Phone tapping: ಹನಿಟ್ರ್ಯಾಪ್ ಬೆನ್ನಲ್ಲೇ ಐವರು ಪ್ರಭಾವಿ ಸಚಿವರ ಫೋನ್ ಟ್ಯಾಪಿಂಗ್ ಆರೋಪ: ಯಾರವರು?
ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಹನಿಟ್ರ್ಯಾಪ್ ಸದ್ದು ಜೋರಾಗಿದೆ. ಪ್ರಭಾವಿ ಸಚಿವರಾದ ಕೆಎನ್ ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ನಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೇ ಇನ್ನೂ ಹಲವರ ಮೇಲೆ ಈ ಯತ್ನ ನಡೆದಿದೆ ಎಂದಿದ್ದಾರೆ. ಇದೀಗ ರಾಜ್ಯದಲ್ಲಿ ಟೆಲಿಫೋನ್ ಕದ್ದಾಲಿಕೆ ವಿಚಾರ ಕೂಡ ಸಖತ್ ಸದ್ದು ಮಾಡುತ್ತಿದೆ. ಸಚಿವರು, ಶಾಸಕರ ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದ್ದು, ಇತ್ತೀಚಿಗೆ ಈ ಬೆಳವಣಿಗೆ ನಡೆದಿದೆ ಎಂದು ಹಲವು ರಾಜಕಾರಣಿಗಳು ಅಳಲು ತೋಡಿಕೊಂಡಿದ್ದಾರೆ. ಹಾಗಾದ್ರೆ ಯಾರೆಲ್ಲ ಫೋನ್ ಟ್ಯಾಪಿಂಗ್ ಬಗ್ಗೆ ಹೇಳಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ..
ಹೌದು ಈ ಹಿಂದೆ ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈ ಫೋನ್ ಕದ್ದಾಲಿಕೆ ವಿಚಾರ ಸಂಚಲನ ಸೃಷ್ಟಿಸಿತ್ತು. ಆದರೆ, ಇದು ಈಗ ಮತ್ತೊಮ್ಮೆ ರಾಜ್ಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ರಾಜ್ಯ ಸರ್ಕಾರದ ಸಚಿವರ ಮೇಲೆ ರಾಜಕಾರಣಿಯಿಂದಲೇ ಹನಿಟ್ರ್ಯಾಪ್ ಆಗಿದೆ ಎನ್ನಲಾದ ವಿಚಾರವು ಚಾಲ್ತಿಯಲ್ಲಿರುವಾಗಲೇ ಇದೀಗ ರಾಜ್ಯ ಸರ್ಕಾರದ ಕೆಲ ಶಾಸಕರು ಹಾಗೂ ಸಚಿವರ ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಬೆಳವಣಿಗೆಗಳಿಂದ ಭಯಭೀತರಾಗಿರುವ ರಾಜಕಾರಣಿಗಳು ಫೋನ್ ಕರೆಗಳಲ್ಲಿ ಹೆಚ್ಚಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆಡಳಿತ ಪಕ್ಷದ ಶಾಸಕರು, ಸಚಿವರು ಕೂಡ ಪ್ರಮುಖರ ಗಮನಕ್ಕೆ ತಂದಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ ಸಿದ್ದರಾಮಯ್ಯ ಸಂಪುಟದ ಐದು ಮಂದಿ ಪ್ರಭಾವಿ ಸಚಿವರ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಫ ಕೇಳಿಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಎನ್ನಲಾದ ಸಚಿವರ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಹನಿಟ್ರ್ಯಾಪ್ ಸದ್ದಿನ ನಡುವೆಯೇ ಇದೀಗ ಫೋನ್ ಟ್ಯಾಪಿಂಗ್ ವಿಚಾರ ಅಬ್ಬರಿಸುತ್ತಿದೆ. ಕೇವಲ ಸಚಿವರಲ್ಲ, ಹಲವು ಶಾಸಕರ ಫೋನ್ ಕರೆಗಳನ್ನು ಕೂಡ ಕದ್ದಾಲಿಕೆ ಮಾಡಲಾಗಿದ್ದು, ಈ ಬಗ್ಗೆ ಅವರು ಹಲವರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ವಿಚಾರ ಜೋರಾಗಿ ಕೇಳಿಬಂದಿತ್ತು. ಈ ವೇಳೆ ಹಲವರ ಫೋನ್ ಟ್ಯಾಪಿಂಗ್ ಆಗಿತ್ತು ಎಂದು ಹೇಳಲಾಗಿತ್ತು. ಇದಾದ ಬಳಿಕ ಈ ವಿಚಾರ ಸೈಲೆಂಟ್ ಆಗಿತ್ತು. ಈಗ ಹನಿಟ್ರ್ಯಾಪ್ ವಿಚಾರ ಜೋರಾದ ನಡುವೆಯೇ ಫೋನ್ ಟ್ಯಾಪಿಂಗ್ ಕೂಡ ನಡೆದಿರುವ ಗುಸುಗುಸು ಕೇಳಿಬರುತ್ತಿದೆ. ಅದರಲ್ಲೂ ಆಡಳಿತ ಪಕ್ಷದ ಪ್ರಭಾವಿ ನಾಯಕರ ಫೋನ್ ಕದ್ದಾಲಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ನನ್ನ, ಕುಮಾರಸ್ವಾಮಿಯ ಫೋನ್ ಕೂಡ ಟ್ಯಾಪಿಂಗ್:
ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಪಕ್ಷ ಹಾಗೂ ವಿಪಕ್ಷ ನಾಯಕರ ಫೋನ್ ಟ್ಯಾಪ್ ಆಗುತ್ತಿರುವುದು ನೂರಕ್ಕೆ ನೂರು ಸತ್ಯ. ನನ್ನ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಫೋನ್ ಕದ್ದಾಲಿಕೆ ಸತ್ಯ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಈ ಬಗ್ಗೆ ನಾನು ಹಾಗೂ ಕುಮಾರಸ್ವಾಮಿ ಅವರು ಈ ಹಿಂದೆಯೇ ಹೇಳಿದ್ದೆವು. ಈಗ ಕಾಂಗ್ರೆಸ್ ಪಕ್ಷದವರೇ ಇದನ್ನು ಹೇಳಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications