ಸರ್ಕಾರಿ ಶಾಲಾ ಮಕ್ಕಳಿಂದ ವರುಣಾದಲ್ಲಿ "ಟಾಯ್ಲೆಟ್ ಕ್ಲೀನ್': CM ಸಾಹೆಬ್ರೆ ಏನಂತೀರಾ?
ಬೆಂಗಳೂರು, ನವೆಂಬರ್ 24: ಮ್ಯಾನ್ ಹೋಲ್‌ನಲ್ಲಿ ಇಳಿದು ಮಲ ಎತ್ತುವುದು ನಿಷಿದ್ಧವಾಗಿದೆ. ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸಿರುವ ಅನೇಕ ಪ್ರಕರಣಗಳು ಈ ಹಿಂದೆ ಆಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯ ಸಂಪ್ ಮತ್ತು ಟಾಯ್ಲೆಟ್ ಸ್ವಚ್ಛಗೊಳಿಸಿದ ಸಂಗತಿ ಬೆಳಕಿಗೆ ಬಂದಿದೆ. ಇದಕ್ಕೆ ವಿಪಕ್ಷಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಿಎಂ ಪ್ರತಿನಿಧಿಸುವ ಕ್ಷೇತ್ರದಲ್ಲೇ ಹೀಗಾದರೆ, ಇನ್ನು ರಾಜ್ಯದ ಗತಿ ಏನು? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಇಂಥದ್ದೊಂದು ಅನಿಷ್ಠ ಪದ್ಧತಿ ಬೆಳಕಿಗೆ ಬಂದಿದ್ದು ಕಂಡು ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ಕಿಡಿ ಕಾರಿ ಪೋಸ್ಟ್ ಹಾಕಿದ್ದಾರೆ.

ಸಿಎಂ ಕ್ಷೇತ್ರದಲ್ಲೇ ಹೀಗೆ...!: ಯತ್ನಾಳ್
"ಮುಖ್ಯ ಮಂತ್ರಿಗಳು ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಶೌಚಾಲಯ ಸ್ವಚ್ಛ ಮಾಡುವ ಕೆಲಸವನ್ನು ನೀಡಿರುವುದು ಖಂಡನೀಯ. ಮುಖ್ಯ ಮಂತ್ರಿಗಳ ಸ್ವ ಕ್ಷೇತ್ರದಲ್ಲೇ ಈ ಪರಿಸ್ಥಿತಿ ಎಂದರೆ ಇನ್ನು ರಾಜ್ಯದ ಬೇರೆ ಶಾಲೆಗಳಲ್ಲಿ ಇರುವ ಪರಿಸ್ಥಿತಿಯನ್ನು ವಿವರಿಸಬೇಕಾಗಿಲ್ಲ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ಮುಖ್ಯಮಂತ್ರಿಗಳಿಗೆ ತಮ್ಮ ಸ್ವ-ಕ್ಷೇತ್ರದ ಅಧಿಕಾರಿಗಳು, ಶಿಕ್ಷಣ ವ್ಯವಸ್ಥೆಯ ಮೇಲೆ ಮುಖ್ಯ ಮಂತ್ರಿಗಳಿಗೆ ಹಿಡಿತವಿಲ್ಲ ಎಂದರೆ ಇನ್ನು ರಾಜ್ಯದಲ್ಲಿರುವ ಶಾಲೆಗಳ, ಅಲ್ಲಿನ (ಅ)ವ್ಯವಸ್ಥೆಗಳ ಪಾಡು ಏನೆಂದು ನಾವು ಊಹಿಸಿಕೊಳ್ಳಬಹುದು'.
"ಮುಖ್ಯಮಂತ್ರಿಗಳು ಅಧಿವೇಶನ/ಸದನದಲ್ಲಿ 'ಸಂಧಿ', 'ಸಮಾಸ' ಪಾಠ ಮಾಡುತ್ತಾರೆ. ಮುಖ್ಯ ಮಂತ್ರಿಗಳು ಸಿದ್ದರಾಮಯ್ಯ ನವರು ಮೊದಲು ತಮ್ಮ ಕ್ಷೇತ್ರದಲ್ಲಿನ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲಿ' ಎಂದು ಸದರಿ ಘಟನೆ ಕುರಿತು ಲೇವಡಿ ಮಾಡಿದ್ದಾರೆ.
ಏನಿದು ಘಟನೆ, ನಡೆದಿದ್ದು ಯಾವಾಗ?
ಕೆಲವು ದಿನಗಳ ಹಿಂದಷ್ಟೇ ವರುಣಾ ಕ್ಷೇತ್ರದ ಬಿಳಗೆರೆಹುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ನವೆಂಬರ್ 20ರಂದು ಗ್ರಾಮಸ್ಥ ಸಿದ್ಧರಾಜು ಎಂಬುವವರು ಮಗಳನ್ನು ಕರೆತರಲು ಹೋದಾಗ ಈ ಸಂಗತಿ ಗೊತ್ತಾಗಿದೆ.
ಬಿಇಓಗೆ ದೂರು: ಸಿಎಂಗೆ ಅಧಿಕಾರದ ಚಿಂತೆ
ಸರ್ಕಾರಿ ಶಾಲೆ ಮಕ್ಕಳು ಸಂಪ್‌ಗೆ ಇಳಿದು ಸ್ವಚ್ಛಗೊಳಿಸುತ್ತಿರುವುದು ಮತ್ತು ಟಾಯ್ಲೆಟ್ ಕ್ಲೀನ್ ಮಾಡಿದ್ದಾರೆ. ಈ ಬಗ್ಗೆ ಮಕ್ಕಳನೇ ವಿಚಾರಿಸಿದ ಸಿದ್ಧರಾಜು ಅವರಿಗೆ, ಶಿಕ್ಷಕರೆ ಇದೆಲ್ಲ ಸ್ವಚ್ಛಗೊಳಿಸುವಂತೆ ಹೇಳಿದ್ದಕ್ಕೆ ಮಾಡಿದ್ದೇವೆ ಎಂದು ಮಕ್ಕಳು ಉತ್ತರಿಸಿದ್ದಾರೆ. ಈ ಬಗ್ಗೆ ಬ್ಲಾಕ್ ಎಜ್ಯುಕೇಷನ್ ಅಧಿಕಾರಿಗಳಿಗೆ (ಬಿಇಓ) ದೂರು ನೀಡಲಾಗಿದೆ. ಒಂದೆಡೆ ಸ್ವಕ್ಷೇತ್ರ ವರುಣಾದಲ್ಲಿ ಇಂತಹ ಅನಿಷ್ಠ ಪ್ರಕರಣ ಬೆಳಕಿಗೆ ಬಂದಿ, ಸಿಎಂ ಹಾಗೂ ಅವರ ಬೆಂಬಲಿಗರು ದೆಹಲಿಯಲ್ಲಿ ಅಧಿಕಾರಕ್ಕಾಗಿ ಲಾಭಿ ಮಾಡುತ್ತಿದ್ದಾರೆ. ಇಡಿ ಕರ್ನಾಟಕ ಏಳಿಗೆ ಬಗ್ಗೆ ಚಿಂತಿಸಬೇಕಾದ, ಗಮನ ಕೊಡಬೇಕಾದ ಸಿದ್ದರಾಮಯ್ಯನವರಿಗೆ ತಮ್ಮ ಕ್ಷೇತ್ರದಲ್ಲೇ ಏನಾಗುತ್ತಿದೆ ಎಂಬ ಸಣ್ಣ ಅರಿವು ಇಲ್ಲದೇ ಹೋಯಿತೇ..!












Click it and Unblock the Notifications