256 ಪಿಡಿಒ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಕೆ; ಶೀಘ್ರ ನೇಮಕಾತಿ
ಬೆಂಗಳೂರು,ಫೆಬ್ರವರಿ 14: ರಾಜ್ಯದಲ್ಲಿ 256 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಭರ್ತಿ ಮಾಡಿಕೊಳ್ಳು್ವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವೆ ಸಲ್ಲಿಸಲಾಗಿದ್ದು,ಶೀಘ್ರ ನೇಮಕಾತಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.
ಮಂಗಳವಾರ ಕುಣಿಗಲ್ ಶಾಸಕ ಡಾ.ರಂಗನಾಥ ಅವರು ಕೇಳಿದ ಗಮನಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು ಪಿಡಿಒ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುವುದು. ಪಿಡಿಒಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಪಿಡಿಒಗಳನ್ನು ಬೇರೆಡೆ ನಿಯೋಜಿಸುವುದನ್ನು ಸಹ ರದ್ದುಪಡಿಸಲಾಗಿದೆ ಎಂಬುದನ್ನು ಸಚಿವರು ಸದನಕ್ಕೆ ತಿಳಿಸಿದರು.

ಪಿಡಿಒಗಳ ವರ್ಗಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದ್ದು,ಮುಂದಿನ ವರ್ಷದಿಂದ ಕೌನ್ಸೆಲಿಂಗ್ ಮೂಲಕ ಪಿಡಿಒಗಳ ವರ್ಗಾವಣೆ ಮಾಡಲಾಗುವುದು ಎಂದರು.
ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ: ಸಚಿವ ಎಂ.ಬಿ.ಪಾಟೀಲ್
ರಾಜ್ಯ ಸರಕಾರದಿಂದ ರಿಯಾಯ್ತಿ,ಪ್ರೊತ್ಸಾಹಧನ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಗಳನ್ನ ಸ್ಥಾಪಿಸಿ,ನಂತರ ಸ್ಥಳೀಯರಿಗೆ ಉದ್ಯೋಗ ನೀಡಲು ಅಸಡ್ಡೆ ತೋರಿದರೇ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದರು.
ಉದ್ಯಮಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರಿಗೆ ಅವರವರ ಅರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಬೇಕು ಎಂದು ಹೇಳಿದ ಅವರು ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ ಕಂಪನಿ ತನ್ನ ಘಟಕ ಸ್ಥಾಪಿಸುತ್ತದೆ ಅಂತೇಳಿ ಜಮೀನು ಪಡೆದುಕೊಂಡು ಗಿಡಗಳನ್ನು ನೆಟ್ಟು ತೋಟ ಮಾಡಿಕೊಂಡಿದ್ದಾರೆ;ಒಬ್ಬರಿಗೂ ಕೂಡ ಅವರು ಉದ್ಯೋಗ ನೀಡಿಲ್ಲ; ಜಮೀನು ಒದಗಿಸುವ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದ ನಾನು ಇಂದು ಅಲ್ಲಿನ ರೈತರ ಎದುರುಗಡೆ ನಿಂತು ಮಾತನಾಡಲು ಆಗುತ್ತಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಅವರು ಅಸಮಾಧಾನ ತೋಡಿಕೊಂಡರು.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶೀಘ್ರ ಕ್ರಮ: ಭೈರತಿ ಸುರೇಶ್
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಇವರು ನಿಯಮ 330 ರಡಿ ಕಲಬುರಗಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯ ಕಾರ್ಯಕ್ಕೆ ಇದುವರೆವಿಗೂ ಸುಮಾರು 90 ಕೋಟಿಗೂ ಹೆಚ್ಚು ಖರ್ಚುಮಾಡಲಾಗಿದ್ದರೂ ಇದುವರೆವಿಗೆ ಒಂದೇ ಒಂದು ಮನೆಗೂ ಸಹ ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ ಹಾಗೂ ಅಳವಡಿಸಿರುವ ಪೈಪ್‌ಗಳು ಅತ್ಯಂತ ಕಳಪೆ ಗುಣಮಟ್ಟದೆಂದು ಸಾಬೀತಾಗಿರುವ ಗಂಭೀರ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದಸಚಿವ ಭೈರತಿ ಸುರೇಶ್, ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ವಿನ್ಯಾಸ-ನಿರ್ಮಾಣ-ಕಾರ್ಯಾಚರಣೆ- ವರ್ಗಾವಣೆ ಮಾದರಿಯಲ್ಲಿ ಅನುಷ್ಠಾನಗೊಳಿಸಲು L&T ಲಿಮಿಟೆಡ್ ಚೆನ್ನೈ ಇವರಿಗೆ 837.43 ಕೋಟಿಗಳಿಗೆ ಗುತ್ತಿಗೆ ನೀಡಲಾಗಿದೆ.
ಕರಾರಿನಂತೆ ಗುತ್ತಿಗೆದಾರರು ಜೂನ್ 2025 ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾಗಿರುತ್ತದೆ. ಬೆಣ್ಣೆತೋರ ಜಲಾಶಯದಿಂದ 1.624 ಟಿಎಂಸಿ ನೀರನ್ನು ಜುಲೈ 2022 ರಲ್ಲಿ ಕಲಬುರಗಿ ನಗರಕ್ಕೆ ಹಂಚಿಕೆ ಮಾಡಲಾಗಿದೆ. ಸದರಿ ಕೊಳವೆಯ ಕೆಲವು ಅಂಶಗಳ ಗುಣಮಟ್ಟ ಸರಿ ಇಲ್ಲದ ಕಾರಣ L&_T ರವರು ಸರಬರಾಜು ಮಾಡಿರುವ ಎಲ್ಲಾ ಕೊಳವೆಗಳನ್ನು ತಿರಸ್ಕರಿಸಿದ್ದು, ಹೊಸ ಗುಣಮಟ್ಟದ ಕೊಳವೆಗಳನ್ನು ಸರಬರಾಜು ಮಾಡಲು ಸೂಚಿಸಲಾಗಿರುತ್ತದೆ ಆದ್ದರಿಂದಾಗಿ ಮನೆಗಳಿಗೆ ನಳ ಸಂಪರ್ಕ ನೀಡಲು ವಿಳಂಬವಾಗಿರುತ್ತದೆ.
ನಿಗದಿತ ಅವಧಿಯಲ್ಲಿ ಕರಾರಿನಂತೆ ಕೆಲಸವಾಗದಿರುವ ಕಾರಣಕ್ಕೆ ಇದುವರೆಗೆ ಕಂಪನಿಗೆ 25.92 ಕೋಟಿ ರೂ ದಂಡ ವಿಧಿಸಲಾಗಿರುತ್ತದೆ. ಮುಂದುವರೆದು ನಿಗದಿತ ದಿನಾಂಕದೊಳಗೆ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಅನುಷ್ಠಾನಗೊಳಿಸಬೇಕು ಹಾಗೂ ಹಂತ ಹಂತವಾಗಿ ನಳ ಸಂಪರ್ಕವನ್ನು ಕಲ್ಪಿಸುವಂತೆ L& T ಅವರಿಗೆ ಆದೇಶಿಸಲಾಗಿದೆ ಎಂದರು












Click it and Unblock the Notifications