Maize: ಮಕ್ಕೆಜೋಳ ಖರೀದಿಯಲ್ಲಿ ಸರ್ಕಾರ ವಿಫಲ, ಆಮದು ಆರೋಪ ಸುಳ್ಳು: ಪ್ರಹ್ಲಾದ್ ಜೋಶಿ
ಬೆಂಗಳೂರು, ನವೆಂಬರ್ 22: ಕರ್ನಾಟಕದಲ್ಲಿ ರೈತರ ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಿರಿ ಕಾರಿದ್ದಾರೆ. ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೇಕೆಜೋಳ ಬೆಳೆಯಲಾಗಿದೆ. ಆದರೆ ಸೂಕ್ತ ಬೆಲೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರದ ತಪ್ಪೇನು? ವಿಫಲವಾಗಿದ್ದೆಲ್ಲಿ, ಆಮದು ಬಗ್ಗೆ ಸರ್ಕಾರದ ಸುಳ್ಳು ಹೇಳಿದೆ ಎಂದು ಜೋಶಿ ಅವರು ಜನರಿಗೆ ವಿವರ ನೀಡಿದ್ದಾರೆ.
ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಇದರ ಬೆನ್ನಲ್ಲೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು 2400 ರೂ.ಗೆ ಖರೀದಿಸಲಾಗುವುದು. ಖರೀದಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜೊತೆಗೆ ಕೇಂದ್ರ ಮೆಕ್ಕೆಜೋಳ ಆಮದು ನಿಲ್ಲಿಸುವಂತೆ ಕೋರಿದ್ದರ ಬೆನ್ನಲ್ಲೆ ಪ್ರಹ್ಲಾದ್ ಜೋಶಿಯವರು ಪ್ರತಿಕ್ರಿಯಿಸಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಮೆಕ್ಕೆಜೋಳ ಖರೀದಿಯ ವಿಷಯದಲ್ಲಿ ಕರ್ನಾಟಕ ಸರ್ಕಾರವು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಆದರೆ ಈ ದಿಸೆಯಲ್ಲಿ ತತ್‌ಕ್ಷಣವಾಗಿ ಕೈಗೊಳ್ಳಬೇಕಾದ ಕೆಲಸ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಎಥೆನಾಲ್ (Ethanol) ಉತ್ಪಾದನೆಗಾಗಿ ಮೆಕ್ಕೆಜೋಳದ ಖಾತರಿ ಖರೀದಿಗೆ ಎನ್‌ಸಿಸಿಎಫ್ (NCCF) ಅಥವಾ ನಾಫೆಡ್ (NAFED) ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಾಜ್ಯದ ಡಿಸ್ಟಿಲರಿಗಳಿಗೆ (distilleries) ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾಕೆ ಸೂಚನೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದಿಂದಲೇ ಪರವಾನಗಿ ಪಡೆದ ಈ ಡಿಸ್ಟಿಲರಿಗಳಿಗೆ, ಖಚಿತ ಖರೀದಿಗಾಗಿ ಎನ್‌ಸಿಸಿಎಫ್ ಅಥವಾ ನಾಫೆಡ್‌ನೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿತ್ತು. ಆದರೆ ಅದ್ಯಾವುದು ನಡೆದಿಲ್ಲ. ಈ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು (SOP) ಈಗಾಗಲೇ ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ ಎಂದು ಪ್ರಹ್ಲಾದ್ ಜೋಶಿಯವರು ತಿಳಿಸಿದರು.
ಕನಿಷ್ಠ ಬೆಂಬಲ ಬೆಲೆ (MSP) ಜಾರಿ ಬಗ್ಗೆ ಕೇಂದ್ರದ ಕಡೆಗೆ ಬೆರಳು ತೋರಿಸುವ ಮುನ್ನ ರಾಜ್ಯ ಸರ್ಕಾರ ಈ ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು ಆಗ್ರಹಿಸಿದ್ದಾರೆ. ಡಿಸ್ಟಿಲರಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿಯೇ (MSP) ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಕರ್ನಾಟಕ ಸರ್ಕಾರ ಏಕೆ ಕಡ್ಡಾಯಗೊಳಿಸಿಲ್ಲ?
ಸ್ಥಳೀಯ ಖರೀದಿ ನಿಯಮಗಳನ್ನು ಜಾರಿಗೊಳಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರದ ಬಳಿ ಇದೆ. ಒಂದು ವೇಳೆ ಡಿಸ್ಟಿಲರಿಗಳು ಎಂ.ಎಸ್.ಪಿ ಗಿಂತ ಕಡಿಮೆ ದರದಲ್ಲಿ ಖರೀದಿಸುತ್ತಿದ್ದರೆ, ಅದಕ್ಕೆ ರಾಜ್ಯ ಸರ್ಕಾರವು ಸೂಕ್ತ ಆದೇಶ ನೀಡದಿರುವುದೇ ಮುಖ್ಯ ಕಾರಣ. ಡಿಸ್ಟಲರಿಗಳು ಬೇಡಿಕೆಯನ್ನು ನೀಡಬೇಕು ಎಂದು ಮಾರ್ಗಸೂಚಿಯಲ್ಲಿ (ಎಸ್‌ಓಪಿ) ಎಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ. ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಅಡಿಯಲ್ಲಿ ಈ ಎಲ್ಲ ಡಿಸ್ಟಾಲರಿಗಳು ಕಾರ್ಯ ನಿರ್ವಹಿಸುತ್ತಾರೆ. ಸರ್ಕಾರದ ಈ ನಿಷ್ಕ್ರಿಯತೆಗೆ ಇಂದು ರೈತರು ಬೆಲೆ ತೆರುತ್ತಿದ್ದಾರೆ. ಇದಕ್ಕೆ ಮೂಲ ತಮ್ಮ ಆಡಳಿತದ ವೈಫಲ್ಯವೇ ಎಂದು ರಾಜ್ಯ ಸರ್ಕಾರ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ.
ಮೆಕ್ಕೆಜೋಳ ಆಮದು: ಕೇಂದ್ರದ ಮೇಲೆ ಸುಳ್ಳು ಆರೋಪ
ಕೇಂದ್ರ ಸರ್ಕಾರವು ಈ ವರ್ಷ 70 ಎಲ್.ಎಂ.ಟಿ (LMT) ಮೆಕ್ಕೆಜೋಳ ಆಮದು ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪವು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು ಎಂದು ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಆರೋಪ ಒಂದೆಡೆಯಾದರೆ, 2025-26ರ ನೈಜ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ. ಈ ವರ್ಷ ಆಮದು ಕೇವಲ 0.5 ಎಲ್.ಎಂ.ಟಿ ನಷ್ಟಾಗಿದೆ. ಭಾರತದಿಂದ ರಫ್ತು 2.52 ಎಲ್‌ಎಂಟಿಯಷ್ಟಾಗಿದೆ ಎಂದು ಅವರು ಅಂಕಿ ಸಂಖ್ಯೆ ಸಮೇತ ವಿವರಿಸಿದರು.
ಬ್ಲೇಮ್ ಗೇಮ್ ಬೇಡ
ಮತ್ತೊಂದೆಡೆ ಮೆಕ್ಕೆಜೋಳದ ಆಮದು ಸುಂಕವು (Import Duty) ಶೇಕಡಾ 50 ರಷ್ಟಿದೆ. ಇದು ಆಮದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಸುಳ್ಳು ಅಂಕಿಅಂಶಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ, ನಿಖರತೆಯೇ ಮುಖ್ಯವಾಗುತ್ತದೆ. ಮುಖ್ಯಮಂತ್ರಿಗಳು ಬ್ಲೇಮ್ ಗೇಮ್ ಅನ್ನೇ ತಮ್ಮ ಆಡಳಿತದ ಮೂಲ ಮಂತ್ರವನ್ನಾಗಿಸಿಕೊಂಡಿದ್ದೆ ಇದಕ್ಕೆ ಕಾರಣವಲ್ಲವೇ? ಎಂದು ಅವರು ಆರೋಪಗಳಿಗೆ ತಿರುಗೇಟು ನೀಡಿದರು.
ಇನ್ನೂ ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಹಂಚಿಕೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿದ್ದನ್ನು ರಾಜ್ಯ ಸರ್ಕಾರ ಮರೆ ಮಾಚುತ್ತಿದೆ. ಸತ್ಯವೇನೆಂದರೆ, ಎಥೆನಾಲ್ ಮತ್ತು ಕೈಗಾರಿಕಾ ಬಳಕೆಗೆ ಹಂಚಿಕೆ ಮಾಡಲಾದ ಮೆಕ್ಕೆಜೋಳದ ಪ್ರಮಾಣದಲ್ಲಿ ಅಧಿಕ ಏರಿಕೆಯಾಗಿದೆ ಎಂದರು.
ಎಥೆನಾಲ್ ಉತ್ಪಾದನೆಗೆ ಹಂಚಿಕೆಯಾದ ಮೆಕ್ಕೆಜೋಳದ ಪ್ರಮಾಣ
* 2022-23 ರಲ್ಲಿ 8.29 ಎಲ್‌ಎಂಟಿ
* 2023-24 ರಲ್ಲಿ 75.38 ಎಲ್‌ಎಂಟಿ
* 2024-25 ರಲ್ಲಿ 125.75 ಎಲ್‌ಎಂಟಿ ಹಂಚಿಕೆ ಆಗಿದೆ.
2022-23 ಕ್ಕೆ ಹೋಲಿಸಿದರೆ ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಹಂಚಿಕೆ ಪ್ರಮಾಣ ಶೇಕಡಾ 1,417 ರಷ್ಟು ಹೆಚ್ಚಳವಾಗಿದೆ . ಕಳೆದ ವರ್ಷಕ್ಕಿಂತ ಶೇ. 66 ರಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸ್ಪಷ್ಟವಾಗಿ ಹೆಚ್ಚಿಸಿದೆ. ಆದರೆ ರಾಜ್ಯ ಸರ್ಕಾರವು ಇದರ ಲಾಭ ರೈತರಿಗೆ ಸಿಗುವಂತೆ ನೋಡಿಕೊಳ್ಳುವಲ್ಲಿ ಸೋತಿದೆ ಎಂದು ತಿಳಿಸಿದರು.
ನಮ್ಮ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದ್ದು, ಅವರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರತಿ ಬಾರಿಯೂ ಕೇಂದ್ರದತ್ತ ಬೆರಳು ಮಾಡಿ ದೂಷಿಸುವ ಬದಲು, ರೈತರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರವು ಕೂಡಲೇ ತಾನು ಮಾಡಬೇಕಾದ ಕರ್ತವ್ಯಗಳನ್ನೂ ಹಾಗೂ ಕೈಗೊಳ್ಳಬೇಕಾದ ಕ್ರಮಗಳನ್ನು ನೆರವೇರಿಸುವುದು ಅತ್ಯಾವಶ್ಯಕವಾಗಿದೆ ಎಂದು ಅವರು ಕಿವಿ ಮಾತು ಹೇಳಿದರು.












Click it and Unblock the Notifications