ಅಭಿವೃದ್ಧಿ ಸಹಿಸದೇ ಮಾಡುತ್ತಿರುವ ಟೀಕೆಗಳಿಗೆ ಜನ ಸೊಪ್ಪು ಹಾಕಲ್ಲ: ಸಿಎಂ ಬೊಮ್ಮಾಯಿ
ಕರ್ನಾಟಕದಲ್ಲಿರುವ ಜನರು ಹೆಚ್ಚು ಪ್ರಬುದ್ಧತೆ ಹೊಂದಿದ್ದಾರೆ. ಇಲ್ಲಸಲ್ಲದ ಟೀಕೆ ಟಿಪ್ಪಣಿಗಳಿಗೆ ಸೊಪ್ಪು ಹಾಕುವುದಿಲ್ಲ. ಅಧಿಕಾರಕ್ಕೆ ಬರದವರ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಾಗಲಕೋಟೆ, ಫೆಬ್ರವರಿ 26: ಕರ್ನಾಟಕದಲ್ಲಿರುವ ಜನರು ಹೆಚ್ಚು ಪ್ರಬುದ್ಧತೆ ಹೊಂದಿದ್ದಾರೆ. ಇಲ್ಲಸಲ್ಲದ ಟೀಕೆ ಟಿಪ್ಪಣಿಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬನಹಟ್ಟಿ ಹೆಲಿಪ್ಯಾಡ್ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಕೃಷಿ, ನೀರಾವರಿ, ಔದ್ಯೋಗೀಕರಣ, ಸಾಮಾಜಿಕ ವಲಯ ಸೇರಿದಂತೆ ಎಲ್ಲಾ ವಲಯಗಳಲ್ಲಿ, ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ಇದನ್ನು ಸಹಿಸಲಾರದೆ ಆಧಾರ ರಹಿತವಾದ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಳೆದ 5 ವರ್ಷಗಳಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರ ಬಹಳಷ್ಟು ಪ್ರಗತಿಯನ್ನು ಹೊಂದಿ, ಎಲ್ಲಾ ರಂಗಗಳಲ್ಲಿಯೂ ಶಾಸಕ ಸಿದ್ದು ಸವದಿಯವರ ನೇತೃತ್ವದಲ್ಲಿ ಮುಂದುವರೆದಿದೆ. ಇದೇ ರೀತಿ ರಾಜ್ಯದ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿಯಾಗುತ್ತಿದೆ.
ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಮುಂದಿಟ್ಟು ನಾವು ಜನರ ಬಳಿಗೆ ಹೋಗುತ್ತೇವೆ. ಜನರು ನಮ್ಮ ಕೆಲಸ ಕ್ಕೆ ಬೆಲೆ ಕೊಡಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನಷ್ಟು ಕೆಲಸ ಆಗಬೇಕೆಂಬ ಸಂದೇಶವನ್ನು ಬಿಜೆಪಿಗೆ ಮತ ಹಾಕುವ ಮೂಲಕ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಭವಿಷ್ಯ ನುಡಿದ ಸಿಎಂ
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಸಿಎಂ ಸ್ಥಾನಕ್ಕೆ ಏರ್ಪಟ್ಟಿರುವ ಸ್ಪರ್ಧೆ ಕುರಿತು ಪ್ರತಿಕ್ರಿಯೆ ನೀಡಿ ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ಕರ್ನಾಟಕದ ಜನತೆ ಕಾಂಗ್ರೆಸ್ಸಿನ ಎಲ್ಲಾ ನಾಯಕರನ್ನು ಪರೀಕ್ಷೆ ಮಾಡಿ ಕೈಬಿಟ್ಟಿದ್ದಾರೆ. ಅಧಿಕಾರ ಕೊಟ್ಟು ಪರೀಕ್ಷೆ ಮಾಡಿದ್ದಾರೆ. ಅವರ ಆಡಳಿತದಲ್ಲಿ ಏನೆಲ್ಲಾ ನಡೆದಿದೆ ಎಂದು ಜನ ಮರೆತಿಲ್ಲ. ಅವರು ಮರೆತಿರಬಹುದು. ಹೀಗಾಗಿ ಅವರು ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅಧಿಕಾರಕ್ಕೆ ಬಾರದ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ ಎಂದು ಲೇವಡಿ ಮಾಡಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಪ್ರತಿ ಬಾರಿ ಬಂದಾಗಲೂ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿಗೆ ಉದ್ಘಾಟನೆ ಮಾಡಲು ಆಗಮಿಸಿದ್ದಾರೆ. ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ, ಸಾಮಾಜಿಕ ಮಹತ್ವವುಳ್ಳ ಲಂಬಾಣಿ ಜನಕ್ಕೆ ಹಕ್ಕುಪತ್ರ ವಿತರಣೆ, ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆ, ಜಲ್ ಜೀವನ್ ಮಿಷನ್ ಉದ್ಘಾಟನೆಗೆ ಬಂದಿದ್ದಾರೆ. ಪ್ರತಿ ಬಾರಿಯೂ ಉದ್ಘಾಟನಾ ಕೆಲಸಕ್ಕೆ ಬಂದಿದ್ದಾರೆ. ಈ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಕೆಟ್ ನಲ್ಲಿ ಅತಿ ಹೆಚ್ಚು ಕೇಂದ್ರದಿಂದ ನೆರವು ಬಂದಿದೆ. ರಾಜ್ಯವೂ ಕೂಡ ಅದಕ್ಕೆ ಸರಿಸಮಾನವಾಗಿ ಅನುದಾನ ಮೀಸಲಿಟ್ಟಿದೆ ಎಂದರು.
ತೇರದಾಳದಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿಲ್ಲವೆಂದು ಬಿಜೆಪಿ ಮುಖಂಡರು ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ಪಕ್ಷದ ಆಂತರಿಕ ವಿಚಾರಗಳನ್ನು ಮಾತನಾಡಿ ಸರಿಪಡಿಸಲಾಗುವುದು. ಸೋನಿಯಾ ಗಾಂಧಿ ನಿವೃತ್ತಿಯು ಅದು ಅವರ ಸ್ವಂತ ವಿಚಾರ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.












Click it and Unblock the Notifications