ಕರ್ನಾಟಕದಂತೆ ರಾಜಸ್ಥಾನ ಬಿಜೆಪಿಯಲ್ಲೂ ಹೊತ್ತಿಕೊಂಡ ಬೆಂಕಿ: ಚುನಾವಣೆಗೂ ಮುನ್ನ ನಾಯಕರ ನಡುವೆ ಕಿತ್ತಾಟ- ಕಾರಣ ತಿಳಿಯಿರಿ
ಜೈಪುರ, ಅಕ್ಟೋಬರ್ 16: ರಾಜಸ್ಥಾನ ವಿಧಾನಸಭೆ ಚುನಾವಣೆಯು ಮುಂದಿನ ತಿಂಗಳು ನಡೆಯುತ್ತಿದೆ. ಕರ್ನಾಟಕದಂತೆ ರಾಜಸ್ಥಾನ ಬಿಜೆಪಿಯಲ್ಲೂ ಅಸಮಾಧಾನ ಬೆಂಕಿ ಹೊತ್ತಿಕೊಂಡಿದೆ. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಆಂತರಿಕ ಬಂಡಾಯವನ್ನು ಎದುರಿಸುತ್ತಿದೆ.
ಬಿಜೆಪಿಯಿಂದ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಏಳು ಸಂಸದರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಹೈಮಾಂಡಿನ ಈನಿರ್ಧಾರವು ಪಕ್ಷಕ್ಕೆ ಸಂಕಷ್ಟ ತಂದೊಡ್ಡುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ. 7 ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಬಹುತೇಕ ಸಂಸದರು ಪಕ್ಷದ ಸ್ಥಳೀಯ ಮುಖಂಡರಿಂದ ಪ್ರತಿಭಟನೆ ಎದುರಿಸುತ್ತಿದ್ದಾರೆ.

ಪಟ್ಟಿಯಿಂದ ಕೈಬಿಡಲಾಗಿರುವ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಜ್‌ಪಾಲ್ ಸಿಂಗ್ ಅವರ ಪರವಾಗಿ ಜೈಪುರದಲ್ಲಿ ಶನಿವಾರ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರಾಜ್‌ಪಾಲ್ ಸಿಂಗ್ ಅವರು ಪ್ರತಿನಿಧಿಸುವ ಝೋತ್ವಾರಾ ಕ್ಷೇತ್ರದ ( ಇದು ಜೈಪುರ ಗ್ರಾಮಾಂತರ ಲೋಕಸಭೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರ ) ಟಿಕೆಟ್ ಅನ್ನು ಮಾಜಿ ಕೇಂದ್ರ ಸಚಿವ ಮತ್ತು ಜೈಪುರ ಗ್ರಾಮಾಂತರ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ನೀಡಲಾಗಿದೆ. ಇದು ಸಿಂಗ್ ಅವರ ಬೆಂಬಲಿಗರನ್ನು ಕೆರಳಿಸಿದೆ.
ರಾಥೋಡ್ ಅವರನ್ನು ವಿರೋಧಿಸಲು ಝೋತ್ವಾರಾ ಕ್ಷೇತ್ರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್‌ಪಾಲ್ ಸಿಂಗ್ ಅವರ ಪರ 300 ಕ್ಕೂ ಹೆಚ್ಚು ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಅಕ್ಟೋಬರ್ 9 ರ ರಾತ್ರಿ ಬಿಜೆಪಿ ತನ್ನ ಮೊದಲ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದ ತಕ್ಷಣ, ರಾಜ್‌ಪಾಲ್ ಸಿಂಗ್ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. 'ರಾಜ್ಯವರ್ಧನ್ ಸಿಂಗ್ ಗೋ ಬ್ಯಾಕ್' ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದ್ದರು. ಇದರ ಮರುದಿನ ರಾಜ್‌ಪಾಲ್ ಬೆಂಬಲಿಗರು ಜೈಪುರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಅದೇ ರೀತಿ ವಿದ್ಯಾಧರ ನಗರದಿಂದ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಮಾಜಿ ಸಿಎಂ ಭೈರೋನ್ ಸಿಂಗ್ ಶೇಖಾವತ್ ಪುತ್ರ ನರಪತ್ ಸಿಂಗ್ ರಾಜ್ವಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಪುರದ ಮಾಜಿ ರಾಜಮನೆತನಕ್ಕೆ ಸೇರಿರುವ, ಬಿಜೆಪಿ ಸಂಸದೆ ದಿಯಾ ಕುಮಾರಿ ಅವರನ್ನು ವಿದ್ಯಾಧರ ನಗರದಿಂದ ಕಣಕ್ಕೆ ಇಳಿಸಲಾಗಿದೆ.
ಅದೇ ರೀತಿ ಸಂಚೋರ್‌ನಲ್ಲಿ ಸಂಸದ ದೇವ್‌ಜಿ ಪಟೇಲ್ ಅವರಿಗೆ ಟಿಕೆಟ್ ನೀಡಿದ್ದಕ್ಕಾಗಿ ಭಾರೀ ವಿರೋಧ ವ್ಯಕ್ತವಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಶಾಸಕ ಜೀವರಾಮ್ ಚೌಧರಿ ಹಾಗೂ ಮಾಜಿ ಅಭ್ಯರ್ಥಿ ದನರಾಮ್ ಚೌಧರಿ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಚುನಾವಣೆಯಲ್ಲಿ ದೇವ್‌ಜಿ ಪಟೇಲ್‌ಗೆ ತಡೆಯೊಡ್ಡಲು ಜೀವರಾಮ್ ಮತ್ತು ದನರಾಮ್ ಈಗ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಸಂಸದರನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ಪಕ್ಷದ ರಾಜ್ಯ ಮುಖ್ಯಸ್ಥ ಸಿಪಿ ಜೋಶಿ ತಳ್ಳಿಹಾಕಿಲ್ಲ.
'ಪಕ್ಷದ ಸಂಸದೀಯ ಮಂಡಳಿಯು ಟಿಕೆಟ್ ಹಂಚಿಕೆಯನ್ನು ನಿರ್ಧರಿಸುವ ಸರ್ವೋಚ್ಚ ಸಂಸ್ಥೆಯಾಗಿದೆ. ಮಂಡಳಿಯು ಏನು ನಿರ್ಧರಿಸಿದೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು' ಎಂದು ಜೋಶಿ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕತ್ವವು ಈ ರೀತಿಯ ಪ್ರಬಲ ಆಂತರಿಕ ವಿರೋಧವನ್ನು ಎದುರಿಸಿರಲಿಲ್ಲ. ರಾಜಸ್ಥಾನ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಲವರು ಪೈಪೋಟಿ ನಡೆಸುತ್ತಿರುವುದು ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟುಮಾಡಬಹುದು ಎಂದು ಹೇಳಲಾಗುತ್ತಿದೆ. ಕರ್ನಾಟಕ ಚುನಾವಣೆಗೆ ಮುನ್ನ ನಡೆದ ಪ್ರಹಸನಗಳು ರಾಜಸ್ಥಾನದಲ್ಲಿ ನಡೆಯಲಿದೆ ಎಂಬ ಅಭಿಪ್ರಾಯಗಳನ್ನು ತಳ್ಳಿಹಾಕುವಂತಿಲ್ಲ.












Click it and Unblock the Notifications