ಯಡಿಯೂರಪ್ಪ ಪದಚ್ಯುತಿಗೆ 'ಪೇಶ್ವಾ ವಂಶಸ್ಥರ' ಹುನ್ನಾರ: ಬಿಜೆಪಿ ಒಳಗಡೆಯೇ ಸಂಘರ್ಷ ಹುಟ್ಟುಹಾಕಲು ಎಚ್‌ಡಿಕೆ ತಂತ್ರ?
ಯಡಿಯೂರಪ್ಪ ಪದಚ್ಯುತಿಗೆ 'ಪೇಶ್ವಾ ವಂಶಸ್ಥರು' ಹಲವು ಬಾರಿ ಹುನ್ನಾರ ಮಾಡಿದ್ದರು. ಬಿಎಸ್‌ವೈ ಅವರನ್ನು ನಾನು ಉಳಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ಸಂದರ್ಭದವನ್ನು ನೆನಪಿಸಿಕೊಂಡಿದ್ದಾರೆ.
ಬೆಂಗಳೂರು, ಫೆಬ್ರವರಿ 10: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇವೆ. ಇಲ್ಲಿ ಮೂರು ಪಕ್ಷಗಳ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಆಮ್ ಆದ್ಮಿ ಪಕ್ಷವೂ ತನ್ನ ಅದೃಷ್ಟವನ್ನು ಪರೀಕ್ಷಿಸಲಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇದಕ್ಕೆ ಕಾರಣವಾಗಿದ್ದು, ಜೆಡಿಎಸ್ ನಾಯಕ ಕುಮಾರಸ್ವಾಮಿ ಆಡಿದ ಮಾತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಟೀಕಿಸುವ ನೆಪದಲ್ಲಿ ಕುಮಾರಸ್ವಾಮಿ ಹೊಸ ಸಂಘರ್ಷವೊಂದಕ್ಕೆ ನಾಂದಿ ಹಾಡಿದ್ದಾರೆ. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಕುಮಾರಸ್ವಾಮಿ ಹೇಳಿದ್ದೇನು?
ಪ್ರಲ್ಹಾದ್ ಜೋಶಿ ಅವರು ಜೆಡಿಎಸ್ ಪಕ್ಷದೊಳಗಿನ ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಕುಮಾರಸ್ವಾಮಿ, 'ಮಹಾರಾಷ್ಟ್ರ ಮೂಲದ ಪ್ರಲ್ಹಾದ್ ಜೋಶಿ ಅವರು ಪೇಶ್ವೆಗಳ ವಂಶದವರು. ಅವರನ್ನು ಮುಖ್ಯಮಂತ್ರಿ ಮಾಡಲು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಹುನ್ನಾರ ನಡೆಸಿದೆ. ಪೇಶ್ವೆಗಳು ಶಿವಾಜಿ ಮಹಾರಾಜರ ಸಾವಿಗೆ ಕಾರಣರಾದವರು. ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ ಗೋಡ್ಸೆ ಇದೇ ವಂಶಕ್ಕೆ ಸೇರಿದವನು. ಪೇಶ್ವೆಗಳು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದರು. ಅವರು ನಮ್ಮ ದಕ್ಷಿಣ ಕರ್ನಾಟಕದ ಬ್ರಾಹ್ಮಣರಂತೆ ಅಲ್ಲ' ಎಂದು ಹೇಳಿದ್ದಾರೆ.

ಗುರುವಾರ ಮತ್ತೆ ವಾಗ್ದಾಳಿ
ಕುಮಾರಸ್ವಾಮಿ ಅವರ ಬ್ರಾಹ್ಮಣ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕುತ್ತಿದಂತೆ ಬಿಜೆಪಿ ನಾಯಕರು ಕೆಂಡಾಮಂಡಲರಾದರು. ಈ ಹಿನ್ನೆಲೆಯಲ್ಲಿ ಎಚ್‌ಡಿಕೆ ಅವರ ಮೇಲೆ ಮುಗಿಬಿದ್ದರು. ಇದಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಎಚ್‌ಡಿಕೆ ಹೊಸದೊಂದು ದಾಳ ಉರುಳಿಸಿದ್ದಾರೆ. ಬಿಜೆಪಿಯ ಹಿರಿಯ ಲಿಂಗಾಯತ ನಾಯಕನ (ಯಡಿಯೂರಪ್ಪ) ರಾಜಕೀಯ ವೃತ್ತಿಜೀವನವನ್ನು ನಾನು ಉಳಿಸಿದ್ದೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಸ್ಥಾನದಿಂದ ಪದಚ್ಯುತಗೊಳಿಸಲು ಬಿಜೆಪಿಯಲ್ಲಿನ 'ಪೇಶ್ವಾ ವಂಶಸ್ಥರು' ಅನೇಕ ಬಾರಿ ಹುನ್ನಾರ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ನೆನೆದ ಎಚ್‌ಡಿಕೆ
2006 ರಲ್ಲಿ ರಚನೆಯಾದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯನ್ನು ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ. '20 ತಿಂಗಳ ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರೂ, ಪೇಶ್ವಾ ವಂಶಸ್ಥರ ಡಿಎನ್‌ಎ ಹೊಂದಿರುವವರು ಸರ್ಕಾರ ಪತನವಾಗುವುದನ್ನು ಖಾತ್ರಿಪಡಿಸಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ, 'ದೆಹಲಿಯಲ್ಲಿ ಬಿಜೆಪಿ ನಾಯಕರು, ಅದರಲ್ಲೂ ಪೇಶ್ವೆ ವಂಶದವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗದಂತೆ ತಡೆದರು' ಎಂದು ಜೆಡಿ (ಎಸ್) ನಾಯಕ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದಾಗಲೂ ಪೇಶ್ವೆ ವಂಶದವರು ಅವರನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ರಾಜಕೀಯ ಜೀವನವೇ ಕೊನೆಗೊಳ್ಳುತ್ತಿತ್ತು
'ನಾನು ಯಡಿಯೂರಪ್ಪ ಅವರೊಂದಿಗೆ ಕೈಜೋಡಿಸದಿದ್ದರೆ, ಅವರ ರಾಜಕೀಯ ಜೀವನವು ಕೊನೆಗೊಳ್ಳುತ್ತಿತ್ತು' ಅವರು ಹೇಳಿದರು. 'ಬಿಜೆಪಿಯಲ್ಲಿ ಅನುಭವಿಸಿದ ಅವಮಾನಗಳನ್ನು ಯಡಿಯೂರಪ್ಪ ನನ್ನೊಂದಿಗೆ ಹಂಚಿಕೊಂಡಿದ್ದರು. ಇನ್ನು ಮುಂದೆ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅವರು (ಬಿಜೆಪಿಗೆ) ರಾಜೀನಾಮೆ ನೀಡಲು ಬಯಸಿದ್ದರು. ಜೆಡಿಎಸ್ ಅವರನ್ನು ಸಚಿವರನ್ನಾಗಿ ಮಾಡಬಹುದೇ ಎಂಬುದಾಗಿ ನನ್ನನ್ನು ಕೇಳಿದ್ದರು' ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜೀನಾಮೆ ನೀಡದಂತೆ ಸಲಹೆ
ರಾಜೀನಾಮೆ ನೀಡದಂತೆ ಯಡಿಯೂರಪ್ಪನವರಿಗೆ ನಾನು ಸಲಹೆ ನೀಡಿದ್ದೆ. ಬದಲಿಗೆ, ಅವರ ಆಗಿನ ಸ್ಥಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂಬುದಾಗಿ ತಿಳಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದರು. ರಾಜಕೀಯ ಲಾಭಕ್ಕಾಗಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಯಡಿಯೂರಪ್ಪನವರ ಬಗ್ಗೆ ಅನುಕಂಪ ತೋರುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ನಡುವೆ ಈ ಹೇಳಿಕೆಗಳು ಬಂದಿವೆ.












Click it and Unblock the Notifications