ ತೊಡಗಿಕೊಳ್ಳುವುದಾಗಿ ಹೇಳಿದ್ದರು. ಇದೀಗ ಅವರನ್ನು ಎಎಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಗೌರಿಬಿದನೂರಿನಲ್ಲಿ ಜನತಾ ಪಕ್ಷದಿಂದ ಚುನಾವಣೆ ಎದುರಿಸಿ ಗೆಲ್ಲುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ಅವರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಅಲ್ಲಿಂದ ಆಡಳಿತಾರೂಢ ರಾಜಕೀಯ ಪಕ್ಷಗಳ ಅಕ್ರಮ, ಭ್ರಷ್ಟಾಚಾರ, ತಪ್ಪು ನಿರ್ಧಾರಗಳ ವಿರುದ್ಧ ಹೋರಾಡಿದವರು. ವಿವಿಧ ಪ್ರತಿಭಟನೆಯಲ್ಲಿ ಪಾಲ್ಗೊಂಡವರು.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಸತತ ಯತ್ನ ಮಾಡುತ್ತಲೇ ಇದೆ. ಅಲ್ಲದೇ ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದಷ್ಟು ಅಭಿಯಾನ ಸಹ ಆರಂಭಿಸಿತ್ತು. ಎಲ್ಲ ಚುನಾವಣೆಯಗಳಲ್ಲಿ ಯುವಕರಿಗೆ, ಸ್ಥಳಿಯರಿಗೆ ಆದ್ಯತೆ ನೀಡುವುದಾಗಿ ತಿಳಿಸಿತ್ತು. ಸದ್ಯ ಮುಂಬರಲಿರುವ ಚುನಾವಣೆಗಳತ್ತ ಆಪ್ ಪಕ್ಷ ಗಮನ ಕೇಂದ್ರೀಕರಿಸಿದೆ ಎನ್ನಲಾಗಿದೆ.












Click it and Unblock the Notifications