Old Pension scheme: ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರ ಗಮನಕ್ಕೆ
ಬೆಂಗಳೂರು, ಜುಲೈ 25: ಕರ್ನಾಟಕದಲ್ಲಿ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇಂತಹ ಸಂರ್ಭದಲ್ಲಿಯೇ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸ್ಪಷ್ಟನೆಯೊಂದನ್ನು ನೀಡಲಾಗಿದೆ.
1/4/2006 ಪೂರ್ವದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ನಿಯಮಾನುಸಾರ ಸೇರ್ಪಡೆಗೊಂಡ ಶಿಕ್ಷಕರನ್ನು ಹಳೆಯ ಪಿಂಚಿಣಿ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಹಿಂಬರಹವೊಂದು ಪ್ರಕಟವಾಗಿದೆ.

ಈ ಕುರಿತು ನಿರ್ದೇಶಕರು, ಪ್ರೌಢ ಶಿಕ್ಷಣ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ (ರಿ), 4ನೇ ಮುಖ್ಯ ರಸ್ತೆ, 5ನೇ ಅಡ್ಡರಸ್ತೆ ಕುಮಾರ ಪಾರ್ಕ್ ಪಶ್ಚಿಮ ಇವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಶಿಕ್ಷಕರಿಗೆ ಸ್ಪಷ್ಟನೆ ಏನು?; ಈ ಹಿಂಬರಹ 1/4/2006ರ ಪೂರ್ವದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ, ನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ನಿಯಮಾನುಸಾರ ಸೇರ್ಪಡೆಗೊಂಡ ಶಿಕ್ಷಕರನ್ನು ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆ ಹಳೆಯ ಪಿಂಚಣಿ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ವಿವಿಧ ಸರ್ಕಾರಿ ಆದೇಶಗಳನ್ನು ಉಲ್ಲೇಖ ಮಾಡಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶದಂತೆ ದಿನಾಂಕ 1/4/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಿಣಿ ಸೌಲಭ್ಯಕ್ಕೆ ಒಳಪಡಿಸುವ ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ.
ಈ ಕುರಿತು ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇವರು ಈ ಕಛೇರಿಗೆ ಮನವಿ ಸಲ್ಲಿಸಿ ದಿನಾಂಕ 1/4/2006ರ ಪೂರ್ವದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ತದನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ನಿಯಮಾನುಸಾರ ಸೇರ್ಪಡೆಗೊಂಡ ಶಿಕ್ಷಕರನ್ನು ಹಿಂದಿನ ಡಿಫೈನ್ಡ್ ಪಿಂಚಿಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲ ಮಾಡಿಕೊಡಬೇಕಾಗಿ ಕೋರಿರುತ್ತಾರೆ.
ಈ ಬಗ್ಗೆ ಪರಿಶೀಲಿಸಲಾಗಿದ್ದು, ಸರ್ಕಾರದ ಆದೇಶದಲ್ಲಿ ಸದರಿ ಸೌಲಭ್ಯವು ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುವ ಕುರಿತು ಸ್ಪಷ್ಟ ಪಡಿಸಿರುವುದರಿಂದ ಹಾಗೂ ಅನುದಾನಿತ ಶಾಲೆಗಳಲ್ಲಿ 1/4/2006ರ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸಿ ತದನಂತರ ಸರ್ಕಾರಿ ಪ್ರೌಢಶಾಲೆಗಳಲ್ಲಿ ನೇಮಕವಾದ ಶಿಕ್ಷಕರಿಗೆ ಅನ್ವಯವಾಗುವ ಕುರಿತು ಆದೇಶದಲ್ಲಿ ಉಲ್ಲೇಖಿಸಿರುವುದಿಲ್ಲವಾದ ಕಾರಣ ತಮ್ಮ ಮನವಿ ಪರಿಗಣಿಸಲು ಅವಕಾಶವಿರುವುದಿಲ್ಲವೆಂದು ತಿಳಿಸಿದೆ.
ಕರ್ನಾಟಕದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಎಲ್ಲಾ ನೌಕರರನ್ನು ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ರಾಷ್ಟ್ರೀಯ ಪಿಂಚಣಿ ಯೋಜನೆ (ಹೊಸ ಪಿಂಚಣಿ)ಯನ್ನು ಕೇಂದ್ರ ಮತ್ತು ವಿವಿಧ ರಾಜ್ಯದ ಸರ್ಕಾರಿ ನೌಕರರು ವಿರೋಧಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರ ಈಗಾಗಲೇ ದಿನಾಂಕ 01/04/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ಆದೇಶಿಸಿದೆ.
ಆದರೆ ಈ ಸೌಲಭ್ಯ ಸುಮಾರು 11 ಸಾವಿರ ನೌಕರರಿಗೆ ಮಾತ್ರ ಲಭ್ಯವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ಕಲಾಪದಲ್ಲಿ ಹಳೆ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಸುಮಾರು 2,65,715 ನೌಕರರು ಎನ್‌ಪಿಎಸ್ ವ್ಯಾಪ್ತಿಯಲ್ಲಿದ್ದಾರೆ. ಅಲ್ಲದೇ ಎನ್‌ಪಿಎಸ್ ಅಡಿ ಬರುವ 1169 ನೌಕರರು ಮೃತಪಟ್ಟಿದ್ದಾರೆ. 1463 ನೌಕರರು ನಿವೃತ್ತಿ ಹೊಂದಿದ್ದಾರೆ.
ಅಲ್ಲದೇ ಕರ್ನಾಟಕ ಸರ್ಕಾರ ಈಗಾಗಲೇ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿಯನ್ನು ರಚಿಸಿ ದಿನಾಂಕ 1/3/2023ರಂದು ಆದೇಶಿಸಿದೆ. ಸರ್ಕಾರವು ಸಮಿತಿಯ ವರದಿಯ ನಿರೀಕ್ಷೆಯಲ್ಲಿರುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications