ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ: ಸಿದ್ದರಾಮಯ್ಯ
ಕೊಪ್ಪಳ, ನವೆಂಬರ್ 20 : ಬಿಜೆಪಿಯವರು ನುಡಿದಂತೆ ನಡೆಯುವ ಪಕ್ಷ ಅಲ್ಲ. ಆದ್ದರಿಂದ ಅವರ ಯಾವ ಭರವಸೆಗಳನ್ನು ಜನರು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಕುರಿತು ಸೋಮವಾರ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಬಿಜೆಪಿಯವರು ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ, ಯಾವ ಪ್ರಗತಿಯನ್ನೂ ಸಾಧಿಸಿಲ್ಲ. ಈಗ ಪ್ರಗತಿ ಸಾಧಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ದಾರೆ. ಅವರ ಮಾತುಗಳನ್ನು ಜನರು ನಂಬುವುದಿಲ್ಲ ಎಂದರು.

ವಿದ್ಯುತ್ ಕಳ್ಳತನ ಎಸಗಿ ದಂಡ ಕಟ್ಟಿರುವ ಕುಮಾರಸ್ವಾಮಿಯವರಿಗೆ ನಮ್ಮನ್ನು ಅಪೇಕ್ಷಿಸಲು ಯಾವ ನೈತಿಕತೆಯೂ ಇಲ್ಲ. ಮಾಜಿ ಶಾಸಕ ಯತೀಂದ್ರರವರು ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆಯೇ , ಅವರ ಬಳಿ ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು. ಯತೀಂದ್ರರವರು ಸಿಎಸ್ ಆರ್ ಫಂಡ್ ಬಗ್ಗೆ ಮಾತನಾಡಿದ್ದರೆ, ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸುತ್ತಾರೆ. ಕುಮಾರಸ್ವಾಮಿಯವರ ಕಾಲದಲ್ಲಿ ವರ್ಗಾವಣೆಗಳ ಮೂಲಕ ದುಡ್ಡು ಮಾಡಿರುವುದು ಜಗಜ್ಜಾಹೀರವಾಗಿದೆ. ಅವರು ನಮ್ಮ ವಿರುದ್ದ ಆರೋಪಗಳನ್ನು ಮಾಡುವ ನೈತಿಕತೆ ಇಲ್ಲ ಎಂದರು.
ಬರ ಪರಿಹಾರದ ಕೆಲಸ ಪ್ರಾರಂಭವಾಗಿದೆ. ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ. ಮೇವಿಗೆ ಅಭಾವವಿಲ್ಲ, ಜನರಿಗೆ ಕೆಲಸ ಕೊಡು ಕೆಲಸವೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬರಗಾಲ ಬಂದಾಗ 150 ದಿನಗಳ ಕೆಲಸ ನೀಡುವುದು ಕಡ್ಡಾಯ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು. ಅನುಮತಿ ಕೋರಿ ನಾವು ಪತ್ರ ಬರೆದಿದ್ದು ಇಂದಿನವರೆಗೂ ಉತ್ತರ ಬಂದಿಲ್ಲ. ಕೇಂದ್ರ ಸರ್ಕಾರದ ಬರ ಅಧ್ಯಯನ ಕೇಂದ್ರ ಬಂದು ಹೋಗಿ ಒಂದು ತಿಂಗಳ ಮೇಲಾಗಿದ್ದರೂ ಇಂದಿನವರೆಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಎನ್.ಡಿ.ಆರ್‍ಎಫ್ ಮಾರ್ಗಸೂಚಿಯಲ್ಲಿ ಮಾರ್ಪಾಡು ತರಲು ಬರೆದಿರುವ ಪತ್ರಕ್ಕೂ ಕೆಂದ್ರದಿಂದ ಉತ್ತರವಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಕಾಯುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಮ್ಮ ಪಕ್ಷದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕಳೆದ 6 ತಿಂಗಳ ಅವಧಿಯಲ್ಲಿ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷದಂತೆ ಒಟ್ಟು 97.2 ಕೋಟಿಗೂ ಅಧಿಕ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಈ ವರೆಗೆ ಒಟ್ಟು ರೂ. 2,303 ಕೋಟಿ ಮೊತ್ತದ ಉಚಿತ ಟಿಕೆಟ್ ವಿತರಿಸಲಾಗಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶ.ಸಾಧಿಸಿದ್ದು ಹಲವು, ಸಾಗಬೇಕಾದ ಹಾದಿ ಬಹುದೂರ ಇದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ಜೊತೆಯಾಗಿ ಸಾಗೋಣ,ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸೋಣ.












Click it and Unblock the Notifications