ಪಟಾಕಿ; ಸುರಕ್ಷತಾ ಕ್ರಮ ಕೈಗೊಳ್ಳದ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು, ನವೆಂಬರ್ 09; ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಹೋದರೂ ಪಟಾಕಿ ದಾಸ್ತಾನಿಗೆ ಪರವಾನಗಿ ನೀಡಿರುವ ಅಧಿಕಾರಿಗಳ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಕಾನೂನು ಬಾಹಿರವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಏಕೆ ಪರವಾನಗಿ ಕೊಡುತ್ತಿದ್ದೀರಿ?. ದೀಪಾವಳಿ ಹಬ್ಬದಲ್ಲಿ ನಿಮ್ಮ ಅನುಕೂಲಕ್ಕೆ ಈ ರೀತಿ ಪರವಾನಗಿ ನೀಡುತ್ತೀರಾ? ಎಂದು ಕಿಡಿಕಾರಿದೆ. ಜತೆಗೆ ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿ ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದೆ.

ಸುರಕ್ಷತಾ ಕ್ರಮ ಅನುಸರಿಸದ ಹಿನ್ನೆಲೆಯಲ್ಲಿ ನಗರದ ವಿವಿಧ ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಿಗೆ ಬೀಗ ಹಾಕಿರುವ ಕಂದಾಯ ನಿರೀಕ್ಷಕರ ಕ್ರಮ ಪ್ರಶ್ನಿಸಿ ಹಲವು ಪಟಾಕಿ ಮಾರಾಟಗಾರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಪರಿಶೀಲನಾ ವರದಿ ಸಲ್ಲಿಕೆ: ಕೋರ್ಟ್ ಸೂಚನೆ ಮೇರೆಗೆ ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ, ಅರ್ಜಿದಾರರ ಪಟಾಕಿ ದಾಸ್ತಾನು ಹಾಗೂ ಮಾರಾಟ ಮಳಿಗೆಯ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.
ಆ ವರದಿಗಳನ್ನು ನ್ಯಾಯಪೀಠಕ್ಕೆ ಒದಗಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಶಾಂತಿಭೂಷಣ್ ಅವರು, ಜಿಲ್ಲಾಧಿಕಾರಿಗಳು ಪಟಾಕಿ ದಾಸ್ತಾನುಗೆ ಅನುಮತಿ ನೀಡಿರುವ ಹಲವು ಪ್ರಕರಣಗಳಲ್ಲಿ ನಿಯಮಗಳು ಸ್ಪೋಟಕಗಳ ಕಾಯಿದೆ 1984ರ ನಿಯಮಗಳು ಉಲ್ಲಂಘನೆಯಾಗಿವೆ.
500 ಕಿ.ಜಿ ವರೆಗೂ ಪಟಾಕಿ ದಾಸ್ತಾನು ಮಾಡಲು ಜಿಲ್ಲಾಧಿಕಾರಿ ಪರವಾನಗಿ ನೀಡಲು ಅವಕಾಶವಿದೆ. ಆದರೆ, ಅದಕ್ಕಿಂತ ಹೆಚ್ಚು ಪ್ರಮಾಣ ಪಟಾಕಿ ದಾಸ್ತಾನಿಗೂ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.
ಆದರೆ, ಪಟಾಕಿ ದಾಸ್ತಾನು ಇರಿಸಿದ ಮತ್ತು ಮಾರಾಟ ಮಾಡುವ ಜಾಗ, ಇತರೆ ಅಂಗಡಿ, ಮನೆಗಳು ನಡುವೆ 15 ಮೀಟರ್ ಅಂತರವಿರಬೇಕು. ದಾಸ್ತಾನು ಮಾಹಿತಿ ನಿರ್ವಹಣೆ ಮಾಡಬೇಕು. ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಕೆಲ ಪ್ರಕರಣಗಳಲ್ಲಿ ನಿಯಮ ಮೀರಿ ಪರವಾನಗಿ ನೀಡಿದ್ದರೆ, ಅಧಿಕಾರ ವ್ಯಾಪ್ತಿ ಮೀರಿ ಕಂದಾಯ ನಿರೀಕ್ಷಕರು ಪಟಾಕಿ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ ಎಂದು ಅವರು ಕೋರ್ಟ್ ಗಮನಕ್ಕೆ ತಂದರು.
ಅದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಕಾನೂನು ಬಾಹಿರವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಏಕೆ ಪರವಾನಗಿ ಕೊಡುತ್ತಿದ್ದೀರಿ?. ದೀಪಾವಳಿ ಹಬ್ಬದಲ್ಲಿ ನಿಮಗೆ ಅನುಕೂಲವಾಗಲೆಂದು ಈ ರೀತಿ ಪರವಾನಗಿ ನೀಡುತ್ತೀರಾ?. ಕಂದಾಯ ನಿರೀಕ್ಷಕರು ಏಕೆ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ?. ಅವರಿಗೆ ಯಾವ ಅಧಿಕಾರವಿದೆ?. ಪಟಾಕಿ ಏನಾದರೂ ಅವರಿಗೆ ಬೇಕಿತ್ತಾ ಎಂದು ಕಟುವಾಗಿ ಪ್ರಶ್ನಿಸಿತು.
ಅಲ್ಲದೆ, ಪ್ರತಿವರ್ಷ ದೀಪಾವಳಿ ಹಬ್ಬ ಸಮೀಪಿಸಿದಾಗಲೇ ಇದೇ ವರ್ತನೆ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.












Click it and Unblock the Notifications