ಪಿಜಿ ಪ್ರವೇಶ ಅಕ್ರಮ: ವೈದ್ಯರ ವಿರುದ್ಧದ ಸಿಬಿಐ ಪ್ರಕರಣ ರದ್ದಿಲ್ಲ
ಬೆಂಗಳೂರು, ಅಕ್ಟೋಬರ್ 25; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಹದಿನೇಳು ವರ್ಷಗಳ ಹಿಂದಿನ ಪಿಜಿ ಪ್ರವೇಶ ಅಕ್ರಮ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವೈದ್ಯರ ವಿರುದ್ಧ ಸಿಬಿಐ ಹೂಡಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
2006ರಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆಸಿದ ಪರೀಕ್ಷೆಯಲ್ಲಿಅಕ್ರಮವೆಸಗಿದ ಆರೋಪದ ಸಂಬಂಧ ಡಾ. ನೇಹಾ ಬನ್ಸಾಲ್ ವಿರುದ್ಧ ಸಿಬಿಐ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಈ ಪ್ರಕರಣ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಅರ್ಜಿ ವಜಾಗೊಳಿಸಿದೆ. ಪೂರ್ಣ ಪ್ರಮಾಣದ ವಿಚಾರಣೆ ನಡೆದು ಸತ್ಯಾಂಶ ಹೊರಬರಲಿ ಎಂದು ಆದೇಶಿಸಿರುವ ನ್ಯಾಯಾಲಯ ಅರ್ಜಿದಾರರ ವಾದವನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಾಸಿಕ್ಯೂಷನ್ ಆರೋಪಿಸಿರುವಂತೆ ಅರ್ಜಿದಾರರು ಲಿಖಿತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶವನ್ನು ಪಡೆದಿದ್ದಾರೆ. ನಂತರ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಕೆಲವು ಕಳಪೆ ವಿದ್ಯಾರ್ಥಿಗಳೂ ಸಹ ಅಧಿಕ ಅಂಕಗಳನ್ನು ಗಳಿಸಿರುವುದು ಕಂಡುಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆ ಹಿನ್ನೆಲೆಯಲ್ಲಿ ಸರ್ಕಾರ ಮಾಧ್ಯಮ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚನೆ ಮಾಡಿತ್ತು. ಆ ಸಮಿತಿ ಸ್ನಾತಕೋತ್ತರ ಕೋರ್ಸ್ ಪ್ರವೇಶ ಪರೀಕ್ಷೆಯಲ್ಲಿಎಲ್ಲವೂ ಸರಿಯಾಗಿ ನಡೆದಿಲ್ಲಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಾಗಾಗಿ ಸರ್ಕಾರ ಇದರ ಹಿಂದೆ ಏನೋ ಪಿತೂರಿ ಇದೆ ಎಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಸಿಬಿಐ ತನಿಖೆಯಲ್ಲಿ2005ರ ಜು.22ರಿಂದ 2007ರ ಜು.21ರವರೆಗೆ ಅಧಿಕಾರದಲ್ಲಿದ್ದ ವಿವಿಯ ಕುಲಪತಿ ಒಂದನೇ ಆರೋಪಿ, ರಿಜಿಸ್ಟ್ರಾರ್ ಎರಡನೇ ಆರೋಪಿ ಹಾಗೂ ಸಹಾಯಕ ರಿಜಿಸ್ಟ್ರಾರ್ ಡಾ. ಹನುಮಂತ ಪ್ರಸಾದ್ ಅವರು ಇತರೆ ಆರೋಪಿಗಳ ಜತೆ ಸೇರಿ ಪಿತೂರಿ ನಡೆಸಿದ್ದರು. ಅದರಂತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಕೆಲವು ವ್ಯಕ್ತಿಗಳಿಗೆ ಮಾತ್ರ ಲಭ್ಯವಾಗುವಂತೆ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲಾಗಿತ್ತು ಎಂದು ಸಿಬಿಐ ಹೇಳಿತ್ತು.
ಬಳಿಕ ಸಿಬಿಐ ಅರ್ಜಿದಾರರನ್ನು 8ನೇ ಆರೋಪಿಯನ್ನಾಗಿ ಮಾಡಿತ್ತು. ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್ 13(1)(ಡಿ) ಮತ್ತು 13(2) ಹಾಗೂ ಐಪಿಸಿ ಸೆಕ್ಷನ್ 409, 420 ಮತ್ತು 120 ಬಿಡಿ ಆರೋಪಗಳನ್ನು ಹೊರಿಸಲಾಗಿತ್ತು. ಅರ್ಜಿದಾರರು ತಮ್ಮ ವಿರುದ್ಧದ ಆರೋಪಗಳನ್ನು ಕೈ ಬಿಡುವಂತೆ ಕೋರಿದ್ದರು, ಆದರೆ ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಹೈಕೋರ್ಟ್ ಆದೇಶವೇನಿದೆ?; ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಲಾಗದು ಮತ್ತು ಅವರು ವಿಚಾರಣೆ ಎದುರಿಸಬೇಕು, ಅರ್ಜಿದಾರರು ಬೇಕಿದ್ದರೆ ಸಾಕ್ಷಿಗಳ ಹೇಳಿಕೆಯನ್ನು ಪ್ರಶ್ನಿಸಲಿ ಎಂದು ನ್ಯಾಯಾಲಯ ಹೇಳಿದೆ. ಮೊದಲು ಕಡಿಮೆ ಅಂಕಗಳನ್ನು ತೆಗೆದುಕೊಂಡಿದ್ದ 16 ಅಭ್ಯರ್ಥಿಗಳು ಹೇಗೆ ಪಿಜಿಇಟಿಯಲ್ಲಿ ಹೆಚ್ಚಿನ ಅಂಕ ತೆಗೆದುಕೊಂಡರು ಎಂದು ಆರೋಪಿಸಲಾಗಿದೆ. ಆದರೆ ಅರ್ಜಿದಾರರು ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಬೇರೆಯವರ ಜತೆ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು.












Click it and Unblock the Notifications