Lok Sabha Election 2024: ಈ ಬಾರಿ ಶೆಟ್ಟರ್‌ಗೆ ಧಾರವಾಡದ ಟಿಕೆಟ್?, ಪ್ರಹ್ಲಾದ್ ಜೋಶಿ ಸ್ಪರ್ಧೆ ಎಲ್ಲಿಂದ?
ಬೆಂಗಳೂರು, ಫೆಬ್ರವರಿ 02: ಲೋಕಸಭಾ ಚುನಾವಣೆ 2024 ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಸಿದ್ಧತೆ, ಟಿಕೆಟ್ ಹಂಚಿಕೆ ಚರ್ಚೆ, ಗೆಲುವಿನ ತಂತ್ರ, ಯಾರಿಗೆ ಯಾವ ಕ್ಷೇತ್ರ? ಎಂಬ ಚಿಂತನೆಗಳು ಆರಂಭವಾಗಿದೆ. ಇದರ ಭಾಗವಾಗಿಯೇ ಬಿಜೆಪಿ ಪಾಳೆಯದಲ್ಲಿ ಪ್ರಮುಖ ಎರಡು ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ಬದಲಾವಣೆ ತರಲು ಬಿಜೆಪಿ (BJP) ನಿರ್ಧರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೌದು, ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಮರಳಿ ಬಿಜೆಪಿಗೆ ಬಂದ ಬಳಿಕ ಒಂದಷ್ಟು ಬೆಳವಣಿಗೆಗಳು, ಜಾತಿ ಲೆಕ್ಕಾಚಾರಗಳು ಬಿಜೆಪಿಯ ಅಂಗಳದಲ್ಲಿ ಶುರುವಾಗಿವೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಶೆಟ್ಟರ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವಾಗ ಒಂದಷ್ಟು ಆಫರ್, ಸ್ಥಾನ ಮಾನದ ಭರವಸೆ ಕೊಟ್ಟಿದ್ದಾರೆ. ಅದರಲ್ಲಿ ಧಾರವಾಡ (Dharwad) ಕ್ಷೇತ್ರದ ಟಿಕೆಟ್ ನೀಡುವ ಆಫರ್ ಸಹ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ಪ್ರಹ್ಲಾದ್ ಜೋಶಿ ಸ್ಪರ್ಧೆ ಎಲ್ಲಿಂದ?
ಒಂದು ವೇಳೆ ಜಗದೀಶ್ ಶೆಟ್ಟರ್ ಧಾರವಾಡದಿಂದ ಟಿಕೆಟ್ ಪಡೆದು ಸ್ಪರ್ಧಿಸಿದರೆ, ಈ ಕ್ಷೇತ್ರ ಪ್ರತಿನಿಧಿಸುತ್ತಾ ಬಂದ ಹಾಲಿ ಸಂಸದ ಪ್ರಹ್ಲಾದ್ ಜೋಶಿ (Pralhad Joshi)ಅವರು ಎಲ್ಲಿಂದ ಸ್ಪರ್ಧಿಸಲಿದ್ದಾರೆ? ಎಂಬುದೇ ಕೌತುಕಕ್ಕೆ ಕಾರಣವಾಗಿದೆ. ಅಲ್ಲದೇ ಇದು ಧಾರವಾಡದ ಜೋಶಿ ಯವರ ಬೆಂಬಲಿಗರ ಆತಂಕಕ್ಕೂ ಕಾರಣವಾಗಿದೆ.
ಇದೀಗ ಈ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಧಾರವಾಡ ಕ್ಷೇತ್ರದ ಟಿಕೆಟ್ ಜಗದೀಶ್ ಶೆಟ್ಟರ್ ಅವರ ಪಾಲಾದರೆ, ಕೆಲವು ವರ್ಷಗಳಿಂದ ಸಕ್ರಿಯವಾಗಿರದ ಬಿಜೆಪಿಯ ಮತ್ತೊಬ್ಬ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಲೋಕಸಭಾ ಕ್ಷೇತ್ರ ಉತ್ತರ ಕನ್ನಡದ (Uttar Kannada) ಟಿಕೆಟ್ ಈ ಬಾರಿ ಪ್ರಹ್ಲಾದ್ ಜೋಶಿ ಅವರ ಪಾಲಾಗಲಿದೆ? ಎಂದು ರಾಜಕೀಯ ಮೂಲಗಳು ತಿಳಿಸಿವೆ.
ಲಿಂಗಾಯತ ಮತಗಳ ಬಿಜೆಪಿ ಕಣ್ಣು
ಧಾರವಾಡ ಕ್ಷೇತ್ರದಲ್ಲಿ ಹೆಚ್ಚಿರುವ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಲಿಂಗಾಯತ ಸಮುದಾಯದ ಶೆಟ್ಟರ್ ಅವರನ್ನು ಕಣ್ಣಕಿಳಿಸಲು ಪ್ಲಾನ್ ಮಾಡಿದೆ. ಆದರೆ ಜೋಶಿ ಅನ್ಯಾವಾಗದಂತೆ ನೋಡಿಕೊಳ್ಳಲು ಬ್ರಾಹ್ಮಣರು ಅಧಿಕವಾಗಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯ ನಾಯಕ ಜೋಶಿಯವರನ್ನು ಅಖಾಡಕ್ಕಿಳಿಸಲು ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ನಾಯಕರು ಪ್ಲಾನ್ ಮಾಡಿದೆ. ಈ ಮೂಲಕ ಯಾರಿಗೂ ಅಸಮಾಧಾನವಾಗದಂತೆ ಎಚ್ಚರಿಕೆಯ ತೀರ್ಮಾನ ಬಿಜೆಪಿ ಕೈಗೊಂಡಿದೆ.

ಇವೆರಡು ಬಿಜೆಪಿಯ ಗೆಲುವಿನ ಕ್ಷೇತ್ರಗಳೇ ಆಗಿದ್ದರು ಸಹಿತ, ಯಾರಿಗೂ ನಿರಾಸೆ ಆಗದಂತೆ ನೋಡಿಕೊಳ್ಳುವ ಜೊತೆಗೆ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು, ಆ ಮೂಲಕ ಎದುರಾಳಿ ಪಕ್ಷ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧರಿಸಿದೆ.
ಆನಂತ್ ಕುಮಾರ್ ಹೆಗಡೆ ಸ್ಪರ್ಧೆ?
ಜಗದೀಶ್ ಶೆಟ್ಟರ್ ಮರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಕ್ಕೆ ಯಾವುದೇ ವಿರೋಧ ಇಲ್ಲ ಎಂದಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಸ್ವಕ್ಷೇತ್ರ ಇಲ್ಲದಂತಾಗುವ ಸ್ಥಿತಿ ಎದುರಾಗಲಿದೆ. ಇತ್ತ ಆನಂತ್ ಕುಮಾರ್ ಹೆಗಡೆ ಅವರು ಕಳೆದ ಸುಮಾರು ನಾಲ್ಕೂವರೆ ವರ್ಷದಲ್ಲಿ ಎಲ್ಲೂ ಕಾಣಿಸಲಿಲ್ಲ. ಅನಾರೋಗ್ಯಕ್ಕೆ ತುತ್ತಾಗಿದ್ದರೂ ಅಂತಲೂ ಹೇಳಲಾಗುತ್ತಿದೆ.
ಮೊನ್ನೆಯಷ್ಟೇ ಪ್ರತ್ಯಕ್ಷವಾದ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವನಚದಲ್ಲಿ ಪ್ರಹಾರ ನಡೆಸಿದ್ದರು. ನಮಗೆ ಕಾಂಗ್ರೆಸ್ ವಿರೋಧಿಯಲ್ಲಿ ಸಿದ್ದಿರಾಮಯ್ಯ ಎಂದೆಲ್ಲ ಗುಡುಗಿದ್ದರು. ನೇರವಾಗಿ ಹಿಂದು ಪರ ಮಾತನಾಡುವ, ಸವಾಲು ಹಾಕುವ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿರುತ್ತಿದ್ದ ಹೆಗಡೆ ಅವರ ಈ ಹೇಳಿಕೆಗಳಿಗೆ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತವಾಗಿತ್ತು. ಇದು ಅವರ ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಸ್ಪಷ್ಟಪಡಿಸಿತ್ತು.
ಇದರ ಬೆನ್ನಲ್ಲೆ ಆನಂತ್ ಕುಮಾರ್ ಹೆಗಡೆ ಅವರಿಗೆ ಬಿಜೆಪಿ ಶಾಕ್ ನೀಡುವ ಸಾಧ್ಯತೆ ಇದೆ. ಆದರೆ ಅವರಿಗೆ ಈ ಬಾರಿ ಸ್ಪರ್ಧೆ ಅವಕಾಶ ನೀಡಲಿದೆಯೋ? ಇಲ್ಲವೋ ಎಂಬುದ ತಿಳಿಯಬೇಕಿದೆ. ಅಷ್ಟೇ ಅಲ್ಲದೇ ರಾಜಕೀಯವಾಗಿ ಈ ಬಾರಿ ಹೆಚ್ಚು ಮುನ್ನೆಲೆಗೆ ಬಾರದ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ನೀಡದಿರಲು ಬಿಜೆಪಿ ತಿರ್ಮಾನಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕೆಲವು ಹೇಳುತ್ತಿದ್ದಾರೆ.












Click it and Unblock the Notifications