18 ವರ್ಷದಿಂದ ಪ್ರಯತ್ನ: ಈ ಬಾರೀ ಟಿಕೆಟ್‌ಗೆ ಪಟ್ಟು ಬಿಡದ ಭವಾನಿ ರೇವಣ್ಣ- ಗೌಡರ ಕುಟುಂಬದಲ್ಲಿ ನಡೆಯುತ್ತಿರುವುದೇನು?
18 ವರ್ಷಗಳಿಂದ ಟಿಕೆಟ್ ಗಾಗಿ ಪ್ರಯತ್ನ ಪಡುತ್ತಿರುವ ಭಾವನಿ ರೇವಣ್ಣ 2023 ರ ವಿಧಾನಸಭಾ ಚುನಾವಣೆಯಲ್ಲಿ ಶತ ಪ್ರಯತ್ನ ಮಾಡಿಯಾದರೂ ಈ ಬಾರೀ ಸ್ಪರ್ಧಿಸಲೇ ಬೇಕು ಎಂದು ಪಣ ತೊಟ್ಟಿದ್ದು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತ
ಬೆಂಗಳೂರು, ಫೆಬ್ರವರಿ 6: ಹಾಸನಕ್ಕೆ ನಾನೇ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಹೇಳಿಕೆ ಕೊಟ್ಟ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿದೆ ಎಂದು ಹೇಳಲಾಗುತ್ತಿದೆ.
ಹಾಸನಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ.. ಶೀಘ್ರದಲ್ಲೇ ಪಕ್ಷ ಕೂಡ ಅದನ್ನು ಘೋಷಿಸಲಿದೆ ಎಂದು ಭವಾನಿ ರೇವಣ್ಣ ಹೇಳಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಸನದಲ್ಲಿ ಭವಾನಿ ರೇವಣ್ಣ ಅವರಿಗಿಂತ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಹೇಳಿ ಭವಾನಿ ಅವರ ಎಂಎಲ್‌ಎ ಆಗುವ ಕನಸಿಗೆ ತಣ್ಣೀರು ಎರಚಿದ್ದರು. ಇದಾದ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದಲ್ಲಿ ಈ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪ್ರತಿ ಬಾರಿಯೂ ಭಾವನಿ ರೇವಣ್ಣ ಗೆ ಟಿಕೆಟ್ ತಪ್ಪಲು ಕಾರಣ ಏನು.?
ರೇವಣ್ಣ ರಾಜಕೀಯ ಪ್ರವೇಶದೊಂದಿಗೆ ಭವಾನಿ ರೇವಣ್ಣ ಅವರ ರಾಜಕೀಯಆಸೆಯೂ ಹೆಚ್ಚಾಗ ತೊಡಗಿದ್ದು, 1999ರಲ್ಲಿ ಎಚ್‌ಡಿ ರೇವಣ್ಣ ಸೋಲು ಕಾಣುತ್ತಾರೆ.. ಇದಾದ ಬಳಿಕ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಭವಾನಿ ರೇವಣ್ಣ ಹೊಳೆನರಸೀಪುರದಲ್ಲಿ ಮತ್ತೆ ಪಕ್ಷ ಸಂಘಟಿಸುತ್ತಾರೆ. 2004ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯನ್ನು ಎಚ್‌ಡಿ ದೇವೇಗೌಡರ ಬಳಿ ಭವಾನಿ ರೇವಣ್ಣ ವ್ಯಕ್ತಪಡಿಸಿದ್ದು, ತಮ್ಮ ತವರು ಕೆಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಭವಾನಿ ರೇವಣ್ಣ ರೆಡಿಯಾಗಿದ್ದರು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ, ಸಂಚಲನ ಸೃಷ್ಟಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕುಟುಂಬ ರಾಜಕಾರಣ ಎಂಬ ಕಾರಣ ನೀಡಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಯಿತು.
ಬಳಿಕ 2008 ಮತ್ತು 2013ರಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ನೀಡಲೇ ಇಲ್ಲ. 2018ರಲ್ಲಿ ಭವಾನಿ ರೇವಣ್ಣ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿಸೋದು ಫಿಕ್ಸ್ ಎನ್ನಲಾಗಿತ್ತು. ಆದರೆ, ಮತ್ತೆ ಕುಟುಂಬ ರಾಜಕಾರಣ ಎಂದು ಟಿಕೆಟ್ ನಿರಾಕರಿಸಲಾಗಿತ್ತು.
ಅದಾದ ಬಳಿಕ 2022ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಭವಾನಿ ರೇವಣ್ಣ ವ್ಯಕ್ತಪಡಿಸಿದ್ದರು. ಆದರೆ, ಆಗಲೂ ಭವಾನಿ ಅವರಿಗೆ ಟಿಕೆಟ್ ನಿರಾಕರಿಸಿ ಅವರ ಮಗ ಸೂರಜ್ ರೇವಣ್ಣಗೆ ಟಿಕೆಟ್ ನೀಡಿ ಭವಾನಿ ಅವರನ್ನು ರಾಜಕೀಯಕ್ಕೆ ಬರದಂತೆ ತಡೆಯಲಾಯಿತು.

ಖಾಸಗಿ ಹೋಟೆಲ್ ನಲ್ಲಿ ಸಹೋದರರ ರಹಸ್ಯ ಮಾತುಕತೆ
ಹಾಸನ ಟಿಕೆಟ್ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಭೇಟಿ ಆಗಿದ್ದಾರೆ. ಭವಾನಿ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ವಿಚಾರವಾಗಿಯೇ ಅಣ್ಣ- ತಮ್ಮನ ಮಧ್ಯೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಈ ಮಾತುಕತೆಯ ಬಳಿಕ ಪದ್ಮನಾಭನಗರದಲ್ಲಿ ಇರುವ, ದೇವೇಗೌಡರು ನಿವಾಸಕ್ಕೆ ರೇವಣ್ಣನವರು ಬಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜೊತೆಗೆ ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಹಾಸನದಲ್ಲಿ ಭವಾನಿ ಅವರಿಗೆ ಟಿಕೆಟ್ ನೀಡಲೇಬೇಕು. ಒಂದು ವೇಳೆ ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟರೆ ಯಾವ ಕಾರಣಕ್ಕೂ ಜೆಡಿಎಸ್ ಆ ಕ್ಷೇತ್ರದಲ್ಲಿ ಗೆಲ್ಲಲ್ಲ. ಅಷ್ಟೇ ಅಲ್ಲ, ಬಹಳ ಕ್ಷೇತ್ರದಲ್ಲಿ ಜೆಡಿಎಸ್ ಸ್ಥಿತಿ ಬಹಳ ಕಷ್ಟವಾಗುತ್ತದೆ. ಇನ್ನೂ ಮುಂದುವರಿದು, ಜೆಡಿಎಸ್ ಪಕ್ಷಕ್ಕೇ ಅಸ್ತಿತ್ವದ ಪ್ರಶ್ನೆ ಎದುರಾದರೂ ಅಚ್ಚರಿ ಇಲ್ಲ ಎಂಬ ಬಗ್ಗೆ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಸನದಲ್ಲಿ ಹೆಚ್ ಡಿ ರೇವಣ್ಣ ಅವರಿಗೆ ಹೊಸ ಕ್ಷೇತ್ರ.?
18 ವರ್ಷಗಳಿಂದ ಟಿಕೆಟ್ ಗಾಗಿ ಪ್ರಯತ್ನ ಪಡುತ್ತಿರುವ ಭವಾನಿ ರೇವಣ್ಣ 2023ರ ವಿಧಾನಸಭಾ ಚುನಾವಣೆಯಲ್ಲಿ ಶತ ಪ್ರಯತ್ನ ಮಾಡಿಯಾದರೂ ಈ ಬಾರೀ ಸ್ಪರ್ಧಿಸಲೇ ಬೇಕು ಎಂದು ಪಣ ತೊಟ್ಟಿದ್ದು, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ಭವಾನಿ ರೇವಣ್ಣ ಅವರನ್ನು ಸಮಾಧಾನ ಮಾಡುವುದರ ಸಲುವಾಗಿ ದೇವೇಗೌಡರು ಏನಾದರೂ ಸಂಧಾನ ಸೂತ್ರಗಳನ್ನು ಹಾಕುತ್ತಾರೋ ಅಥವಾ ಈಗಾಗಲೇ ಚರ್ಚೆಯಾಗುತ್ತಿರುವಂತೆ ಭವಾನಿ ರೇವಣ್ಣ ಅವರಿಗೆ ಹೊಳೆನರಸೀಪುರದ ಟಿಕೆಟ್, ಸ್ವರೂಪ್ ಹಾಸನಕ್ಕೆ ಹಾಗೂ ರೇವಣ್ಣ ಅವರನ್ನ ಕೆ.ಆರ್.ಪೇಟೆಗೆ ಹೋಗುತ್ತಾರೆ ಎಂಬ ಚರ್ಚೆ ಜೋರಾಗಿದೆ.

ಟಿಕೆಟ್ ಸಂಕಷ್ಟ; ಕುಕ್ಕೆ ಸುಬ್ರಹ್ಮಣ್ಯ ಮೊರೆ ಹೋದ ರೇವಣ್ಣ
ಇನ್ನೂ ಹಾಸನಕ್ಕೆ ಟಿಕೆಟ್ ಪಟ್ಟು ಹಿಡಿದಿರುವ ಭವಾನಿ ರೇವಣ್ಣ ಅವರ ಪರವಾಗಿ ಈಗಾಗಲೇ ಸೂರಜ್ ರೇವಣ್ಣ ತನ್ನ ತಾಯಿಯ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ. ಈ ಮಧ್ಯೆ ಕಳೆದ ಎರಡು ಮಂಗಳವಾರ ರೇವಣ್ಣ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸುತ್ತಿದ್ದಾರೆ.
ಅದಕ್ಕೂ ಮುಂಚೆ ಭವಾನಿ ಅವರು ತಿರುಪತಿಗೆ ಹೋಗಿ ಬಂದರು. ಇಂಥ ಸುಳಿವುಗಳೆಲ್ಲ ಟಿಕೆಟ್ಗಾಗಿ ಭವಾನಿ ರೇವಣ್ಣ ಅವರ ಶತ ಪ್ರಯತ್ನಗಳನ್ನೇ ಸೂಚಿಸುತ್ತವೆ. ಒಟ್ಟಾರೆಯಾಗಿ ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರದಲ್ಲಿಯೇ ಟಿಕೆಟ್ ಸಿಗುತ್ತಾ. ಅಥವಾ ರೇವಣ್ಣ ಅವರು ತಮ್ಮ ಕ್ಷೇತ್ರವನ್ನ ಬಿಟ್ಟು ಕೊಡುತ್ತಾರಾ ಇಲ್ವಾ ಎಂಬುದನ್ನ ಕಾದು ನೋಡಬೇಕಾಗಿದೆ.












Click it and Unblock the Notifications