ಉರಿಮಜಲು ರಾಮಭಟ್ರು ಮೋದಿಗೆ ಜೈ ಅಂದ್ರು
ಪುತ್ತೂರು, ಅ. 21: ಬಿಜೆಪಿ 'ರೆಬೆಲ್ ಸ್ಟಾರ್' ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕಬ್ಬಿನಹಿತ್ಲು ರಾಮ ಭಟ್ ಅವರು ಮತ್ತೆ ಬಿಜೆಪಿ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಿದ್ಧಾಂತಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಂಡು ರಾಜಕೀಯ ನಿಷ್ಠೆಯನ್ನು ತೋರುವ ರಾಮಭಟ್ರು ಮೂಲತಃ ಸಂಘಪರಿವಾರಿಗಳು.
ಹಾಗಾಗಿ ಬಿಜೆಪಿಗೆ ತಮ್ಮ ನಿಷ್ಠೆಯನ್ನು ತೋರುತ್ತಾ ಬಂದವರು ಆದರೆ ಬಿಜೆಪಿಯೇ ತನ್ನ ಸಿದ್ಧಾಂತದಿಂದ ಹಾದಿ ತಪ್ಪಿದಾಗ ಮುಲಾಜಿಲ್ಲದೆ ಆ ಪಕ್ಷದಿಂದ ವಿಮುಖರಾಗುವುದು ರಾಮಭಟ್ರ ಸ್ವಭಾವ. ಯಡಿಯೂರಪ್ಪ ಭ್ರಷ್ಟಾಚಾರದಿಂದ ಹಿಡಿದು ಖುದ್ದು ಬಿಜೆಪಿಯದ್ದೇ ಪಕ್ಷ ವಿರೋಧಿ ಚಟುವಟಿಕೆ ಎಂಬ ಸುಳಿವು ಸಿಗುತ್ತಿದ್ದಂತೆ ಬಿಜೆಪಿಯಲ್ಲಿ ರೆಬೆಲ್ ಆಗುವುದು ರಾಮಭಟ್ರ ಗುಣ.

ಇಂತಿಪ್ಪ ರಾಮಭಟ್ರ ನಿಷ್ಠೆ ಕಳೆದ ವಿಧಾನಸಭೆ ಚುನಾವಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಅವರಿಗೆ ಮೀಸಲಾಗಿತ್ತು. ಕರಾವಳಿ ಭಾಗದಲ್ಲಿ ಇನ್ನೂ ತಮ್ಮ ವರ್ಷಸ್ಸು/ ಪ್ರಭಾವ ಹೊಂದಿರುವ ರಾಮಭಟ್ರು ತಮ್ಮ ಶಿಷ್ಯೆ ಶಕುಂತಳಾ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಚಾರಿತ್ರ್ಯವಂತ ರಾಜಕಾರಣಿ ನರೇಂದ್ರ ಮೋದಿ:
ಆದರೆ ನಿನ್ನೆ ರಾಮಭಟ್ರು ತವರಿಗೆ ಮರಳಿದ್ದಾರೆ. ಭಾನುವಾರ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 'ನರೇಂದ್ರ ಮೋದಿ ಅವರಿಗಾಗಿ ಬಿಜೆಪಿಗೆ ಬರುತ್ತಿದ್ದೇನೆ. ಮೋದಿಯನ್ನು ಪ್ರಧಾನಿ ಮಾಡುವುದೇ ತಮ್ಮ ಗುರಿ' ಎಂದು ಪಕ್ಷಕ್ಕೆ ಮರಳುತ್ತಿರುವ ಬಗ್ಗೆ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಹಿರಿಯ ಕಾರ್ಯಕರ್ತ ದಂಬೆಕಾನ ಸದಾಶಿವ ರೈ ಅವರ ಮನೆಯಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆದಿತ್ತು. ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಮಭಟ್ರು, 'ಈ ದೇಶವನ್ನು ವಿಶ್ವದಲ್ಲೇ ಪ್ರಬಲ ರಾಷ್ಟ್ರವನ್ನಾಗಿಸಲು ಮೋದಿ ಹೊರತು ಇನ್ನಾರಿಂದಲೂ ಸಾಧ್ಯವಿಲ್ಲ.
ಭಾರತೀಯ ಜನಸಂಘದ ಸಿದ್ಧಾಂತ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಆದರ್ಶದ ಬೆಳಕಿನಲ್ಲಿ ಸಾಗುತ್ತಿರುವ ಚಾರಿತ್ರ್ಯವಂತ ರಾಜಕಾರಣಿ ನರೇಂದ್ರ ಮೋದಿ. ಅವರನ್ನು ಪ್ರಧಾನಿಯನ್ನಾಗಿಸುವುದೇ ನಮ್ಮೆಲ್ಲರ ಗುರಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವೆ' ಎಂದು ತಮ್ಮ ಮುಂದಿನ ರಾಜಕೀಯ ನಡೆಯನ್ನು ಸ್ಪಷ್ಟಪಡಿಸಿದರು.












Click it and Unblock the Notifications