Karnataka Caste Census: ಜಾತಿ ಗಣತಿ ವರದಿ ಬಹಿರಂಗಕ್ಕೆ ಹೆಚ್ಚಿದ ಒತ್ತಡ- ಸಿದ್ದರಾಮಯ್ಯರಿಂದ ಐತಿಹಾಸಿಕ ನಿರ್ಧಾರ?
ಬೆಂಗಳೂರು, ಅಕ್ಟೋಬರ್ 04: ಬಿಹಾರ ಸರ್ಕಾರವು ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಿದೆ. ಕರ್ನಾಟಕದಲ್ಲಿಯೂ ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಲು ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. ಕಾಂಗ್ರೆಸ್ಸಿನ ಪ್ರಬಲ ನಾಯಕರೇ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರುತ್ತಿರುವ ಕುರಿತು ವರದಿಯಾಗಿದೆ.
2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿತ್ತು. ಇದಕ್ಕಾಗಿ ₹170 ಕೋಟಿ ವೆಚ್ಚವನ್ನು ಅಂದಾಜಿಸಲಾಗಿತ್ತು. ಈ ಸಮೀಕ್ಷೆಯ ವರದಿ ಇನ್ನೂ ಬಹಿರಂಗವಾಗಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಹೆಚ್ ಕಾಂತರಾಜ್ ಅವರು ಜಾತಿ ಗಣತಿ ವರದಿ ತಯಾರಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು.

ಪ್ರಬಲ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಸಂಖ್ಯಾ ಬಲದ ಸಾಂಪ್ರದಾಯಿಕ ಗ್ರಹಿಕೆಗೆ ಸಮೀಕ್ಷೆಯ ಫಲಿತಾಂಶಗಳು ವಿರುದ್ಧವಾಗಿವೆ ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜಾತಿ ಗಣತಿ ವರದಿಯನ್ನು ಬಹಿರಂಗಗೊಳಿಸಲು ಸರ್ಕಾರ ಹಿಂದೇಟು ಹಾಕಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ನಾಯಕರಿಂದ ಒತ್ತಾಯ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಶ್ಲಾಘಿಸಿದ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ವರದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
'ಜಾತಿ ಗಣತಿಯು ವಿವಿಧ ಸಮುದಾಯಗಳಿಗೆ ಅರ್ಹವಾದ ಹಕ್ಕುಗಳನ್ನು ಪಡೆಯಲು ಸಹಾಯ ಮಾಡುತ್ತದೆ' ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಜ್ಯ ಹಾಗೂ ದೇಶಗಳಲ್ಲಿ ಜಾತಿ ಗಣತಿಯಾಗಬೇಕು ಎಂಬುದು ನಮ್ಮ ಅಗ್ರ ನಾಯಕ ರಾಹುಲ್ ಗಾಂಧಿಯವರ ಬಹುಕಾಲದ ಆಸೆಯಾಗಿದೆ ಎಂದು ಅವರು ಹೇಳಿದ್ದಾರೆ.
ಜಾತಿ ಗಣತಿ ವರದಿಯ ಆಧಾರದ ಮೇಲೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಅದು ಫಲಪ್ರದವಾಗಬೇಕಾದರೆ ಈಗ ಸರ್ಕಾರದ ಬಳಿ ಇರುವ ಕಾಂತರಾಜ್ ಆಯೋಗದ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.
ಕಾಂತರಾಜ್ ವರದಿಯಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸಿ ಅನುಷ್ಠಾನಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
'ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದಿದ್ದರೆ ಯಾವುದೇ ಫಲ ನೀಡುವುದಿಲ್ಲ. ಇದರಲ್ಲಿ ಗೌಪ್ಯವಾಗಿಡಲು ಏನೂ ಇಲ್ಲ. ಜನಗಣತಿಯನ್ನು ಸಾರ್ವಜನಿಕರ ಹಣದಲ್ಲಿ ಮಾಡಲಾಗಿದೆ. ಅದಕ್ಕೆ ಸುಮಾರು ₹170 ಕೋಟಿ ಖರ್ಚು ಮಾಡಲಾಗಿದೆ. ಹಿಂದಿನ ಬಿಜೆಪಿ ಸರಕಾರ ಅದನ್ನು ಜಾರಿಗೆ ತರಲಿಲ್ಲ. ಈಗ ನಮ್ಮದೇ ಸರ್ಕಾರ ಇರುವುದರಿಂದ ಅದನ್ನು ಸಾರ್ವಜನಿಕಗೊಳಿಸಬೇಕು. ವಿಧಾನಸಭೆಯ ಉಭಯ ಸದನಗಳಲ್ಲಿ ಚರ್ಚಿಸಿದ ನಂತರ ಅದರ ಅನುಷ್ಠಾನದ ಬಗ್ಗೆ ಸರ್ಕಾರ ನಿರ್ಧರಿಸಲಿ' ಎಂದು ಅವರು ತಿಳಿಸಿದ್ದಾರೆ.
ಜಾತಿ ಗಣತಿ ವರದಿಯು ಪ್ರಸ್ತುತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಬಳಿ ಇದೆ. ವರದಿ ಸಲ್ಲಿಸಿದ ನಂತರ ಸಂಪುಟ ಸಭೆ ತೀರ್ಮಾನ ಕೈಗೊಳ್ಳಲಿದೆ ಎಂದು ಹಿಂದಿನ ಸಿದ್ದರಾಮಯ್ಯ ಸರ್ಕಾರ ಹೇಳಿತ್ತು.
ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಅವರು ಮುಂದಿನ ತಿಂಗಳೊಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.












Click it and Unblock the Notifications