ಸಿದ್ದರಾಮಯ್ಯಗೆ ಹೇಳಿ ಮಾಡಿಸಿದ ಗಾದೆ ಮಾತುಗಳು ಪಟ್ಟಿ!
ಬೆಂಗಳೂರು, ಸೆಪ್ಟೆಂಬರ್ 26; ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮತ್ತು ರೈತರ ಪರ ಸಂಘಟನೆಗಳು ಬೆಂಗಳೂರು ಬಂದ್ ಕರೆ ನೀಡಿವೆ. ಮಂಗಳವಾರದ ಬೆಂಗಳೂರು ಬಂದ್‌ಗೆ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಸಹ ಕರೆ ನೀಡಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ ರಾಜಕೀಯದ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಟೀಕೆಗಳನ್ನು ಮಾಡುತ್ತಿವೆ. ಬೆಂಗಳೂರು ಬಂದ್‌ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಬಿ. ಎಸ್. ಯಡಿಯೂರಪ್ಪ ಬೆಂಬಲ ಘೋಷಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ವಿವಾದದ ಕುರಿತು ಸೋಮವಾರ ಟ್ವೀಟ್ ಮಾಡಿದ್ದರು. 'ಮಳೆ ಕೊರತೆಯಿಂದಾಗಿ ಉದ್ಭವವಾಗಿರುವ ಕಾವೇರಿ ನೀರು ಹಂಚಿಕೆ ವಿವಾದವನ್ನು ರಾಜ್ಯದ ರೈತರ ಹಿತರಕ್ಷಣೆಗೆ ಅಡ್ಡಿಯಾಗದಂತೆ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ವಿವಾದ ಈಗ ನ್ಯಾಯಾಂಗ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಂಗಳದಲ್ಲಿರುವುದರಿಂದ ಸಂವಿಧಾನಕ್ಕೆ ಬದ್ಧವಾಗಿರುವ ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ' ಎಂದು ಹೇಳಿದ್ದರು.
ಗಾದೆ ಮಾತುಗಳ ಬಾಣ ಬಿಟ್ಟ ಬಿಜೆಪಿ; ಮಂಗಳವಾರ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗಾದೆಗಳ ಬಾಣ ಬಿಟ್ಟಿದೆ.
'ಮಾನ್ಯ ಸಿದ್ದರಾಮಯ್ಯ ಅವರ ಈ ವ್ಯರ್ಥ ಸಮರ್ಥನೆಯ ಪ್ರಲಾಪವನ್ನು ನೋಡಿದರೆ, "ಕಳ್ಳನಿಗೊಂದು ಪಿಳ್ಳೆ ನೆವ", "ಕುಣಿಯಲಾರದವಳು ನೆಲ ಡೊಂಕೆಂದಳಂತೆ", "ಕೈಲಾಗದವ ಮೈ ಪರಚಿಕೊಂಡ" ಎಂಬೆಲ್ಲಾ ಗಾದೆ ಮಾತುಗಳು ಅವರಿಗೆಂದೇ ಹೇಳಿ ಮಾಡಿಸಿದಂತಿದೆ..!' ಎಂದು ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಪೋಸ್ಟ್; ಕಾವೇರಿ ವಿವಾದದ ಕುರಿತು ಮುಖ್ಯಮಂತ್ರಿಗಳ ಅಧಿಕೃತ ಖಾತೆಯಲ್ಲಿ ಪೋಸ್ಟ್ ಹಾಕಿದ್ದ ಸಿದ್ದರಾಮಯ್ಯ, 'ನೆಲ-ಜಲ-ಭಾಷೆಯ ಹಿತರಕ್ಷಣೆಯ ವಿಷಯ ಬಂದಾಗ ರಾಜಕೀಯ ಪಕ್ಷವಾಗಿ ಯೋಚನೆ ಮಾಡದೆ ನಾವೆಲ್ಲ ಕನ್ನಡಿಗರು ಎಂಬ ವಿಶಾಲ ಮನೋಭಾವವನ್ನು ತೋರಿಸಬೇಕು. ಕಾವೇರಿ ನದಿ ನೀರಿನ ವಿವಾದ ಇದೇ ಮೊದಲ ಸಲ ಹುಟ್ಟಿಕೊಂಡದ್ದಲ್ಲ. ದಶಕಗಳ ಕಾಲದಿಂದ ಇದು ನಡೆಯುತ್ತಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಕೂಡಾ ಸತ್ಯ ಮತ್ತು ಸ್ಪಷ್ಟವಾಗಿದೆ. ಈಗ ನನ್ನ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳು, ಸರ್ವ ಪಕ್ಷ ಸಭೆಯಲ್ಲಿ ಯಾಕೆ ಇದೇ ಮಾತು ಹೇಳಿಲ್ಲ?' ಎಂದು ಪ್ರಶ್ನೆ ಮಾಡಿದ್ದರು.
'ಹಿಂದೆಲ್ಲ ಕಾವೇರಿ ನದಿನೀರಿನ ವಿವಾದ ಹುಟ್ಟಿಕೊಂಡಾಗ ಎಲ್ಲ ರಾಜಕೀಯ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪಕ್ಕಕ್ಕಿಟ್ಟು ಒಗ್ಗಟ್ಟಿನಿಂದ ನಡೆದುಕೊಂಡಿವೆ. ಈ ವರೆಗಿನ ಎಲ್ಲ ಪಕ್ಷಗಳ ಸರ್ಕಾರಗಳು ಅನಿವಾರ್ಯವಾಗಿ ನ್ಯಾಯಾಲಯದ ಆದೇಶ ಪಾಲನೆ ಮಾಡಿರುವ ಇತಿಹಾಸ ಕೂಡಾ ನಮ್ಮ ಕಣ್ಣ ಮುಂದಿದೆ. ಈಗಿನ ವಿವಾದವನ್ನು ರಾಜ್ಯದ ಹಿತ ಮತ್ತು ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗದಂತೆ ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿದೆ. ರಾಜ್ಯ ಸರ್ಕಾರ ಆ ಪ್ರಯತ್ನದಲ್ಲಿದೆ. ನಾವು ಈಗಾಗಲೇ ಕಾನೂನು ಮತ್ತು ನೀರಾವರಿ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಅವರ ಸಲಹೆ ಮೇರೆಗೆ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದರು.
'ರೈತರ ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಬಂದ್-ಪ್ರತಿಭಟನೆ ಮಾಡುವ ರೈತರು ಮತ್ತು ಕನ್ನಡ ಹೋರಾಟಗಾರರ ಹಕ್ಕನ್ನೂ ನಾನು ಗೌರವಿಸುತ್ತೇನೆ, ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ. ಇದೇ ವೇಳೆ ಕೆಲವು ರಾಜಕೀಯ ನಾಯಕರು ತಪ್ಪು ಮಾಹಿತಿ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನೂ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ. ನಮ್ಮ ಪ್ರಜ್ಞಾವಂತ ರೈತ ಮತ್ತು ಕನ್ನಡ ಹೋರಾಟಗಾರರು ಇಂತಹ ರಾಜಕೀಯ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಬಲಿಯಾಗದೆ ಬಂದ್ -ಪ್ರತಿಭಟನೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ನಡೆಸಬೇಕೆಂದು ಕೋರುತ್ತೇನೆ' ಎಂದು ಬೆಂಗಳೂರು ಬಂದ್ ಬಗ್ಗೆ ಪೋಸ್ಟ್ ಹಾಕಿದ್ದರು.
'ತಮಿಳುನಾಡು ರಾಜ್ಯ ಮೊದಲು ಪ್ರತಿದಿನ 24,000 ಕ್ಯುಸೆಕ್ ನೀರು ಹರಿಸುವಂತೆ ಬೇಡಿಕೆ ಸಲ್ಲಿಸಿತ್ತು, ನಾವು ನಿರಾಕರಿಸಿದ್ದ ಕಾರಣ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಾವು ಬಿಡಬೇಕಾದ ನೀರಿನ ಪ್ರಮಾಣವನ್ನು 7,200 ಕ್ಯುಸೆಕ್ ಗೆ ಇಳಿಸಿತ್ತು. ನೀರಿನ ಕೊರತೆಯಿಂದಾಗಿ ಇಷ್ಟು ಪ್ರಮಾಣದ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ಅಧಿಕಾರಿಗಳು ವಾದಿಸಿದ ನಂತರ ಪ್ರತಿದಿನ 5,000 ಕ್ಯುಸೆಕ್ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿತ್ತು. ಇದೇ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪಿಕೊಂಡು ನಮಗೆ ನೀರು ಬಿಡಲು ಆದೇಶ ನೀಡಿತ್ತು' ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.












Click it and Unblock the Notifications