Odisha Train Accident: ಕೊನೆಯ ಕ್ಷಣದಲ್ಲಿ ರೈಲು ತಪ್ಪಿಸಿಕೊಂಡ ಕರ್ನಾಟಕ ವಾಲಿಬಾಲ್ ತಂಡದ ಸದಸ್ಯರು
ಒಡಿಶಾದ ಬಾಲಸೋರ್ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದು, 900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರೈಲು ಅಪಘಾತದಲ್ಲಿ ಗಾಯಗೊಂಡಿರುವ, ದುರಂತದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಕರ್ನಾಟಕ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ, ಸಚಿವ ಸಂತೋಷ್ ಲಾಡ್ ಘಟನಾ ಸ್ಥಳಕ್ಕೆ ತೆರಳಿದ್ದು ಕನ್ನಡಿಗರನ್ನು ಸಂಪರ್ಕಿಸಿ ವಾಪಸ್ ಕರೆತರಲು ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ.
ಅಪಘಾತಕ್ಕೀಡಾಗಿರುವ ಹೌರಾ-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಕರ್ನಾಟಕ ವಾಲಿಬಾಲ್ ತಂಡದ ಆಟಗಾರರು ತೆರಳಬೇಕಿತ್ತು, ಆದರೆ ಅದೃಷ್ಟವಶಾತ್ ಅವರು ಕೊನೆಯ ಕ್ಷಣದಲ್ಲಿ ರೈಲು ತಪ್ಪಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.

ಕರ್ನಾಟಕ ಅಂಡರ್-16 ವಾಲಿಬಾಲ್ ತಂಡದ ಸದಸ್ಯರು ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳಬೇಕಿತ್ತು. ಆದರೆ ಕೆಲವು ಆಟಗಾರರ ಟಿಕೆಟ್‌ಗಳು ದೃಢೀಕರಣವಾಗದ ಕಾರಣ ಕೊನೆಯ ಕ್ಷಣದಲ್ಲಿ ರೈಲು ಹತ್ತದಿರಲು ತೀರ್ಮಾನಿಸಿದರು. ರೈಲು ಅಪಘಾತಕ್ಕೀಡಾದ ಸುದ್ದಿ ತಿಳಿದ ನಂತರ ಆಟಗಾರರು ತಾವು ಪ್ರಯಾಣ ಮಾಡದೇ ಇರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.
"ಸಂಜೆ 5 ಗಂಟೆಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಹೋಗಬೇಕಾಗಿತ್ತು, ತಂಡದ ಕೆಲವು ಸದಸ್ಯರ ಟಿಕೆಟ್‌ಗಳನ್ನು ದೃಢೀಕರಿಸದ ಕಾರಣ ರೈಲಿಗೆ ಹೋಗಲು ಸಾಧ್ಯವಾಗಲಿಲ್ಲ" ಎಂದು ತಂಡದ ಕೋಚ್ ಮಹದೇವಯ್ಯ ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ತಂಡ
ಕರ್ನಾಟಕ ವಾಲಿಬಾಲ್ ತಂಡದ 14 ಮಹಿಳಾ ಆಟಗಾರರು, ಕೋಚ್‌ಗಳು ಮತ್ತು ಸಹಾಯಕ ಸಿಬ್ಬಂದಿ ಮತ್ತು ಪರುಷರ ತಂಡದ 18 ಆಟಗಾರರು ಪಶ್ಚಿಮ ಬಂಗಾಳದ ಚಂದನ್ ನಗರದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮೇ 27 ರಿಂದ ಜೂನ್ 1ರವರೆಗೆ ಈ ಪಂದ್ಯಾವಳಿ ನಡೆದಿತ್ತು. ಜೂನ್ 2ರಂದು ಕರ್ನಾಟಕ ತಂಡದ ಸದಸ್ಯರು ವಾಪಸ್ ಬರಬೇಕಿತ್ತು.
ರೈಲು ನಿಲ್ದಾಣವನ್ನು ತಲುಪಿದ ನಂತರ ಕೆಲವು ಆಟಗಾರರ ಟಿಕೆಟ್ ಕನ್ಫರ್ಮ್ ಆಗದ ಕಾರಣ ಇಡೀ ತಂಡದ ಸದಸ್ಯರು ರೈಲು ಹತ್ತದಿರಲು ನಿರ್ಧರಿಸಿದರು. ಕೊನೆಯ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ವಾಲಿಬಾಲ್ ತಂಡದ ಸದಸ್ಯರ ಜೀವ ರಕ್ಷಿಸಿದೆ.
ವಿಮಾನದಲ್ಲಿ ವಾಪಸ್
ತುರ್ತು ಕೋಟಾದಡಿಯಲ್ಲಿ ಟಿಕೆಟ್ ಬುಕ್ ಮಾಡಿದ್ದರು ಅದು ರದ್ದಾಗಿತ್ತು. ಅನಿವಾರ್ಯವಾಗಿ ತಂಡದ ಸದಸ್ಯರು ರೈಲು ನಿಲ್ದಾಣದಲ್ಲೇ ಉಳಿಯಬೇಕಾಯಿತು. ಮಂಡ್ಯದ ರೈಲ್ವೆ ಉದ್ಯೋಗಿಯೊಬ್ಬರು ಅವರ ವಸತಿಗೃಹಕ್ಕೆ ಮಹಿಳಾ ಆಟಗಾರರನ್ನು ಕರೆದುಕೊಂಡುಹೋಗಿದ್ದರೆ, ಅವರ ಸಹೋದ್ಯೋಗಿ ಪುರುಷ ಆಟಗಾರರಿಗೆ ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದು ಮಹಿಳಾ ತಂಡದ ಸದಸ್ಯೆ ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕರ್ನಾಟಕ ತಂಡದ ಆಟಗಾರರ ಮಾಹಿತಿ ಪಡೆದ ಸಚಿವ ಸಂತೋಷ್ ಲಾಡ್ ಜೂನ್ 3ರಂದು ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ವಾಲಿಬಾಲ್ ತಂಡದ ಸದಸ್ಯರ ಜೊತೆ ಮಾತನಾಡಿ ಧೈರ್ಯ ತುಂಬಿದ್ದರು. ವಾಲಿಬಾಲ್ ತಂಡದಲ್ಲಿ ಬೆಂಗಳೂರು, ತುಮಕೂರು, ದಕ್ಷಿಣ ಕನ್ನಡ, ಹುಣಸೂರು, ಉಡುಪಿ ಮತ್ತು ರಾಯಚೂರಿನ ಆಟಗಾರರು ಸೇರಿದ್ದಾರೆ.












Click it and Unblock the Notifications